ಬನ್ನೂರು ಪುರಸಭೆ ಜೆಡಿಎಸ್- ಬಿಜೆಪಿ ಮೈತ್ರಿ ತೆಕ್ಕೆಗೆ

| Published : Sep 07 2024, 01:33 AM IST

ಬನ್ನೂರು ಪುರಸಭೆ ಜೆಡಿಎಸ್- ಬಿಜೆಪಿ ಮೈತ್ರಿ ತೆಕ್ಕೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷ ಸ್ಥಾನವು ಬಿಸಿಬಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಬಿಸಿಎಡಬ್ಲ್ಯೂಗೆ ಮೀಸಲಾಗಿದ್ದು

ಕನ್ನಡಪ್ರಭ ವಾರ್ತೆ ಬನ್ನೂರು

ರಾಜ್ಯ ರಾಜಕಾರಣದ ಜೆಡಿಎಸ್, ಬಿಜೆಪಿ ಮೈತ್ರಿಯು ಪುರಸಭೆಯ ಅಧಿಕಾರದಲ್ಲೂ ಮುಂದುವರೆದಿದ್ದು, ಬನ್ನೂರು ಪುರಸಭೆಯ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾದರೆ, ಉಪಾಧ್ಯಕ್ಷ ಸ್ಥಾನವು ಬಿಜೆಪಿಗೆ ದೊರಕಿದೆ.

ಅಧ್ಯಕ್ಷರಾಗಿ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ನಾಗರತ್ನ ಅವಿರೋಧ ಆಯ್ಕೆಯಾದರು.ಬನ್ನೂರು ಪುರಸಭೆಯಲ್ಲಿ 23 ಸದಸ್ಯರಿದ್ದು, ಜೆಡಿಎಸ್- 12, ಕಾಂಗ್ರೆಸ್- 6, ಬಿಜೆಪಿ-2 , ಪಕ್ಷೇತರರು-2 ಸದಸ್ಯರನ್ನು ಹೊಂದಿದ್ದು, ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನವು ಬಿಸಿಬಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಬಿಸಿಎಡಬ್ಲ್ಯೂಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ಕೃಷ್ಣೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಪ್ರಭಾಕರ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣೇಗೌಡ ಮಾತನಾಡಿ, ಬನ್ನೂರು ಪುರಸಭೆಗೆ ತಾವು 2ನೇ ಭಾರೀ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಮ್ಮ ಅಧಿಕಾರವಧಿಯಲ್ಲಿ ಎಲ್ಲ ಸದಸ್ಯರ ಸಹಕಾರವನ್ಬು ಪಡೆದುಕೊಂಡು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.

ತಮ್ಮ ಆಯ್ಕೆಗೆ ಸಹಕಾರವನ್ನು ನೀಡಿದ ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್ ಅವರನ್ನು ಹಾಗೂ ಪುರಸಭೆಯ ಸದಸ್ಯರಿಗೆ ಕೃತಜ್ಞತೆಯನ್ನು ಅರ್ಪಿಸಿದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗರತ್ನ ಪ್ರಭಾಕರ್ ಮಾತನಾಡಿ, ತಮ್ಮ ಆಯ್ಕೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು. ತಮಗೆ ದೊರೆಯುವ 14 ತಿಂಗಳ ಅಧಿಕಾರವಧಿಯಲ್ಲಿ ಅಧ್ಯಕ್ಷರು ಹಾಗೂ ಪುರಸಭೆಯ ಸದಸ್ಯರೆಲ್ಲರ ಸಹಕಾರವನ್ನು ಪಡೆದುಕೊಂಡು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿನಂದಿಸಿದರು. ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿದಂತೆ ಪುರಸಭೆಯ ಸಿಬ್ಬಂದಿಯವರು, ಪುರಸಭೆಯ ಸದಸ್ಯರು, ಜೆಡಿಎಸ್ ಬಿಜೆಪಿಯ ಕಾರ್ಯಕರ್ತರು ಇದ್ದರು.