ಸಾರಾಂಶ
ಧಾರವಾಡ: ಕೋರೋನಾ ನಂತರ ನಾಟಕ ತಂಡಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ನಾಟಕ ಅಕಾಡೆಮಿ ಸದಸ್ಯರಾದ ಗಾಯತ್ರಿ ಹಡಪದ ಹೇಳಿದರು.
ಗುರುವಾರ ಸಂಜೆ ಇಲ್ಲಿಯ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಚಿಲಿಪಿಲಿ, ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ನಿಂಗು ಸೊಲಗಿಯವರ ನನ್ನಿನ್ನ ನಗಿ ನೋಡಿ ಕೃತಿಯ ರಂಗರೂಪ ದಾಂಪತ್ಯ ಗೀತ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ನಾಟಕಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವುದು ಬಹಳಷ್ಟು ಬೇಸರದ ಸಂಗತಿಯಾಗಿದೆ. ಒಳ್ಳೆಯ ನಾಟಕಗಳು ಬರುತ್ತಿಲ್ಲವೋ ಅಥವಾ ಪ್ರೇಕ್ಷಕರಿಂದ ನಾಟಕಗಳ ಬಗ್ಗೆ ಅಭಿರುಚಿ ಕಡಿಮೆಯಾಗಿದೋ ತಿಳಿಯುತ್ತಿಲ್ಲ. ಪ್ರೇಕ್ಷಕರ ವಿಮರ್ಶೆಗಳಿಂದ ನಾಟಕಗಳು ಹೊಸ ಹೊಳಪನ್ನು ಪಡೆದುಕೊಳ್ಳುತ್ತವೆ ಎನ್ನುವುದು ನನ್ನ ಭಾವನೆಯಾಗಿದೆ. ಅದು ಇನ್ನು ಹೆಚ್ಚೆಚ್ಚು ನಡೆಯಬೇಕಿದೆ ಎಂದರು.ಮುಂಬರುವ ದಿನಗಳಲ್ಲಿ ನಾಟಕ ಅಕಾಡೆಮಿಯಿಂದ ಇನ್ನಷ್ಟು ಹೊಸ ಯೋಜನೆ ಹಾಕಿಕೊಂಡಿದ್ದು, ಕಾಲೇಜು, ಮಕ್ಕಳು, ಹವ್ಯಾಸಿ ಹೀಗೆ ನಾಡಿನಾದ್ಯಂತ ನಾಟಕಗಳನ್ನು ಬೆಳೆಸುವ ಮೂಲಕ ಅಕಾಡೆಮಿ ಹೊಸ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದರು.
ಗದಗ ಜಿಪಂ ಮಾಜಿ ಅಧ್ಯಕ್ಷರಾದ ಶೋಭಾ ಮೇಟಿ ಮಾತನಾಡಿ, ಡಾ. ನಿಂಗು ಸೊಲಗಿ, ಕಲಾವತಿ ಕುಷ್ಟಗಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಎಂ. ಕಲುಬುರ್ಗಿ ರಾಷ್ಟ್ರೀಯ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ನಿಜವಾದ ಕಲೆ ಗ್ರಾಮೀಣ ಭಾಗದಲ್ಲಿ ಉಳಿದಿದೆ. ಪ್ರೇಮ ಪತ್ರಗಳನ್ನು ಇಟ್ಟುಕೊಂಡು ನಾಟಕ ರೂಪಿಸಿರುವುದು ರಾಜ್ಯದ ರಂಗಭೂಮಿಯಲ್ಲಿ ಇದೇ ಮೊದಲು ಎಂದರು.
ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಲಿಪಿಲಿ ಸಂಸ್ಥೆಯ ಜಗದೀಶ ಬರದೇಲಿ ಸ್ವಾಗತಿಸಿದರು. ಡಾ. ಬಾಳಣ್ಣ ಸೀಗಿಹಳ್ಳಿ, ಬಸವರಾಜ ಬೆಂಗೇರಿ, ಡಾ. ಪ್ರಕಾಶ ಗರುಡ, ಡಾ. ಶಶಿಧರ ತೋಡ್ಕರ, ಎಂ.ಎನ್. ಚಿಕ್ಕಮಠ, ಬಸವರಾಜ ಮುರಗೋಡ, ಪ್ರಕಾಶ ಮಲ್ಲಿಗವಾಡ ಇದ್ದರು.ಶ್ರುತಿ ಹುರುಳಿಕೊಪ್ಪ ನಿರುಪಿಸಿದರು. ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ನ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ವಂದಿಸಿದರು. ಮುಂಡರಗಿ ತಾಲೂಕಿನ ರಾಮೇನಹಳ್ಳಿಯ ಶಾಲೆಯ ವಿದ್ಯಾರ್ಥಿಗಳಿಂದ ರಾಧಾಕೃಷ್ಣನ್ ಅವರ ಕುರಿತ ಕೋಲಾಟ ನೃತ್ಯ ಜರುಗಿತು. ನಂತರ ಸಂಗಮ ಕಲಾ ತಂಡದಿಂದ ಮಾಹಾಂತೇಶ ರಾಮದುರ್ಗ ನಿರ್ದೇಶನದ ದಾಂಪತ್ಯಗೀತ ನಾಟಕ ಜರುಗಿತು.