ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಜೀವನದಲ್ಲಿ ನಾನು ಏನಾಗಬೇಕು ಹಾಗೂ ಏನು ಓದಬೇಕೆಂಬ ಕನಸು ಹಾಗೂ ಹಂಬಲದ ಜತೆಗೆ ಕನಸನ್ನು ನನಸು ಮಾಡುವ ಮೌಲ್ಯತೆ ಇರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ, ಕೌಶಲ್ಯ ಹಾಗೂ ವಿದ್ಯಾರ್ಹತೆ ಮತ್ತು ತುಡಿತ ಇದ್ದಾಗ ಮಾತ್ರ ಕನಸು ನನಸು ಮಾಡಿಕೊಳ್ಳಲು ಸಾಧ್ಯವೆಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರೊಫೆಸರ್ ಮಂಜುರಾಜು ಎಚ್.ಎನ್. ಸಲಹೆ ನೀಡಿದರು. ಪಟ್ಟಣದ ಪೇಟೆ ಮುಖ್ಯರಸ್ತೆಯ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಶ್ರೀ ಗುರುಗಣೇಶ್ ಚಿಟ್ಸ್ ಸಂಸ್ಥೆ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಲಿತು ಶೇ. ೯೫ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷಾ ಕೇಂದ್ರಗಳಲ್ಲಿ ನೀವು ಪರೀಕ್ಷೆ ಬರೆಯುವಾಗ ನಿಮ್ಮ ಸಂಪೂರ್ಣ ಗಮನ ಉತ್ತರ ಬರೆಯುವುದರಲ್ಲಿ ಇರುತ್ತದೆ, ಇನ್ಯಾವುದೇ ವಿಷಯದ ಬಗ್ಗೆ ಚಿಂತಿಸದೇ ತನ್ಮಯತೆಯಿಂದ ಪರೀಕ್ಷೆ ಬರೆಯುತ್ತೀರ, ಆದರೆ ಆದೇ ಡೆಡಿಕೇಷನ್ ಓದುವಾಗ ಇರುವುದಿಲ್ಲ ಏಕೆಂದು ಪ್ರಶ್ನಿಸಿಕೊಂಡಾಗ ಹಲವಾರು ಆಲೋಚನೆಗಳು ಸುಳಿಯುತ್ತದೆ, ಈ ರೀತಿಯ ಆಲೋಚನೆಗಳಿಂದ ಮುಕ್ತಿ ಪಡೆಯಲು ಧ್ಯಾನ ಸಹಾಯ ಮಾಡುತ್ತದೆ, ಜತೆಗೆ ಧ್ಯಾನ ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಗುರು ಬೇಕಾಗಿಲ್ಲ, ಎಲ್ಲವನ್ನು ಪಡೆಯಲು ಸಾಧ್ಯವಿದೆ, ಆದರೆ ಜೀವನದಲ್ಲಿ ಮುಖ್ಯವಾಗಿ ಬೇಕಾಗಿರೋದು ಉತ್ತಮವಾದ ಆಯ್ಕೆ, ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡಿದ್ದನ್ನು ಪ್ರೀತಿಯಿಂದ ಕಲಿಯಬೇಕು. ಇಂದು ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಜತೆಗೆ ಅಗತ್ಯವಿರುವ ವಿಷಯಗಳಲ್ಲಿ ಪ್ರತಿಭಾನ್ವಿತರು ದೊರೆಯದೇ ಹುದ್ದೆಗಳು ಸಾಕಷ್ಟು ಕಾಲಿ ಇದೆ. ಸೈಬರ್ ಸೆಕ್ಯೂರಿಟಿ ಹಾಗೂ ಸಂಸ್ಕೃತದಲ್ಲಿ ಎಂಎ ಪಿಎಚ್‌ಡಿ ಮಾಡಿ ಇಂಗ್ಲೀಷ್ ಮಾತನಾಡುವ ಕೌಶಲ್ಯ ಹಾಗೂ ಕಂಪ್ಯೂಟರ್ ಜ್ಞಾನವಿರುವ ವ್ಯಕ್ತಿಗಳು ೨ ವರ್ಷದಿಂದ ದೊರೆಯದೇ ಕೆಲಸ ಕಾಲಿ ಬಿಟ್ಟಿದ್ದಾರೆ ಎಂಬ ಮಾಹಿತಿ ಇದೆ. ಎಂಬಿಬಿಎಸ್ ಅಥವಾ ಬಿಇ ಎಂಬ ಕಾನ್‌ಸ್ಪೆಟ್ ತಲೆಯಿಂದ ತೆಗೆದು ಹಾಕಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹಲವಾರು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳು ಇದ್ದು, ಪ್ರಾರಂಭದಲ್ಲಿ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡು ಪ್ರೀತಿಯಿಂದ ಕಲಿತು ಉತ್ತಮ ಬದುಕು ರೂಪಿಸಿಕೊಳ್ಳಲು ಶುಭಕೋರಿದರು. ಹಾ.ಮಾ.ನಾಯಕ್ ಅವರ ಪುತ್ರಿ ಕವಿತಾ ನಾಯಕ್ ಅವರು ೩೦ ವರ್ಷಗಳ ಹಿಂದೆ ಕನ್ನಡದಲ್ಲಿ ಎಂಬಿಬಿಎಸ್ ಬರೆದು ಡಾಕ್ಟರ್ ಪದವಿ ಪಡೆದಿದ್ದರು, ಆದರೆ ಈಗ ಕನ್ನಡದಲ್ಲಿ ಎಂಬಿಬಿಎಸ್ ಮಾಡಬಹುದಾ ಎಂದು ಯಾರನೇ ಪ್ರಶ್ನಿಸಿದರೂ ಚಾನ್ಸೇಯಿಲ್ಲ ಎನ್ನುತ್ತಾರೆ, ಆದರೆ ಕಲಿಯಬೇಕು ಎಂಬ ತುಡಿತ ಸಾಧಿಸಬೇಕು ಎಂಬ ಛಲವಿದ್ದಾಗ ಮಾತ್ರ ಕವಿತಾ ನಾಯಕ್ ಅವರಂತೆ ಯಶಸ್ಸು ಕಾಣಲು ಸಾಧ್ಯ. ಆದ್ದರಿಂದ ನಿಮ್ಮ ಆಯ್ಕೆ, ಕಲಿಕೆಯ ತುಡಿತ ಮತ್ತು ಕೈಗೊಂಡ ಚಲ ಸಾಧಿಸಲು ಶ್ರದ್ಧೆ ಹಾಗೂ ಪ್ರೀತಿಯಿಂದ ಕಲಿಯಿರಿ ಎಂದು ಉದಾಹರಣೆಯೊಂದಿಗೆ ಸಲಹೆ ನೀಡಿದರು. ಪೋಷಕರನ್ನು ಉದ್ದೇಶಿಸಿ, ನಿಮ್ಮ ಆಸೆಯಂತೆ ಮಕ್ಕಳನ್ನು ಬೆಳೆಸುವ ಮನಸ್ಥಿತಿಯಲ್ಲಿ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಬೇಡಿ, ಅವರು ನಿಮ್ಮ ಮಕ್ಕಳು ಅವರನ್ನು ಅವರ ಆಸೆಯಂತೆ ಅವರ ಆಯ್ಕೆಯನ್ನು ಕೇಳಿ, ನಿಮಗೆ ತಪ್ಪು ಎನಿಸಿದರೆ ಸ್ನೇಹಿತರು ಹಿತೈಷಿಗಳನ್ನು ಕೇಳಿ ತಿಳಿಯಿರಿ, ಆಯ್ಕೆ ಸರಿಯಾಗಿದ್ದರೆ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು. ಬಿಇಒ ಸೋಮಲಿಂಗೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಹಾಗೂ ಸುರೇಶ್ ಕುಮಾರ್ ಎಚ್.ವಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು ಮತ್ತು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ವೆಂಕಟೇಶ್ ಮಾತನಾಡಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೫ ಕ್ಕಿಂತ ಹೆಚ್ಚು ಅಂಕ ಪಡೆದಿರುವ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಜ್ಯೂನಿಯರ್ ಕಾಲೇಜು, ಆದರ್ಶ ವಿದ್ಯಾಲಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ೩೭ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ, ಗೌರವಿಸಲಾಯಿತು. ಪೂರ್ಣಶ್ರೀ ಪ್ರಾರ್ಥಿಸಿದರು, ಸುದರ್ಶನ್ ಎಚ್.ಎಸ್. ಸ್ವಾಗತಿಸಿದರು, ಎಸ್. ಗೋಕುಲ್ ನಿರೂಪಿಸಿದರು. ಇಸಿಒಗಳಾದ ಕೇಶವ್ ಹಾಗೂ ರಾಮಚಂದ್ರಪ್ಪ, ಪೋಷಕರು ಇದ್ದರು.--------------------------------------------------------------------------