ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ತಾಮ್ರದ ತಗಡು ಕಳ್ಳತನ ನಡೆದಿರುವ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳ್ಳತನ ನಡೆದ ಪ್ರದೇಶಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್ ಭೇಟಿ ನೀಡಿದರು.
ಕಾರ್ಕಳ: ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ತಾಮ್ರದ ತಗಡು ಕಳ್ಳತನ ನಡೆದಿರುವ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳ್ಳತನ ನಡೆದ ಪ್ರದೇಶಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್ ಭೇಟಿ ನೀಡಿ, ಪಾರ್ಕ್‌ನ ಸದ್ಯದ ಸ್ಥಿತಿ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ವಿವಿಧ ವಿವಾದಗಳು, ಆರೋಪ–ಪ್ರತ್ಯಾರೋಪಗಳ ಹಿನ್ನೆಲೆ ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲ್ಪಟ್ಟಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯ ಮೇಲ್ಚಾವಣಿಯ ತಾಮ್ರದ ಹಲಗೆಗಳನ್ನು ದುಷ್ಕರ್ಮಿಗಳು ಬಾಗಿಲು ಒಡೆದು ಕಳ್ಳತನ ಮಾಡಿದ್ದಾರೆ. ಮೇಲ್ಚಾವಣಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಕಾರ್ಕಳದ ಇತಿಹಾಸದಲ್ಲಿ ಇದು ದುರ್ದೈವದ ಸಂಗತಿ. ಕಳ್ಳತನವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ ಎಂದು ಅವರು ಆರೋಪಿಸಿದರು.ಪರಶುರಾಮ ಥೀಮ್ ಪಾರ್ಕ್ ಪಾಳು ಬಿದ್ದಿರುವುದು ಅಸೂಯೆ ಮತ್ತು ರಾಜಕೀಯ ದ್ವೇಷದ ಫಲ ಎಂದು ಟೀಕಿಸಿದ ಅವರು, “ಇದು ನನ್ನ ಕನಸಿನ ಯೋಜನೆ. ಪ್ರವಾಸೋದ್ಯಮದ ದೃಷ್ಟಿಯಿಂದ ವಿಜೃಂಭಿಸಬೇಕಾಗಿದ್ದ ಈ ಸ್ಥಳ ಇಂದು ಗಿಡಗಂಟಿಗಳಿಂದ ತುಂಬಿ ನಿರ್ಜನವಾಗಿದೆ. ಇದನ್ನು ಈ ಸ್ಥಿತಿಗೆ ತಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು.
ತಕ್ಷಣವೇ ಹಣ ಬಿಡುಗಡೆ ಮಾಡಬೇಕು: ಬಿಜೆಪಿ ಸರ್ಕಾರ ಮಂಜೂರು ಮಾಡಿದ ನಾಲ್ಕೂವರೆ ಕೋಟಿ ರು. ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಅವರು, ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಥೀಮ್ ಪಾರ್ಕ್‌ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಬೇಕು. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಬೇಕು. ಅನಗತ್ಯ ಅಪಪ್ರಚಾರ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, “ಪರಶುರಾಮ ಪ್ರತಿಮೆ ಫೈಬರ್ ಅಲ್ಲ ಎಂಬುದು ಚಾರ್ಜ್‌ಶೀಟ್‌ನಲ್ಲೇ ಸ್ಪಷ್ಟವಾಗಿದೆ. ಅಭಿವೃದ್ಧಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಜಿಲ್ಲಾಡಳಿತ 2023ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಈಗಾದರೂ ಅನುಷ್ಠಾನ ಮಾಡಬೇಕು. ವಿವಾದಗಳು ಇಲ್ಲಿಗೆ ಮುಗಿದಂತಾಗಿದೆ, ಇನ್ನು ರಾಜಕೀಯ ಬೇಡ ಎಂದು ತಿಳಿಸಿದರು.11ರಂದು ಸಾವಿರಾರು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ ಎಂದು ಘೋಷಿಸಿದ ಅವರು, ಜಿಲ್ಲಾಡಳಿತ ಸ್ವಚ್ಛಗೊಳಿಸದಿದ್ದರೆ ನಾವೇ ಮಾಡುತ್ತೇವೆ. ಮಕರ ಸಂಕ್ರಾಂತಿಯ ದಿನದಿಂದ ಒಂದು ತಿಂಗಳು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಇಲಾಖೆ ಮಾಡದಿದ್ದರೆ ನಾವೇ ಮಾಡುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಧಾರಿಗಳ ಮೇಲೆ ನಡೆದ ಹಲ್ಲೆ, ಕೋಗಿಲು ಬಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಣೆ, ದ್ವೇಷ ಭಾಷಣ ಮಸೂದೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಕುರಿತು ಕೂಡ ಸುನಿಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ನಿರಂತರ ಅವಹೇಳನ:“ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದೂ ಭಾವನೆಗಳ ಮೇಲೆ ನಿರಂತರ ಅವಹೇಳನ ನಡೆಯುತ್ತಿದೆ. ಇದು ಸರ್ಕಾರದ ತುಷ್ಟೀಕರಣ ನೀತಿಯ ಪರಿಣಾಮ ಎಂದು ಆರೋಪಿಸಿದರು.
“ಪ್ರತಿಭಟನೆಗೆ ಅನುಮತಿ ನೀಡದ ಸರ್ಕಾರ ಇದು. ಇದು ಸರ್ವಾಧಿಕಾರದ ಧೋರಣೆ. ಅಧಿಕಾರ ಶಾಶ್ವತವಲ್ಲ, ಮುಂದಿನ ದಿನಗಳಲ್ಲಿ ನಾವು ಪ್ರಶ್ನೆ ಮಾಡುತ್ತಲೇ ಇರುತ್ತೇವೆ” ಎಂದು ಎಚ್ಚರಿಕೆ ನೀಡಿದರು.---------------------------------ಎರಡನೇ ಬಾರಿ ಕಳ್ಳತನ: ಕಾಂಗ್ರೆಸ್ ಗಂಭೀರ ಆರೋಪ
ಕಾರ್ಕಳದ ಬೈಲೂರು ವ್ಯಾಪ್ತಿಯ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಎರಡನೇ ಬಾರಿ ಕಳ್ಳತನ ನಡೆದಿದ್ದು, ಇದಕ್ಕೆ ಆರಂಭದಲ್ಲೇ ನಡೆದ ಅಕ್ರಮಗಳೇ ಕಾರಣವೆಂದು ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಆರೋಪಿಸಿದ್ದಾರೆ. ಈ ಬಗ್ಗೆ ಅವರು, ಮೊದಲ ಕಳ್ಳತನದ ವೇಳೆ ಕಂಚಿನ ಪ್ರತಿಮೆಯ ಬದಲು ಫೈಬರ್ ಮಿಶ್ರಿತ ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿ ಅದರ ಸೊಂಟದ ಮೇಲ್ಭಾಗವನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ವಿ. ಸುನೀಲ್ ಕುಮಾರ್ ಮೌನ ವಹಿಸಿದ್ದೇ ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.ಇತ್ತೀಚಿನ ಕಳ್ಳತನದಲ್ಲಿ ಥೀಮ್ ಪಾರ್ಕ್‌ನ ಉಳಿದ ಬಿಡಿಭಾಗಗಳನ್ನು ಕಳ್ಳರು ಕಳವು ಮಾಡಿದ್ದು, ಮೊದಲ ಕಳ್ಳತನದ ಬಳಿಕ ಸೂಕ್ತ ಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಕಾರಣವೆಂದು ಅವರು ಹೇಳಿದ್ದಾರೆ. ಕೋಟ್ಯಂತರ ರು. ಸರ್ಕಾರಿ ಅನುದಾನ ದುರುಪಯೋಗಗೊಂಡಿದ್ದು, ಇದರ ಪರಿಣಾಮವಾಗಿ ಕಾರ್ಕಳದ ಕನಸಿನ ಪ್ರವಾಸಿ ತಾಣ ಹಾಳಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಸುನೀಲ್ ಕುಮಾರ್ ಜನತೆಯ ಕ್ಷಮೆ ಯಾಚಿಸಬೇಕು ಹಾಗೂ ಕಳ್ಳರನ್ನು ಬಂಧಿಸಿ ಸಾರ್ವಜನಿಕ ಆಸ್ತಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.