ಕಳ್ಳತನ: 9 ಲಕ್ಷಕ್ಕೂ ಅಧಿಕ ಬೆಲೆಯ ವಸ್ತು ಜಪ್ತಿ

| Published : Jan 12 2025, 01:15 AM IST

ಸಾರಾಂಶ

ವಿವಿಧ ಗ್ರಾಮಗಳಲ್ಲಿ ಮನೆಗಳ್ಳತನ ಹಾಗೂ ಗದ್ದನಕೇರಿ ಕ್ರಾಸ್‌ನಲ್ಲಿ ನಡೆದ ಬಂಗಾರ ಸರಗಳ್ಳತನದ ಪ್ರಕರಣವನ್ನು ಭೇದಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಲ್ಲಿ ಕಲಾದಗಿ ಪೊಲೀಸ್ ಪಡೆ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಇಲ್ಲಿನ ವಿವಿಧ ಗ್ರಾಮಗಳಲ್ಲಿ ಮನೆಗಳ್ಳತನ ಹಾಗೂ ಗದ್ದನಕೇರಿ ಕ್ರಾಸ್‌ನಲ್ಲಿ ನಡೆದ ಬಂಗಾರ ಸರಗಳ್ಳತನದ ಪ್ರಕರಣವನ್ನು ಭೇದಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಲ್ಲಿ ಕಲಾದಗಿ ಪೊಲೀಸ್ ಪಡೆ ಯಶಸ್ವಿಯಾಗಿದೆ.

ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಗಂಗಾಧರ ಶಂಕ್ರಪ್ಪ ಇಂಗಳಗಿ (30), ಕರೆಪ್ಪ ಕಲ್ಲಪ್ಪ ತಳವಾರ (28) ಬಂಧಿತ ಆರೋಪಿಗಳು. ಬಂಧಿತರಿಂದ 114 ಗ್ರಾಂ ತೂಕದ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ ಬೈಕ್ ಸೇರಿ ಒಟ್ಟು ₹9,49,200 ಬೆಲೆಯ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವನಾಳ ಪುನರ್ವಸತಿ ಕೇಂದ್ರದಲ್ಲಿ ಹಾಗೂ ಖಜ್ಜಿಡೋಣಿ ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ ಹಾಗೂ ಗದ್ದನಕೇರಿ ಕ್ರಾಸ್‌ನಲ್ಲಿ ಊರಿಗೆ ತೆರಳು ನಿಂತಿದ್ದ ವ್ಯಕ್ತಿಯೋರ್ವನನ್ನು ಗ್ರಾಮಕ್ಕೆ ಕರೆದೊಯ್ಯುವುದಾಗಿ ಹೇಳಿ ಮೋಟಾರ್‌ ಸೈಕಲ್ ಮೇಲೆ ಹತ್ತಿಸಿಕೊಂಡು ಹೋಗಿ ತುಸು ದೂರದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಗಳು ದಾಖಲಾಗಿದ್ದವು.

ದಾಖಲಾದ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನಲ್ಲಿ ಬಾಗಲಕೋಟೆ ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ಕಲಾದಗಿ ಠಾಣೆ ಪಿಎಸೈ ಚಂದ್ರಶೇಖರ ಹೇರಕಲ್ ಹಾಗೂ ಅಪರಾಧ ವಿಭಾಗದ ಪಿಎಸೈ ನೂರಜನ ಸಾಬರ ಹಾಗೂ ಸಿಬ್ಬಂದಿ ಸಿ.ವಾಯ್.ಭಜಂತ್ರಿ, ವಿ.ಬಿ.ಮಠ, ಗದ್ದೆಪ್ಪ.ಎ.ಎಂ, ಎಸ್.ಕೆ.ಕುರಿ ಒಳಗೊಂಡ ಪೊಲೀಸ್‌ ತಂಡ ತ್ವರಿತ ಕಲಾವಧಿಯಲ್ಲಿ ಪತ್ತೆ ಮಾಡಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ. ಯಶಸ್ವಿ ಪೊಲೀಸ್ ತಂಡಕ್ಕೆ ಬಾಗಲಕೋಟೆ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿ, ಬಹುಮಾನ ಘೋಷಿಸಿದ್ದಾರೆ ಎಂದು ಬಾಗಲಕೋಟೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ತಿಳಿಸಿದ್ದಾರೆ. ಈ ವೇಳೆ ಬಾಗಲಕೋಟೆ ಉಪವಿಭಾಗ ಪ್ರಭಾರ ಡಿವೈಎಸ್ಪಿ ಮಂಜುನಾಥ ಗಂಗಲ್ ಇದ್ದರು.