ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರರ ಮತ ಕ್ಷೇತ್ರದ ಚುನಾವಣೆ ಕಣದಲ್ಲಿ ಅಂತಿಮವಾಗಿ 14 ಅಭ್ಯರ್ಥಿಗಳು ಉಳಿದಿದ್ದಾರೆ.

ಧಾರವಾಡ:

ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರರ ಮತ ಕ್ಷೇತ್ರದ ಚುನಾವಣೆ ಕಣದಲ್ಲಿ ಅಂತಿಮವಾಗಿ 14 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಶುಕ್ರವಾರ ಕೊನೆ ದಿನವಾಗಿದ್ದು, ನಾಮಪತ್ರ ಸಲ್ಲಿಸಿದ್ದ 18 ಅಭ್ಯರ್ಥಿಗಳ ಪೈಕಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ವಾಪಸ್‌ ಪಡೆದಿದ್ದಾರೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಚುನಾವಣಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಹಾವೇರಿಯ ಆರ್‌.ಎಂ. ಕುಬೇರಪ್ಪ, ಹುಬ್ಬಳ್ಳಿಯ ಇಮ್ರಾನ ಕೂಡಲ, ಹಾವೇರಿಯ ಸಲೀಂ ಹನೀಫ ಜವಳಿ ಹಾಗೂ ಹಾವೇರಿಯ ಸುರೇಶ ಬಿಷ್ಟನಗೌಡರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣದಲ್ಲಿ 14 ಜನ ಅಭ್ಯರ್ಥಿಗಳು ಉಳಿದಿದ್ದಾರೆ ಎಂದರು.

ಯಾರ್‍ಯಾರು ಸ್ಪರ್ಧೆ:

ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಎಸ್.ವಿ. ಸಂಕನೂರ, ಕಾಂಗ್ರೆಸ್ಸಿನಿಂದ ಮೋಹನ ಲಿಂಬಿಕಾಯಿ, ಕೆಆರ್‌ಎಸ್‌. ಪಕ್ಷದಿಂದ ನಿಶಾಂತ ಬಂಕಾಪುರ, ಕಿತ್ತೂರು ಕಲ್ಯಾಣ ಸೇನಾದಿಂದ ಮಲ್ಲಿಕಾರ್ಜುನ ಗಂಗಾಧರ, ಜನತಾ ಚಳವಳಿ ಭಾರತದಿಂದ ಶಿವಕುಮಾರ ತಳವಾರ, ಪಕ್ಷೇತರರಾಗಿ ಅಬ್ದುಲ್‌ ಮನ್ನಾರ, ಡಾ. ಜಿ.ಎಚ್‌. ಇಮ್ರಾಪುರ, ಉಮೇಶ ದೈವಜ್ಞ, ಕೃಷ್ಣ ಬಳೆಗಾರ, ಕಾಂತಕುಮಾರ ಆರ್‌., ಜಿಶಾನ್‌ ಸಿರಸಂಗಿ, ಬಸವರಾಜ ಕೊಟಗಿ ಹಾಗೂ ಸಂತೋಷ ವರ್ಣೇಕರ ಇದ್ದಾರೆ. ಮತದಾನವು ಅ. 23ರ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.

ಲಕ್ಷ ದಾಟದ ಮತದಾರರು:

ನಾಲ್ಕು ಜಿಲ್ಲೆಗಳು ಸೇರಿದಂತೆ ಕ್ಷೇತ್ರದಲ್ಲಿ 57,345 ಪುರುಷ, 40,053 ಮಹಿಳೆ ಸೇರಿದಂತೆ ಒಟ್ಟು 97,398 ಮತದಾರರು ಅರ್ಹರಿದ್ದಾರೆ. ಒಟ್ಟು 137 ಮತಗಟ್ಟೆ ಸ್ಥಾಪಿಸಿದ್ದು, ಅಗತ್ಯ ಸಿಬ್ಬಂದಿಯನ್ನು ಈ ಮತಗಟ್ಟೆಗಳಿಗೆ ನೇಮಿಸಲಾಗಿದೆ. ಈ ಸಿಬ್ಬಂದಿಗೆ ತರಬೇತಿ ಸಹ ಸದ್ಯದಲ್ಲಿಯೇ ನೀಡಲಾಗುವುದು. ಇನ್ನು, ಮಾದರಿ ನೀತಿ ಜಾರಿ ಕುರಿತು ಮಾಹಿತಿ ನೀಡಿದ ಕೆ.ಎಂ. ಜಾನಕಿ, 42 ಸೆಕ್ಟರ್‌ ಅಧಿಕಾರಿಗಳು, 54 ಫ್ಲೈಯಿಂಗ್‌ ಸ್ಕ್ವಾಡ್‌, 37 ವಿಎಸ್‌ಟಿ, 34 ವಿವಿಟಿ, 22 ಎಂಎಂಸಿ ಅಧಿಕಾರಿಗಳನ್ನು ನೇಮಿಸಿದ್ದು, ಸದ್ಯ ಎರಡು ಪ್ರಕರಣಗಳು ಮಾತ್ರ ನೀತಿ ಸಂಹಿತೆ ಉಲ್ಲಂಘನೆ ಅಡಿ ದಾಖಲಾಗಿವೆ ಎಂದರು.

ನೋಟಾ ಇಲ್ಲ:

ಸಾಮಾನ್ಯ ಚುನಾವಣೆಗಿಂತ ವಿಧಾನ ಪರಿಷತ್‌ ಚುನಾವಣೆಯು ತುಸು ಭಿನ್ನವಾಗಿದೆ. ಮತದಾರರು ತಮ್ಮ ಮತಗಳನ್ನು ಪ್ರಾಶಸ್ತ್ಯದ ರೂಪದಲ್ಲಿ ಅಂಕಿಗಳನ್ನು ಬರೆಯುವ ಮೂಲಕವೇ ಹಾಕಬೇಕು. ಈ ಚುನಾವಣೆಯಲ್ಲಿ ಯಾವುದೇ ನೋಟಾ ರೀತಿಯ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅ. 27ರಂದು ಮತ ಎಣಿಕೆ ಪ್ರಕ್ರಿಯೆಯು ಧಾರವಾಡದ ಕೃಷಿ ವಿವಿ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಇದ್ದರು.

ಕುಬೇರಪ್ಪ ವಾಪಸ್‌

ಕಾಂಗ್ರೆಸ್ ಹೈಕಮಾಂಡ್‌ನ ಮನವೊಲಿಕೆಯ ಪರಿಣಾಮ ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಅಹಿಂದ್‌ ಸಂಘಟನೆಯಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಾ. ಆರ್.ಎಂ. ಕುಬೇರಪ್ಪನವರು ತಮ್ಮ ನಾಮಪತ್ರವನ್ನು ಶುಕ್ರವಾರ ವಾಪಸ್‌ ಪಡೆದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಕಾಂಗ್ರೆಸ್ಸಿನ ಮುಖಂಡರು ತಮ್ಮನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಬರುವ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ನಾಮಪತ್ರ ವಾಪಸ್‌ ಪಡೆದಿದ್ದೇವೆ ಎಂದು ಆರ್‌.ಎಂ. ಕುಬೇರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.