ಸಾರಾಂಶ
ಸಿಸಿ ಕ್ಯಾಮರಾದ ದೃಶ್ಯಾವಳಿಗಳಿರುವ ಡಿವಿಡಿಆರ್ ಕಿತ್ತೊಯ್ದಿದ್ದು, ಯಾವುದೋ ನಿರ್ಮಾಣ ಹಂತದ ಕಾಮಗಾರಿಗೆ ಪೂರೈಸುವ ಸಲುವಾಗಿ ಕಳ್ಳತನ ನಡೆಸಲಾಗಿದೆ ಎಂಬ ಶಂಕೆ ಮೂಡಿದೆ.
ಉಪ್ಪಿನಂಗಡಿ : ಇಲ್ಲಿನ ಗಾಂಧೀಪಾರ್ಕ್ ಹಿರೆಬಂಡಾಡಿ ಕ್ರಾಸ್ ಬಳಿಯ ಶ್ರೀ ಮಹಾಲಕ್ಷ್ಮೀ ಟ್ರೇಡಿಂಗ್ ಕಂಪನಿ ಸಂಸ್ಥೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ. ಸಂಸ್ಥೆಯ ಮುಂಭಾಗದ ಬೀಗ ಮುರಿದು ಒಳನುಗ್ಗಿದ ಕಳ್ಳರು ೪ ಲಕ್ಷಕ್ಕೂ ಮಿಗಿಲಾದ ಬೆಲೆಬಾಳುವ ಹಿತ್ತಾಳೆಯ ಪೈಪು, ಬಿಡಿಭಾಗಳ ಸಹಿತ ಹಲವು ಸಾಮಗ್ರಿಗಳನ್ನು ಹಾಗೂ ನಗದು ಹಣವನ್ನೂ ದೋಚಿ ಪರಾರಿಯಾಗಿದ್ದಾರೆ.
ಕಳ್ಳರು ಸಂಸ್ಥೆಯೊಳಗಿರುವ ಅಗಾಧ ಪ್ರಮಾಣದ ವಿವಿಧ ಸೊತ್ತುಗಳ ಪೈಕಿ ತಮಗೆ ಬೇಕಾಗುವ ಬೆಲೆ ಬಾಳುವ ಸೊತ್ತುಗಳನ್ನು ಗುರುತಿಸಲು ಸುಲಭವಾಗಲೆಂದು ಶುಕ್ರವಾರ ಸಂಜೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಸಂಸ್ಥೆಯೊಳಗೆಲ್ಲಾ ಸುತ್ತಾಡಿ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸುವ ನಟನೆ ಮಾಡಿ ಏನನ್ನೂ ಖರೀದಿಸದೆ ಹಿಂತಿರುಗಿದ್ದರು. ಶನಿವಾರ ನಸುಕಿನ ವೇಳೆಯಲ್ಲಿ ಸಂಸ್ಥೆಗೆ ನುಗ್ಗಿದ ಕಳ್ಳರು ಹಿಂದಿನ ದಿನ ಗುರುತಿಸಿದ ವಸ್ತುಗಳನ್ನೇ ಕದ್ದೊಯ್ದಿರುವುದರಿಂದ ಗ್ರಾಹಕರ ಸೋಗಿನಲ್ಲಿ ಬಂದವರ ಮೇಲೆ ಅನುಮಾನ ಮೂಡಿದೆ.ಸಿಸಿ ಕ್ಯಾಮರಾದ ದೃಶ್ಯಾವಳಿಗಳಿರುವ ಡಿವಿಡಿಆರ್ ಕಿತ್ತೊಯ್ದಿದ್ದು, ಯಾವುದೋ ನಿರ್ಮಾಣ ಹಂತದ ಕಾಮಗಾರಿಗೆ ಪೂರೈಸುವ ಸಲುವಾಗಿ ಕಳ್ಳತನ ನಡೆಸಲಾಗಿದೆ ಎಂಬ ಶಂಕೆ ಮೂಡಿದೆ.
ಸಂಸ್ಥೆಯ ಮಾಲಕ ಜಗದೀಶ್ ನಾಯಕ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.