ಸಾರಾಂಶ
-ಬಂಧಿತರಿಂದ ಅಂದಾಜು 7.83 ಲಕ್ಷ ರೂ. ಮೌಲ್ಯದ ಸ್ವತ್ತು ವಶ
-----ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಸಹೋದರರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಅಂದಾಜು 7.83 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.ಮಸಾಲೆ ವ್ಯಾಪಾರ ಮಾಡಿಕೊಂಡಿದ್ದ ಶಾಂತಿನಗರ ರಿಂಗ್ ರಸ್ತೆ ನಿವಾಸಿಗಳಾದ ಕಿರಣ್ ನಾಯ್ಕ(25 ವರ್ಷ), ವಿನೋದ್ ನಾಯ್ಕ(23 ವರ್ಷ) ಬಂಧಿತ ಸಹೋದರರು. ಕಳೆದ ಅ.26 ರಂದು ಬಿ.ಆರ್.ಕೌಶಿಕ್ ಅವರ ಮದುವೆ ಸಮಾರಂಭಕ್ಕೆಂದು ಬಂದಿದ್ದ ವೇಳೆ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಬಕ್ಕೇಶ್ವರ ಕಲ್ಯಾಣ ಮಂಟಪದ ಮಹಡಿ ರೂಮ್ ನಲ್ಲಿ ಇರಿಸಿದ್ದ ಚಿನ್ನಾಭರಣ ಬ್ಯಾಗ್ ಕಳ್ಳತನವಾಗಿರುವ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಹಾಗೂ ದಾವಣಗೆರೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ರಚಿಸಿದ್ದ ಪೊಲೀಸ್ ಇನ್ಸಪೆಕ್ಟರ್ ಎಂ.ಆರ್.ಚೌಬೆ ಹಾಗೂ ಸಿಬ್ಬಂದಿ ಒಳಗೊಂಡ ತಂಡವು ಆರೋಪಿ ಸಹೋದರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಧಿತರಿಂದ 5,32,000 ರೂ. ಮೌಲ್ಯದ 80 ಗ್ರಾಂ ತೂಕದ ಎರಡು ಎಳೆ ಬಂಗಾರದ ಮಾಂಗಲ್ಯ ಸರ, ಒಂದು ಎಳೆ ಬಂಗಾರದ ಚೈನ್, ಒಂದು ಜೊತೆ ಜುಮುಕಿ, ಕಳವು ಮಾಡಿದ ಬಂಗಾರದಲ್ಲಿ ಹೊಸದಾಗಿ ಖರೀದಿಸಿದ್ದ ತಾಳಿ, 2 ಉಂಗುರ, 3 ತಾಳಿ ಗುಂಡು, 24 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲು ಕಡಗ ಹಾಗೂ 1,25,000 ರೂ. ನಗದು ಹಣ, ಕೃತ್ಯಕ್ಕೆ ಬಳಸಿದ ಸ್ಕೂಟರ್, 7 ಮೊಬೈಲ್ ಫೋನ್ ಸೇರಿದಂತೆ ಒಟ್ಟು 7,83,000 ರೂ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಕಿರಣ್ ನಾಯ್ಕ ಈ ಹಿಂದೆ ಜಿಲ್ಲೆಯ ವಿದ್ಯಾನಗರ ಠಾಣೆಯ 5, ಬಡಾವಣೆ ಠಾಣೆಯ 4, ಗಾಂಧಿನಗರ, ಬಸವನಗರ ಹಾಗೂ ಕೆಟಿಜೆ ನಗರ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 12 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.