ವಿಶ್ವದಲ್ಲಿ 10.1ಮಿಲಿಯನ್‌ ಬಾಲ ಕಾರ್ಮಿಕರು

| Published : Jun 15 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಪ್ರಪಂಚದಲ್ಲಿ 5 ರಿಂದ 14 ವರ್ಷದೊಳಗಿನ 10.1 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಸಮೀಕ್ಷೆಯ ಪ್ರಕಾರ ಜಾರ್ಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ಸುಮಾರು 22,000ಕ್ಕೂ ಹೆಚ್ಚು ಬಾಲಕಾರ್ಮಿಕರು ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎನ್.ವಿ.ವಿಜಯ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಪ್ರಪಂಚದಲ್ಲಿ 5 ರಿಂದ 14 ವರ್ಷದೊಳಗಿನ 10.1 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಸಮೀಕ್ಷೆಯ ಪ್ರಕಾರ ಜಾರ್ಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ಸುಮಾರು 22,000ಕ್ಕೂ ಹೆಚ್ಚು ಬಾಲಕಾರ್ಮಿಕರು ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎನ್.ವಿ.ವಿಜಯ ಕಳವಳ ವ್ಯಕ್ತಪಡಿಸಿದರು.ನಗರದ ಬ.ವಿ.ವ. ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಆರೋಗ್ಯ ಶುಶ್ರೂಷ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು. ಭಾರತದ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಶೇ. 50ಕ್ಕೂ ಹೆಚ್ಚು ಬಾಲಕಾರ್ಮಿಕರಿದ್ದಾರೆ. ಇವರಲ್ಲಿ ಎರಡು ವಿಧಗಳಿದ್ದು, 5 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಬಾಲಕಾರ್ಮಿಕರೆಂದು ಹಾಗೂ 15 ರಿಂದ 18 ವರ್ಷದ ಮಕ್ಕಳಿಗೆ ಕಿಶೋರ ಕಾರ್ಮಿಕರೆಂದು ಉಲ್ಲೇಖಿಸಲಾಗುತ್ತಿದೆ. ಈಗಿನ 2023 ರ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ರಮೇಶ ಸುಂಬಡ ಹಾಗೂ ಸಿಬ್ಬಂದಿಗಳ ವರದಿಯ ಪ್ರಕಾರ ಬಾಗಲಕೋಟೆಯಲ್ಲಿ 830 ಕಡೆ ತಪಾಸಣೆ ನಡೆಸಿ, ಇದರಲ್ಲಿ 18 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ವಿವರಿಸಿದರು.ಬಾಲ ಮತ್ತು ಕಿಶೋರ ಕಾರ್ಮಿಕ ಕಾಯ್ದೆ-1986 ತಿದ್ದುಪಡಿ ಕಾಯ್ದೆ-2016 ರಂತೆ 14 ವರ್ಷದೊಳಗಿನ ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವುದನ್ನು ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಮಾಲೀಕರು ಮಕ್ಕಳನ್ನು ದುಡಿಸಿಕೊಂಡಲ್ಲಿ 6 ತಿಂಗಳಿಂದ 2 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 20 ರಿಂದ 50 ಸಾವಿರ ದಂಡ ವಿಧಿಸಲು ಅವಕಾಶವಿರುತ್ತದೆ. ಪೋಲಿಸ್ ಇಲಾಖೆಯಿಂದ ಎಫ್ಐಆರ್ ಸಹ ದಾಖಲಿಸಲಾಗುವುದೆಂದು ಬಾಗಲಕೋಟೆಯ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಅರಿವು ಮೂಡಿಸಿದರು.ಪಾಲಕರು ಎಚ್ಚೆತ್ತುಕೊಳ್ಳಬೇಕು:

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ್ ನಾಟೇಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ದೇಶದ ಭವಿಷ್ಯದ ಸಂಪತ್ತು. ಆದರೆ ಭಾರತದಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಇವರ ಭವಿಷ್ಯ ನಿರಾಶಾದಾಯಕ. ಇಂತಹ ದುಸ್ಥಿತಿಯಿಂದ ಮಕ್ಕಳನ್ನು ರಕ್ಷಿಸಲು, ಸರ್ಕಾರ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸರ್ಕಾರದ ಪ್ರಯತ್ನಕ್ಕೆ ಜನ ಜೊತೆಯಾಗಬೇಕು. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಅವರಿಗೆ ಸರಿಯಾದ ದಾರಿಯಲ್ಲಿ ನಡೆಸಬೇಕು, ಇದು ಪಾಲಕರ ಹಾಗೂ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.ಜಾಗೃತಿ ಜಾಥಾ:

ಈ ಸಂದರ್ಭದಲ್ಲಿ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ವಿಭಾಗದ ಪ್ರಾಧ್ಯಾಪಕರಾದ ಡಾ. ದಾನೇಶ್ವರಿ ಹಿರೇಮಠ, ಡಾ.ಎನ್.ಜಿ.ಪಾಟೀಲ, ಡಾ.ಪ್ರಶಾಂತ ಕುಲಕರ್ಣಿ, ಸಂತೋಷ ಸಜ್ಜನ, ಶ್ರೀದೇವಿ ತೇಲಿ, ರೇಣುಕಾ ಜಾಲಿಹಾಳ ಮುಂದಾಳತ್ವದಲ್ಲಿ ಎಂಎಸ್ಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಪ್ರಥಮ ವರ್ಷದ ಪಿಬಿಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಜಿಎನ್ಎಂ ಎರಡನೇ ವರ್ಷದ ವಿದ್ಯಾರ್ಥಿಗಳ ಸಹಯೋಗದಲ್ಲಿ ಜಾಥಾ ನಡೆಸಲಾಯಿತು. ಜಾಥಾ ಜಿಲ್ಲಾಧಿಕಾರಿಗಳ ಕಚೇರಿಯಿಂದ ಎಲ್ಐಸಿ ವೃತ್ತದವರೆಗೂ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.-------------------------

ಕೋಟ್‌14 ವರ್ಷದೊಳಗಿನ ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವುದನ್ನು ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಮಾಲೀಕರು ಮಕ್ಕಳನ್ನು ದುಡಿಸಿಕೊಂಡಲ್ಲಿ 6 ತಿಂಗಳಿಂದ 2 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 20 ರಿಂದ 50 ಸಾವಿರ ದಂಡ ವಿಧಿಸಲು ಅವಕಾಶವಿರುತ್ತದೆ. ಪೋಲಿಸ್ ಇಲಾಖೆಯಿಂದ ಎಫ್ಐಆರ್ ಕೂಡ ದಾಖಲಿಸಲಾಗುವುದು.ಜಾನಕಿ.ಕೆ.ಎಂ, ಜಿಲ್ಲಾಧಿಕಾರಿ