ರಾಜ್ಯದಲ್ಲಿ 2.50ಲಕ್ಷ ಖಾಸಗಿ, 34,560 ಮುಜರಾಯಿ ದೇವಸ್ಥಾನಗಳಿವೆ: ಮನೋಹರ ಮಠದ

| Published : Sep 14 2025, 01:04 AM IST

ರಾಜ್ಯದಲ್ಲಿ 2.50ಲಕ್ಷ ಖಾಸಗಿ, 34,560 ಮುಜರಾಯಿ ದೇವಸ್ಥಾನಗಳಿವೆ: ಮನೋಹರ ಮಠದ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಕರ್ನಾಟಕದಲ್ಲಿ 2.50ಲಕ್ಷ ಖಾಸಗಿ ದೇವಸ್ಥಾನ, 34,560 ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿವೆ ಎಂದು ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಅಧ್ಯಕ್ಷ ಮನೋಹರ ಮಠದ ತಿಳಿಸಿದರು.

- ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಮಟ್ಟದ ದೇವಾಲಯ ಆಡಳಿತ ಸಮಿತಿ ಸದಸ್ಯ ಚಿಂತನಾ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕರ್ನಾಟಕದಲ್ಲಿ 2.50ಲಕ್ಷ ಖಾಸಗಿ ದೇವಸ್ಥಾನ, 34,560 ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿವೆ ಎಂದು ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಅಧ್ಯಕ್ಷ ಮನೋಹರ ಮಠದ ತಿಳಿಸಿದರು.

ಶನಿವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ಶೃಂಗೇರಿ ಜಿಲ್ಲೆ ದೇವಾಲಯ ಸಂವರ್ಧನಾ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದ ದೇವಾಲಯ ಆಡಳಿತ ಸಮಿತಿ ಸದಸ್ಯರ ಚಿಂತನಾ ಸಭೆಯಲ್ಲಿ ಮಾತನಾಡಿ, ದೇವಸ್ಥಾನ ಗಳು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ದೇವಸ್ಥಾನಗಳು ಸಾಂಸ್ಕೃತಿಕ ಕೇಂದ್ರವಾಗಬೇಕು. ಭಕ್ತರಿಗೆ ನಮ್ಮ ಸಂಸ್ಕೃತಿ ಕಲಿಸಬೇಕು. ಬಡವರಿಗೆ ಆರ್ಥಿಕ ನೆರವು ನೀಡಬೇಕು. ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಾಮಾಜಿಕ ಕಾರ್ಯಕ್ರಮ ಸಹ ನಡೆಸಬೇಕು ಎಂದು ಸಲಹೆ ನೀಡಿದರು.

ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ಆದರೆ, ದೇವಸ್ಥಾನಗಳು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿವೆ. ನಮ್ಮದು ನಂಬಿಕೆ ಮಾತ್ರ, ಮೂಡ ನಂಬಿಕೆ ಅಲ್ಲ. ನಮ್ಮ ಅಜ್ಞಾನದಿಂದಲೇ ಜಾತಿ ಮಾಡಿಕೊಂಡಿದ್ದೇವೆ. ದೇವರು ಎಲ್ಲರಿಗೂ ಸೇರಿದ್ದಾನೆ. ಕೆಲವು ಸಾಹಿತಿಗಳು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನಂಬಿಕೆಗಳ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ದೇವಸ್ಥಾನಗಳು ಇಲ್ಲದಿದ್ದರೆ ತಾಲೂಕಿಗೆ ಒಂದರಂತೆ ಹುಚ್ಚಾಸ್ಪತ್ರೆ ತೆರೆಯ ಬೇಕಾಗುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ ಎಂದರು.

ನಮ್ಮ ರಾಜ್ಯದಲ್ಲಿ ಅರ್ಚಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಅವರ ಆಡಳಿತ ಮಂಡಳಿಯವರು ನೆರವು ನೀಡಬೇಕು. ಅರ್ಚಕರು, ಸಮಿತಿಯವರು ಒಟ್ಟಾಗಿ ಸಮನ್ವಯತೆಯಿಂದ ಬಾಳಬೇಕು. ದೇವರನ್ನು ನಂಬಿದವರನ್ನು ಸಂತೋಷ ಪಡಿಸ ಬೇಕು.ರಾಜ್ಯದಲ್ಲಿ 2.50 ಲಕ್ಷ ಅರ್ಚಕರಲ್ಲಿ 50 ಸಾವಿರ ಅರ್ಚಕರ ಮಾತ್ರ ವೇದ ಅಧ್ಯಯನ ಮಾಡಿದ್ದಾರೆ. ದೇವಸ್ಥಾನವನ್ನು ನೆಮ್ಮದಿ ಕೇಂದ್ರವನ್ನಾಗಿ ಮಾಡೋಣ. ಪ್ರತಿ ದೇವಸ್ಥಾನದಲ್ಲಿ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಸಂಸ್ಕಾರ ಕೇಂದ್ರವಾಗಬೇಕು. ಅನ್ನ ಪ್ರಸಾದ ನೀಡಬೇಕು. ಜಾತ್ರೆ ,ರಥೋತ್ಸವ ಮಾಡುವುದಕ್ಕಿಂತ ಪ್ರತಿ ದೇವಸ್ಥಾನದಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದರು.

ಎಂ.ವಿ.ರಾಜೇಂದ್ರ ಕುಮಾರ್ ಮಾತನಾಡಿ. ದೇಶದಲ್ಲಿರುವ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದಲ್ಲ ಒಂದು ದಿವಸ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪ್ರತಿಯೊಂದು ಮಂಡಲಗಳಲ್ಲಿ 15 ರಿಂದ 20 ದೇವಸ್ಥಾನಗಳಿವೆ. ಕೆಲವು ದೇವಸ್ಥಾನ ಗಳಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಕೆಲವು ದೇವಸ್ಥಾನಗಳಲ್ಲಿ ಜಾತ್ರೆ ನಡೆಯುತ್ತಿದೆ. ಪ್ರಸ್ತುತ ದೇವಸ್ಥಾನಗಳು ಪೂಜೆ, ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗಿರುವುದರಿಂದ ದೇವಾಲ ಸಂವರ್ಧನಾ ಸಮಿತಿ ಚಿಂತನೆ ಮಾಡಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಗಮನ ನೀಡುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪ್ರತಿ ತಾಲೂಕಿನಲ್ಲೂ ದೇವಾಲಯ ಸಂವರ್ಧನ ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿದ್ದ ಆರ್‌ ಎಸ್‌.ಎಸ್‌ ನ ಹಾಸನ ಪ್ರಾಂತೀಯ ಜಿಲ್ಲಾ ಸಂಯೋಜಕ ವಿಜಯಕುಮಾರ್‌ ನರಸಿಂಹರಾಜಪುರ ದೇವಾಲಯ ಸಂವರ್ಧನ ಸಮಿತಿ ಘೋಷಣೆ ಮಾಡಿದರು. ದೇವಾಲಯ ಸಂವರ್ಧನ ಸಮಿತಿ ಶೃಂಗೇರಿ ಜಿಲ್ಲಾ ಸಂಯೋಜಕ ಕಾರ್ತಿಕೇಯ ಕೆ ಭಟ್ ಉಪಸ್ಥಿತರಿದ್ದರು. ಶೆಟ್ಟಿಕೊಪ್ಪದ ಅಂಟಿಕೆ ಪಿಂಟಿಕೆ ಕಲಾವಿದರ ತಂಡದವರು ದೀಪ ಬೆಳಗಿ ಉದ್ಘಾಟಿಸಿದರು. ವಾಣಿ ನರೇಂದ್ರ ಸ್ವಾಗತಿಸಿದರು. ಶೆಟ್ಟಿಕೊಪ್ಪ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ನಂತರ ಆಗಮಿಸಿದ್ದ ದೇವಸ್ಥಾನಗಳ ಸಮಿತಿಯ ಪದಾಧಿಕಾರಿಗಳು, ಅರ್ಚಕರೊಂದಿಗೆ ಸಂವಾದ ನಡೆಸಿದರು.

-- ಬಾಕ್ಸ್ --

ಅರ್ಚಕರಿಗೆ ಉಚಿತ ಶಿಬಿರ

ರಾಜ್ಯದಲ್ಲಿ ದೇವಾಲಯ ಸಂವರ್ಧನ ಸಮಿತಿಯಿಂದ ಉಚಿತವಾಗಿ ಅರ್ಚಕರ ಶಿಬಿರ ನಡೆಸುತ್ತಿದ್ದೇವೆ. ಆಸಕ್ತರು ಪಾಲ್ಗೊಳ್ಳ ಬಹುದು. ಈಗಾಗಲೇ 550 ಜನರಿಗೆ 9 ದಿನಗಳ ಅರ್ಚಕರ ಶಿಬಿರ ನಡೆಸಿದ್ದೇವೆ. ಇದಕ್ಕೆ ಜಾತಿ ಬೇಧವಿಲ್ಲ ಎಂದು ರಾಜ್ಯ ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ ತಿಳಿಸಿದರು.

-- ಬಾಕ್ಸ್--

ತಾಲೂಕು ಸಮಿತಿ ರಚನೆ

ತಾಲೂಕು ದೇವಾಲಯ ಸಂವರ್ಧನ ಸಮಿತಿ ಸಂಯೋಜಕರಾಗಿ ನೇರಳೆ ಪ್ರಕಾಶ್ ಭಟ್‌, ಸಹ ಸಂಯೋಜಕರಾಗಿ ಜಗದೀಶ್ ಭಟ್‌, ಪ್ರತೀಕ್‌, ಸದಸ್ಯರಾಗಿ ಮುತ್ತಿನಕೊಪ್ಪ ಹರೀಶ್‌, ಶೆಟ್ಟಿಕೊಪ್ಪ ಮಹೇಶ್‌, ಹಂಚಿನಮನೆ ನಾಗರಾಜ್‌, ವಾಣಿ ನರೇಂದ್ರ,ವರ್ಕಾಟೆ ಸಂಪತ್‌ ಕುಮಾರ್‌, ನೇರಳೆ ರಾಘವೇಂದ್ರಭಟ್‌, ಕುಣಿ ಹಡ್ಲು ರಾಘವೇಂದ್ರ ಆಯ್ಕೆಯಾದರು.