ರಕ್ತರಾತ್ರಿ ನಾಟಕ ಇಂದಿನ ಸಮಾಜಕ್ಕೂ ಹಿಡಿದ ಕನ್ನಡಿಯಾಗಿದೆ. ಹೀಗಾಗಿ, ನಾಟಕದಿಂದ ನಾವು ಕಲಿಯಬೇಕಾದದ್ದು ಬಹಷ್ಟಿದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕೂಡ್ಲಿಗಿ: ರಂಗಭೂಮಿಯಂತಹ ಕಲೆಗಳಿಗೆ ಜನತೆಯ ಬದುಕನ್ನು ಹಸನು ಮಾಡುವ ಶಕ್ತಿ ಇದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಮಹಾಭಾರತದ ಸನ್ನಿವೇಶವೊಂದನ್ನು ರಕ್ತರಾತ್ರಿ ನಾಟಕ ಮಾಡಿದ್ದು, ಈ ಪೌರಾಣಿಕ ನಾಟಕ ಇಡೀ ದೇಶದ ರಂಗಾಸಕ್ತರನ್ನು ಬೆರಗುಗೊಳಿಸುತ್ತದೆ. ರಕ್ತರಾತ್ರಿ ನಾಟಕ ಇಂದಿನ ಸಮಾಜಕ್ಕೂ ಹಿಡಿದ ಕನ್ನಡಿಯಾಗಿದೆ. ಹೀಗಾಗಿ, ನಾಟಕದಿಂದ ನಾವು ಕಲಿಯಬೇಕಾದದ್ದು ಬಹಷ್ಟಿದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕೂಡ್ಲಿಗಿಯ ಶ್ರೀ ವಿನಾಯಕ ಜ್ಯೋತಿ ಕಲಾ ಟ್ರಸ್ಟ್(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನರಸಿಂಹಗಿರಿಯಲ್ಲಿ ಆಯೋಜಿಸಿದ್ದ ರಕ್ತರಾತ್ರಿ ನಾಟಕ ಉದ್ಘಾಟಿಸಿ ಮಾತನಾಡಿದರು.

ನಾಟಕದಲ್ಲಿ ಸಾರ್ಥಕಗೊಳಿಸಿಕೊಳ್ಳುವ ಸನ್ನಿವೇಶಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ನಮ್ಮ ವ್ಯಕ್ತಿತ್ವ ಉತ್ತಮಗೊಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ನರಸಿಂಹಗಿರಿ ವೆಂಕಟೇಶ್ ಮಾತನಾಡಿ, ರಕ್ತರಾತ್ರಿ ನಾಟಕ ಕಲಾವಿದರಿಗೆ ಕೂಡ್ಲಿಗಿ ತಾಲೂಕಿನಲ್ಲಿ ಕೊರತೆಯಿಲ್ಲ. ಆದರೆ, ಕಲಾವಿದರ ಭವಿಷ್ಯಕ್ಕೆ ಆಸರೆಯಾಗುವ ಯೋಜನೆಗಳನ್ನು ಸರ್ಕಾರ, ಸಂಘ ಸಂಸ್ಥೆಗಳು ಮಾಡಬೇಕಿದೆ. ನಾಟಕಗಳು ಹಳ್ಳಿಗಾಡಿನ ಜನಜೀವನದ ಅವಿಭಾಜ್ಯ ಅಂಗವಾಗಿದ್ದು, ಸುಗ್ಗಿಯ ಸಮಯ ಬಂತೆಂದರೆ, ಹಬ್ಬ ಹರಿದಿನಗಳು ಬಂದರೆ ನಾಟಕಗಳು ರೈತರ ದಣಿವನ್ನು ನೀಗಿಸುತ್ತವೆ. ಜೊತೆಗೆ ರೈತರ, ಜನತೆಗೆ ಮನರಂಜನೆ ಜೊತೆಗೆ ಸಮಾಜದಲ್ಲಿ ಉತ್ತದ ದಾರಿಯಲ್ಲಿ ಬದುಕಲು ಪ್ರೇರಣೆಯಾಗುತ್ತವೆ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎನ್.ಟಿ. ತಮ್ಮಣ್ಣ ಮಾತನಾಡಿ, ಕೂಡ್ಲಿಗಿ ತಾಲೂಕು ಕಲೆಯ ರಂಗನಟಿಯರ ತವರೂರಾಗಿದ್ದು, ನಾಟಕಕಕ್ಕೆ ಇಲ್ಲಿಯ ಜನತೆ ತಲಾ ತಲಾಂತರಗಳಿಂದ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಇಂದಿನ ಆಧುನಿಕ ಕಾಲದಲ್ಲಿ ನಾಟಕಗಳು ಈಗಲೂ ಮಹತ್ವ ಪಡೆದುಕೊಂಡಿವೆ ಎಂದರು.

ಶ್ರೀ ವಿನಾಯಕ ಜ್ಯೋತಿ ಕಲಾ ಟ್ರಸ್ಟಿನ ಜಿ. ಜ್ಯೋತಿ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ರಕ್ತರಾತ್ರಿ ನಾಟಕ ಪ್ರದರ್ಶನ ಆಯೋಜಿಸಿದ್ದು, ಇದಕ್ಕೆ ಹಳ್ಳಿಯ ಜನತೆಯ ಸಹಕಾರ ಬಹಳ ಮುಖ್ಯ. ರಂಗಾಸಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ತಮ್ಮಣ್ಣ, ತಾಪಂ ಉಪಾಧ್ಯಕ್ಷ ನರಸಿಂಹಗಿರಿ ಮಂಜುನಾಥ, ರಂಗಭೂಮಿ ಸಂಗೀತ ಕಲಾವಿದರಾದ ಮಂಗನಹಳ್ಳಿ ಶೇಖರಪ್ಪ, ಎ. ಜಾತಪ್ಪ, ಬಿ.ಎಂ. ಮಲ್ಲಿಕಾರ್ಜುನಯ್ಯ ಗೆದ್ದಲಗಟ್ಟೆ, ಹಿರಿಯ ರಂಗನಟ ಚಿದಾನಂದ ಗವಾಯಿ, ಆದೋನಿ ವೀಣಾ, ಸೋಗಿ ನಾಗರತ್ನಮ್ಮ, ದಿವ್ಯಕುಮಾರಿ, ಮೌನೇಶ್ ಕಲ್ಲಹಳ್ಳಿ ಮುಂತಾದವರು ಉಪಸ್ಥಿತರಿದ್ದರು.