ಥೀಂ ಪಾರ್ಕ್ ವಿವಾದ-ಕಾಂಗ್ರೆಸ್ ಮೇಲೆ ಬಿಜೆಪಿ ವೃಥಾರೋಪ: ಭಂಡಾರಿ, ಮೂರ್ತಿಯ ಭಾಗಗಳನ್ನು ಹಂಚುತ್ತಿರುವ ಕೈ ಪಾಳಯ!
KannadaprabhaNewsNetwork | Published : Oct 20 2023, 01:00 AM IST
ಥೀಂ ಪಾರ್ಕ್ ವಿವಾದ-ಕಾಂಗ್ರೆಸ್ ಮೇಲೆ ಬಿಜೆಪಿ ವೃಥಾರೋಪ: ಭಂಡಾರಿ, ಮೂರ್ತಿಯ ಭಾಗಗಳನ್ನು ಹಂಚುತ್ತಿರುವ ಕೈ ಪಾಳಯ!
ಸಾರಾಂಶ
ಕಾಂಗ್ರೆಸ್ ಪಕ್ಷ ಪರಶುರಾಮ ಥೀಂ ಪಾರ್ಕ್ ಹೆಸರಿನಲ್ಲಿ ಅಭಿವೃದ್ಧಿಗೆ ಅಡ್ಡಗಾಲು ಇಡುತ್ತಿದೆ ಎಂದು ಬಿಜೆಪಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಕಾರ್ಯಕರ್ತರು ಪರಶುರಾಮ ಮೂರ್ತಿಯ ಪಿಒಪಿ ತುಂಡುಗಳನ್ನು ಹಂಚುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರದೇಶವು ಗೋಮಾಳ ಜಾಗವಾಗಿದ್ದ ಕಾರಣ ಅಂದಿನ ಬಿಜೆಪಿ ಸರ್ಕಾರ ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಹೀಗಿದ್ದರೂ ಕೂಡ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ ಕಾರ್ಕಳ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ವಿವಾದಿತ ಪರಶುರಾಮ ಮೂರ್ತಿಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಮೂರ್ತಿಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ವಾರ ಮುಖ್ಯಮಂತ್ರಿ ಜಿಲ್ಲೆಗೆ ಅಗಮಿಸಲಿದ್ದು ಅದರ ಮೊದಲು ಸತ್ಯಾಸತ್ಯತೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು. ಕಾಮಗಾರಿಗೆ ಈಗಾಗಲೇ ಸರ್ಕಾರದಿಂದ ರು. 6.5 ಕೋಟಿ ಬಿಡುಗಡೆ ಮಾಡಿದ್ದು ಉಳಿದ ಹಣವನ್ನು ಸರ್ಕಾರದಿಂದ ಭರಿಸುವಂತೆ ನಿರ್ಮಿತಿ ಕೇಂದ್ರದ ಎಜಿನಿಯರ್ ಸಚಿನ್ ಮನವಿ ಮಾಡಿದರು. ಅವರ ಮನವಿಗೆ ಪ್ರತಿಕ್ರಿಯಿಸಿದ ಭಂಡಾರಿ, ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರೇ ಕಾಮಗಾರಿ ನಿಲ್ಲಿಸಲು ಹೇಳಿದ್ದಾರೆ. ಸರಕಾರದ ಕಡೆಯಿಂದ ಬೇಕಾದ ಅಗತ್ಯ ನೆರವು ನೀಡಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು. ಸ್ಪಷ್ಟೀಕರಣ ಕೊಡಲು ತರಾಟೆ: ಫೈಬರ್ ಮೂರ್ತಿ ಬಗ್ಗೆ ಸ್ಪಷ್ಟೀಕರಣ ಬರೆದು ಕೊಡಿ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ಸಚಿನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತನಾಡಿ ಬಿಜೆಪಿ ಕಾಂಗ್ರೇಸ್ ಪಕ್ಷವನ್ನು ತೇಜೋವಧೆ ಮಾಡುತ್ತಿದೆ. ರಾತೋರಾತ್ರಿ ನಕಲಿ ಮೂರ್ತಿ ತೆರವು ಗೊಳಿಸಿದ್ದಾರೆ. ಈಗ ನೋಡಿದರೆ ಪರಶುರಾಮನ ಎಲ್ಲಾ ವಿಗ್ರಹವು ನಕಲಿ ಆಗಿದೆ ಎಂದು ದೂರಿದರು. ಬಿಜೆಪಿ ಕಾಂಗ್ರೆಸ್ ವಾರ್: ಕಾಂಗ್ರೆಸ್ ಪಕ್ಷ ಪರಶುರಾಮ ಥೀಂ ಪಾರ್ಕ್ ಹೆಸರಿನಲ್ಲಿ ಅಭಿವೃದ್ಧಿಗೆ ಅಡ್ಡಗಾಲು ಇಡುತ್ತಿದೆ ಎಂದು ಬಿಜೆಪಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಕಾರ್ಯಕರ್ತರು ಪರಶುರಾಮ ಮೂರ್ತಿಯ ಪಿಒಪಿ ತುಂಡುಗಳನ್ನು ಹಂಚುತ್ತಿದ್ದಾರೆ.