ಹೊಸಪೇಟೆ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಹಾಗೂ ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದ ಸಂಸ್ಥಾಪಕ ಹಿರಿಯ ರಂಗಕರ್ಮಿ ಮ.ಬ. ಸೋಮಣ್ಣ (74) ಶುಕ್ರವಾರ ರಾತ್ರಿ ನಿಧನರಾದರು.

ಮೃತರಿಗೆ ಪುತ್ರ, ಸೊಸೆ, ಮೊಮ್ಮಗಳು ಸೇರಿದಂತೆ ಅಪಾರ ಬಂಧುಗಳಿದ್ದಾರೆ. ಅಂತ್ಯಸಂಸ್ಕಾರ ಹೊಸಪೇಟೆ ನಗರದ ಮುಕ್ತಿಧಾಮದಲ್ಲಿ ಶನಿವಾರ ಸಂಜೆ ನಡೆಯಿತು.

67 ವರ್ಷಗಗಳ ನಂಟು: ಕಲೆಯ ನಂಟು ಸೋಮಣ್ಣ ಅವರಿಗೆ ವಂಶ ಪಾರಂಪರ್ಯವಾಗಿ ಬಂದ ಬಳವಳಿ. ತಮ್ಮ 7ನೇ ವಯಸ್ಸಿನಿಂದಲೇ ರಂಗಭೂಮಿ ಪ್ರವೇಶ ಮಾಡಿದ ಅವರು, ಬಿಎ, ಬಿಎಡ್‌ ಪದವಿ ಪಡೆದು ಇದರೊಂದಿಗೆ ನಾಟಕ ಡಿಪ್ಲೋಮಾ ಸಹ ಪಡೆದುಕೊಂಡಿದ್ದರು. ಶಿಕ್ಷಕರಾಗಿ ಕಳೆದ 42 ವರ್ಷಗಳ ಸೇವೆ ಸಲ್ಲಿಸಿ, 2012ರಲ್ಲಿ ನಿವೃತ್ತಿ ಹೊಂದಿದ್ದರು. ಶಿಕ್ಷಕರ ವೃತ್ತಿ ಜೊತೆಗೆ ಹೆಚ್ಚು ಸಮಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕನ್ನಡ ಪಂಡಿತರಾಗಿ, ಸಂಗೀತ ಕಲಾವಿದರಾಗಿ, ರಂಗ ನಟರಾಗಿ, ನಿರ್ದೇಶಕರಾಗಿ, ನಾಟಕ ರಚನಾಕಾರರಾಗಿ, ರಂಗಪರಿಕರ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅಪ್ಪಟ ಗ್ರಾಮೀಣ ರಂಗ ಪ್ರತಿಭೆಯಾಗಿದ್ದರು. ನಟರಾಗಿ, ನಿರ್ದೇಶಕರಾಗಿ, ತಬಲಾ ವಾದಕರಾಗಿ, ರಂಗತಜ್ಞರಾಗಿ ಕಾಣಿಸಿಕೊಂಡಿದ್ದರು.

ಕರ್ನಾಟಕ ನಾಟಕ ಅಕಾಡೆಮಿಯ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಟಿಪಿ ಕೈಲಾಸಂ ಪ್ರಶಸ್ತಿ ಲಭಿಸಿದ್ದವು. ಕಮಲಾಪುರದಲ್ಲಿ ಹೊಸಪೇಟೆ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಊರುಕೇರಿ, ಶೀಲಾವತಿ, ಅವ್ವಣ್ಣೆವ್ವ, ಶಾಕುಂತಲ, ಸಂಚು, ಕರಿಭಂಟ, ವಿಶ್ವಬಂಧು ಬಸವಣ್ಣ ಇನ್ನೂ ಅನೇಕ ನಾಟಕಗಳನ್ನು ನಿರ್ದೇಶಿಸಿ ಉತ್ತಮ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ನಾಟಕದ ಜೊತೆಗೆ ವೀರಕೇಸರಿ, ದೈವಸಂಗಮ, ವಿದ್ಯಾವಂತ, ಶಿವನೊಲುಮೆ ಶಿಶು, ಸಮರ್ಪಣ, ಬಲಿ, ಇಂಗು ತಿಂದ ಮಂಗ, ಕುಸುಮ, ಊರಿಕೇರಿ, ಅರಣ್ಯರೋಧನ, ರಾಜಾ ರಾಮ ವಿಜಯ ನಾಟಕ ಹಾಗೂ ಗೀತ ನಾಟಕಗಳು, ಬೀದಿ ನಾಟಕಗಳು, ಸಂಗೀತ ಪ್ರವಚನ, ಸಣ್ಣ ಕಥೆಗಳು ಅಲ್ಲದೆ ಸುಮಾರು 600ಕ್ಕೂ ಹೆಚ್ಚು ರಂಗಗೀತೆಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.


67 ವರ್ಷಗಳಿಂದ ಸದಾ ಕ್ರಿಯಾಶೀಲರಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಾದರಸದಂತೆ ಈಗಲೂ ನಾಟಕಗಳ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು.