ಉಡುಪಿ: ಯುವಪೀಳಿಗೆಯಲ್ಲಿರುವ ಪ್ರತಿಭೆ ಅರಳಲು, ಯುವಜನತೆ ಸರಿಯಾದ ಮಾರ್ಗದಲ್ಲಿ ಮುನ್ನಡೆಯಲು ರಂಗಭೂಮಿ ಸಹಕಾರಿ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿನ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಂಗಚಟುವಟಿಕೆಗಳು ನಮ್ಮನ್ನು ಮಾನವೀಯಗೊಳಿಸುತ್ತವೆ, ದಾರಿ ತಪ್ಪದಂತೆ ಸರಿದಾರಿಯಲ್ಲಿ ಒಯ್ಯುತ್ತವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತದೆ ಎಂದ ಅವರು, ಸುಮನಸಾ ಸಂಸ್ಥೆಯ ಶಿಸ್ತು, ರಂಗ ಚಟುವಟಿಕೆ, ಸಮಾಜಮುಖಿ ಕಾರ್ಯಕ್ರಮಗಳು ಮಾದರಿಯಾದುದು. ಮಕ್ಕಳನ್ನು ಬೆಳೆಸುವ ಕ್ರಮವನ್ನು ಈ ಸಂಘಟನೆಯಿಂದ ಕಲಿಯಬೇಕು ಎಂದರು.

ರಂಗಸಾಧಕ ಸನ್ಮಾನ ಸ್ವೀಕರಿಸಿದ ಸಂಗೀತ ಗುರು ರಮೇಶ್ ಕೆ. ಪುತ್ತೂರು ಮಾತನಾಡಿ, ಸಂಗೀತ ಕಲಿಯುವುದು ನಮ್ಮ ಕಾಲದಲ್ಲಿ ಕಷ್ಟದ ಕೆಲಸವಾಗಿತ್ತು. ಈಗ ರೆಕಾರ್ಡ್ ಮಾಡಿಕೊಂಡು ಬಂದು ಹಾಡುತ್ತಾರೆ. ಕರೊಕೆ ಬಂದ ಮೇಲೆ ಹಾಡುಗಾರ ಬಿಟ್ಟರೆ ಬೇರೆ ಯಾವ ಪಕ್ಕವಾದ್ಯಗಳು ಬೇಡವಾಗಿವೆ ಎಂದು ಬೇಸರಿಸಿದರು. ಆದರೆ, ನನಗೆ ರಂಗಭೂಮಿ ಮತ್ತು ಸಂಗೀತ ಬದುಕು ಕಟ್ಟಿಕೊಟ್ಟಿದೆ ಎಂದು ಸ್ಮರಿಸಿದರು.

ಉದ್ಯಮಿಗಳಾದ ಸಾಧು ಸಾಲ್ಯಾನ್, ಮಹೇಶ್ ಶೆಣೈ, ಸಂತೋಷ್ ಶೆಟ್ಟಿ, ಜಿಲ್ಲಾ ಬಿಲ್ಲವ ಈಡಿಗ ಮಹಾ ಮಂಡಳದ ಅಧ್ಯಕ್ಷ ಚಂದ್ರಶೇಖರ ಕಾಪು, ಹಿಂದೂ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿದರು. ಶ್ರೀವತ್ಸ ವಂದಿಸಿದರು, ಗಣೇಶ್ ಸಗ್ರಿ ನಿರೂಪಿಸಿದರು.