ಜಿಲ್ಲೆಯಲ್ಲಿ 75 ಡೆಂಘೀ ಪ್ರಕರಣ, ಇಬ್ಬರಲ್ಲಿ ಗಂಭೀರ- ಮುನ್ನೆಚ್ಚರಿಕೆ ಕ್ರಮ

| Published : Jul 03 2024, 12:18 AM IST

ಜಿಲ್ಲೆಯಲ್ಲಿ 75 ಡೆಂಘೀ ಪ್ರಕರಣ, ಇಬ್ಬರಲ್ಲಿ ಗಂಭೀರ- ಮುನ್ನೆಚ್ಚರಿಕೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ 75 ಡೆಂಘೀಜ್ವರ ಪ್ರಕರಣ ದಾಖಲಾಗಿದ್ದು, ಈ ಪೈಕಿ ಎರಡು ಗಂಭೀರ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದ್ದಾರೆ.

- ಈಜಿಸ್ ಈಜಿಫ್ಟೆ ಲಾರ್ವಾ ನಾಶಕ್ಕೆ ರಾಸಾಯನಿಕ ಸಿಂಪಡಣೆ: ಡಿಸಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲೆಯಲ್ಲಿ 75 ಡೆಂಘೀಜ್ವರ ಪ್ರಕರಣ ದಾಖಲಾಗಿದ್ದು, ಈ ಪೈಕಿ ಎರಡು ಗಂಭೀರ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲೂ ಡೆಂಘೀಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಆರೋಗ್ಯ ಇಲಾಖೆಯಿಂದ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ನಿತ್ಯವೂ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಡೆಂಘೀಜ್ವರ ಈಡಿಸ್ ಈಜಿಫ್ಟಿ ಸೊಳ್ಳೆಯಿಂದ ಹರಡುತ್ತದೆ. ಜ್ವರ, ಮೈ-ಕೈ ನೋವಿನ ತರಹದ ಲಕ್ಷಣ ಕಂಡುಬರುತ್ತದೆ. ಜಿಲ್ಲೆಯ 75 ಪ್ರಕರಣಗಳಲ್ಲಿ 2 ಪ್ರಕರಣದಲ್ಲಿ ವಿಪರೀತ ಪ್ರಕರಣ ಕಂಡುಬಂದಿದ್ದು, ವೈದ್ಯರು ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಪ್ರತ್ಯೇಕ ವಾರ್ಡ್‌ ವ್ಯವಸ್ಥೆ:

ಡೆಂಘೀಜ್ವರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲ ಆರಂಭ ಆಗಿರುವುದರಿಂದ ಬೇರೆ ಜಿಲ್ಲೆಗಳಲ್ಲಿ ಕಂಡುಬಂದಂತೆ ನಮ್ಮ ಜಿಲ್ಲೆಯಲ್ಲೂ ಡೆಂಘೀ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಗರ, ಗ್ರಾಮೀಣ ಪ್ರದೇಶಗಳೆನ್ನದೇ ಎಲ್ಲ ಕಡೆ ಲಾರ್ವಾ ಸರ್ವೇ ಮಾಡಲಾಗುತ್ತಿದೆ. ಈಡಿಸ್ ಈಜಿಫ್ಟಿ ಸೊಳ್ಳೆ ಲಾರ್ವಾ ಕಂಡು ಬಂದ ಕಡೆ ರಾಸಾಯನಿಕ ವಸ್ತು ಸಿಂಪರಣೆ ಪ್ರಕ್ರಿಯೆ ಮಾಡಿ, ಲಾರ್ವಾ ನಾಶಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಮಕ್ಕಳು, ಗರ್ಭಿಣಿಯರು ಎಚ್ಚರ:

ಜಿಲ್ಲೆಯಲ್ಲಿ ಅಗತ್ಯ ಔಷಧಿ, ಮಾತ್ರೆ ದಾಸ್ತಾನು ಮಾಡಿಕೊಂಡಿದ್ದು, ಚಿಕಿತ್ಸೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ, ನಮ್ಮ ವೈದ್ಯರು, ಸಿಬ್ಬಂದಿ ಸಹ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಚಿಕ್ಕ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ಡೆಂಘೀಜ್ವರ ಕಂಡುಬಂದರೆ ಸಮಸ್ಯೆ ಎದುರಾಗುತ್ತದೆ ಎಂದು ಅವರು ಎಚ್ಚರಿಸಿದರು.

- - -

ಕೋಟ್‌ ಮಕ್ಕಳು, ಮಹಿಳೆಯರಲ್ಲಿ ಡೆಂಘೀ ಸಮಸ್ಯೆ ಉಲ್ಬಣಿಸದಂತೆ ಜಿಲ್ಲಾ ಸರ್ಜನ್, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಲ್ಲ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆ ನಡೆದಿದೆ. ಸಾರ್ವಜನಿಕರು ಸಹ ಸ್ವಚ್ಛತೆ ಬಗ್ಗೆ, ಆರೋಗ್ಯ ಇಲಾಖೆ ಸಲಹೆ, ಸೂಚನೆ ಪಾಲಿಸಬೇಕು

- ಡಾ. ಎಂ.ವಿ.ವೆಂಕಟೇಶ, ಡಿಸಿ

- - -

-2ಕೆಡಿವಿಜಿ6: ಡಾ.ಎಂ.ವಿ.ವೆಂಕಟೇಶ, ಡಿಸಿ, ದಾವಣಗೆರೆ