ಕನ್ನಡಪ್ರಭ ವಾರ್ತೆ ಮದ್ದೂರು

ಕನ್ನಡ ರಂಗಭೂಮಿ ಅತ್ಯಂತ ಶ್ರೀಮಂತ ಮತ್ತು ಪ್ರಾಚೀನ ಪರಂಪರೆ ಹೊಂದುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಂಗಭೂಮಿ ಹಿರಿಯ ಕಲಾವಿದರ ಸಂಘದ ಅಧ್ಯಕ್ಷ ಮಹದೇವು ಹೇಳಿದರು. ಪಟ್ಟಣದ ಶಿವಪುರದ ಹೊಸಕೊಪ್ಪ ಸರ್ಕಲ್‌ನ ಸಂಘದ ಕಚೇರಿಯಲ್ಲಿ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ಕಲಾವಿದರನ್ನು ಅಭಿನಂದಿಸಿ ಮಾತನಾಡಿದ ಅವರು, ಮನುಷ್ಯನ ಬದುಕು, ಸಂಸ್ಕೃತಿ ಮತ್ತು ನೋವು ನಲಿವುಗಳನ್ನು ರಂಗಭೂಮಿ ಮೂಲಕ ಸಮಾಜಕ್ಕೆ ತಿಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ರಂಗಭೂಮಿ ಅಭಿವೃದ್ಧಿಗೆ ಹಿರಿಯ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ, ಏಳಗಿ ಬಾಳಪ್ಪ, ರಂಗಾಯಣ ರಘು ಹಾಗೂ ಉಮಾಶ್ರೀ ಸೇರಿದಂತೆ ಹಲವು ಹಿರಿಯ ಕಲಾವಿದರು ತಮ್ಮದೇ ಆದ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.

ತಾಲೂಕು ರಂಗಭೂಮಿ ಕಲಾವಿದರ ಸಂಘ ಕಳೆದ ಐದು ವರ್ಷಗಳಲ್ಲಿ ಹಲವು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡಿಸುವ ಜೊತೆಗೆ ಹೊಸ ಕಲಾವಿದರನ್ನು ಹುಟ್ಟು ಹಾಕಿದ ಕೀರ್ತಿಗೇ ಭಾಜನವಾಗಿದೆ. ಮುಂದಿನ ದಿನಗಳಲ್ಲಿ ಸಹ ರಂಗಭೂಮಿ ಕಲಾವಿದರ ಸಂಘ ಹೊಸಬರನ್ನು ರಂಗಕಲೆಯತ್ತ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಕೃಷ್ಣೇಗೌಡ, ಚೆನ್ನಪ್ಪ ಮತ್ತು ತಮ್ಮಯ್ಯ ಅವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೆ.ನಾಗರಾಜು, ವೀರಭದ್ರ ಚಾರ್, ಡಿ.ಎಂ.ಸತ್ಯ, ಗೌರಿ ಶಂಕರ್, ಆನಂದಾಚಾರಿ, ಸ್ವಾಮಿ ಭಾಗವಹಿಸಿದ್ದರು.


ಶೈಕ್ಷಣಿಕ ಕುಂದು ಕೊರತೆ: ಮುಖ್ಯ ಶಿಕ್ಷಕರಿಗೆ ಸನ್ಮಾನಮಂಡ್ಯ: ನಗರದ ಎಸ್‌.ಬಿ.ಸಮುದಾಯ ಭವನದಲ್ಲಿ ತಾಲೂಕು ದಕ್ಷಿಣ ವಲಯ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ಕುಂದು ಕೊರತೆ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಶಾಸಕ ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಕೇಳಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂಬುವ ಭರವಸೆ ನೀಡಿದರು. ಈ ವೇಳೆ ಶಿಕ್ಷಕರು ತಮ್ಮ ಶಾಲೆಗಳ ಸಂಬಂಧಪಟ್ಟಂತೆ ಶೌಚಾಲಯಗಳ ವ್ಯವಸ್ಥೆ, ಕಾಂಪೌಂಡ್ ನಿರ್ಮಾಣದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದರು.

ಮುಖ್ಯ ಶಿಕ್ಷಕರುಗಳನ್ನು ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಿಡಿಪಿ ಆದ ಯೋಗೇಶ್, ಬಿಇಒ ಮಹದೇವ, ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್, ಪ್ರಧಾನ ಕಾರ್ಯದರ್ಶಿ ಚಿಕ್ಕೇಗೌಡ, ಪ್ರಾಥಮಿಕ ಶಾಲೆಯ ಸಂಘದ ಅಧ್ಯಕ್ಷರಾದ ನಂದೀಶ್, ಕಾರ್ಯದರ್ಶಿ ಕೆ.ಬಿ.ನಾಗರಾಜ್, ಜಿಲ್ಲಾ ಅಧ್ಯಕ್ಷ ಕೆ.ವೈ.ಮಂಜುನಾಥ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.