ಮತ ಪೆಟ್ಟಿಗೆಗಳ ಕಳ್ಳತನ: ಐವರು ಆರೋಪಿಗಳ ಬಂಧನ

| Published : Nov 18 2024, 12:05 AM IST

ಸಾರಾಂಶ

ಚುನಾವಣೆಗೆ ಸಂಬಂಧಿಸಿದ ಹಳೆಯ ಮತ ಪೆಟ್ಟಿಗೆಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಭಾನುವಾರ ಸಂಬಂಧಿಸಿದ ಸ್ಥಳೀಯ ಶಹರ ಠಾಣೆ ಪೊಲೀಸರು ೧೭ ಮತ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾವೇರಿ: ಚುನಾವಣೆಗೆ ಸಂಬಂಧಿಸಿದ ಹಳೆಯ ಮತ ಪೆಟ್ಟಿಗೆಗಳನ್ನು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಭಾನುವಾರ ಸಂಬಂಧಿಸಿದ ಸ್ಥಳೀಯ ಶಹರ ಠಾಣೆ ಪೊಲೀಸರು ೧೭ ಮತ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.ಸ್ಥಳೀಯ ಗುತ್ತಲ ರಸ್ತೆಯ ವಿಜಯ ನಗರ ಬಡಾವಣೆ ನಿವಾಸಿ ಸಂತೋಷ ರಂಗಪ್ಪ ಮಾಳಗಿ, ತಾಲೂಕಿನ ಯತ್ತಿನಹಳ್ಳಿಯ ಗಣೇಶ ರೇಣವ್ವ ಹರಿಜನ, ಕೃಷ್ಣ ಮಲ್ಲಪ್ಪ ಹರಿಜನ, ಪುರದ ಓಣಿಯ ಮುತ್ತಪ್ಪ ನೀಲಪ್ಪ ದೇವಿಹೊಸೂರು, ಮಕಾನಗಲ್ಲಿಯ ಮಹಮ್ಮದ್ ಜಾವಿದ ಅಬ್ದುಲ್ ಸತ್ತರಸಾಬ ಮಕಾನದಾರ ಬಂಧಿತ ಆರೋಪಿಗಳು. ಇವರಿಂದ ಪ್ರಕರಣ ದಾಖಲಾದ ದಿನದಂದು ೧೦ ಸೇರಿದಂತೆ ೨೭ ಕಬ್ಬಿಣದ ಹಳೆ ಮತ ಪೆಟ್ಟಿಗೆಗಳು, ಒಂದು ಆಟೋ ವಶಪಡಿಸಿಕೊಳ್ಳಲಾಗಿದೆ.ಇವರು ನಗರದ ಎಪಿಎಂಸಿ ಗೋದಾಮಿನಲ್ಲಿ ಇಟ್ಟಿದ್ದ ಖಾಲಿ ಮತ ಪೆಟ್ಟಿಗೆಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಅಲ್ಲದೆ ಕೆಲ ಮತ ಪೆಟ್ಟಿಗೆಗಳನ್ನು ರಸ್ತೆ ಬದಿ ಒಗೆದು ಹೋಗಿದ್ದರು. ಈ ಕುರಿತು ಶಿರಸ್ತೇದಾರ್‌ ಸೈಯ್ಯದ ದೂರು ನೀಡಿದ್ದರು.ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಖಾಲಿ ಮತಪೆಟ್ಟಿಗೆಗಳನ್ನು ಜಪ್ತಿ ಮಾಡಿದ್ದಾರೆ. ಶಹರ ಠಾಣೆ ಪಿಐ ಮೋತಿಲಾಲ್ ಪವಾರ, ಪಿಎಸ್‌ಐ ಪಿ.ಡಿ. ಆರೇರ, ಎಂ.ಕೆ. ಸೊರಟೂರ, ಸಿಬ್ಬಂದಿ ಚಂದ್ರಕಾಂತ ಎಲ್.ಆರ್., ಸುರೇಂದ್ರ ಸವದಿ, ಮಾಲತೇಶ ಕಬ್ಬೂರು ಕಾರ್ಯಾಚರಣೆಯಲ್ಲಿದ್ದರು.ಶಿಗ್ಗಾಂವಿ-ಸವಣೂರು ಉಪ ಚುನಾವಣೆ ಬೆನ್ನಲ್ಲೇ ಹಳೆಯ ದುರಸ್ತಿಯಲ್ಲಿದ್ದ ಕಬ್ಬಿಣದ ಮತಪೆಟ್ಟಿಗೆಗಳು ರಸ್ತೆ ಬದಿ ದೊರೆತಿದ್ದ ಕಾರಣ ಜಿಲ್ಲೆಯಲ್ಲಿ ಪ್ರಕರಣ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.