ಸಾರಾಂಶ
ಬೆಂಗಳೂರು : ಕೋವಿಡ್ ಉಪ ತಳಿಯು ಅಷ್ಟೇನು ಅಪಾಯಕಾರಿಯಲ್ಲ ಎಂದು ಸ್ಪಷ್ಟಪಡಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರತಿ ವಾರ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಪರಿಸ್ಥಿತಿಗೆ ತಕ್ಕಂತೆ ಅನಿವಾರ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಶಾಲಾ-ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಿ ತೀರ್ಮಾನಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಜೆ-1 ಉಪತಳಿ ಹೆಚ್ಚಿನ ದುಷ್ಪರಿಣಾಮ ಬೀರಿದ ಬಗ್ಗೆ ವರದಿ ಆಗಿಲ್ಲ. ಹೀಗಾಗಿ ಅನಗತ್ಯ ಆತಂಕ ಅಗತ್ಯವಿಲ್ಲ. ಕೇಂದ್ರದ ಜತೆ ಸತತವಾಗಿ ಸಂಪರ್ಕದಲ್ಲಿದ್ದೇವೆ. ಸದ್ಯಕ್ಕೆ ಮುನ್ನೆಚ್ಚರಿಕೆ ಹೊರತಾಗಿ ಯಾವ ನಿರ್ಬಂಧಗಳೂ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ : ಎಲ್ಲಾ ಕಡೆಯೂ ಕೊರೋನಾ ಪರೀಕ್ಷೆ ಆರಂಭಿಸಲು ಸೂಚಿಸಿದ್ದೇವೆ. ಎರಡು ದಿನಗಳ ಒಳಗಡೆ ಪರೀಕ್ಷೆ ಶುರುವಾಗಲಿದ್ದು ಇದಕ್ಕೆ ಅಗತ್ಯವಿರುವ ಆರ್‌ಟಿ-ಪಿಸಿಆರ್ ಹಾಗೂ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಕಿಟ್ ಕಳುಹಿಸಲಾಗಿದೆ.
ತೀವ್ರ ಉಸಿರಾಟ ಸೋಂಕು (ಸಾರಿ) ಹಾಗೂ ಶೀತಜ್ವರ ಮಾದರಿ ಅನಾರೋಗ್ಯ (ಐಎಲ್‌ಐ) ಹೊಂದಿರುವವರು, ಆಸ್ಪತ್ರೆಗಳಿಗೆ ದಾಖಲಾಗುವ ಉಸಿರಾಟ ಸಮಸ್ಯೆ, ಹೃದ್ರೋಗ ಉಳ್ಳ ಮಕ್ಕಳು ಹಾಗೂ ವೃದ್ಧರಿಗೆ ಕಡ್ಡಾಯ ಪರೀಕ್ಷೆಗೆ ಸೂಚಿಸಲಾಗಿದೆ. ಇದನ್ನು ಖಾಸಗಿಯವರೂ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ವೃದ್ಧ ವ್ಯಕ್ತಿಯ ಸಾವಿಗೆ ಕೊರೋನಾ ಕಾರಣವಲ್ಲ : ಕೊರೋನಾ ಸಾವು ವರದಿಯಾಗಿದ್ದರೂ ವ್ಯಕ್ತಿಗೆ 84 ವರ್ಷ ವಯಸ್ಸಾಗಿತ್ತು. ಜತೆಗೆ ಬೈಪಾಸ್ ಶಸ್ತ್ರಚಿಕಿತ್ಸೆ, ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಆಗಿತ್ತು. ಟಿಬಿ ಸೇರಿದಂತೆ ಹಲವು ಅನಾರೋಗ್ಯ ಇತ್ತು. ಕೊರೋನಾ ಪಾಸಿಟಿವ್ ಬಂದಿತ್ತು ಎಂದಾಕ್ಷಣ ಕೊರೋನಾದಿಂದಲೇ ಸಾವು ಎಂದು ಹೇಳಲಾಗದು. ಆದರೂ ಡೆತ್ ಆಡಿಟ್ ವರದಿ ಕೇಳಿದ್ದೇವೆ. ಅದರಲ್ಲಿ ವಿವರವಾಗಿ ಗೊತ್ತಾಗಲಿದೆ ಎಂದು ಸಚಿವರು ತಿಳಿಸಿದರು.
ಯಾವುದೇ ನಿರ್ಬಂಧವಿಲ್ಲ:
ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಎಲ್ಲೂ ಹಿಂದೇಟು ಹಾಕಿಲ್ಲ. ಮಂಗಳೂರು, ಮಡಿಕೇರಿ ಸೇರಿ ಎಲ್ಲೂ ಅಂತಹ ಭೀತಿಯ ಸ್ಥಿತಿಯಿಲ್ಲ. ಹೀಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಬಾರದು ಎಂದು ನಿರ್ಬಂಧಿಸುವುದಿಲ್ಲ. ರಾಜ್ಯದ ಒಳಗೆ ಹಾಗೂ ಹೊರಗೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಚಟುವಟಿಕೆಗೂ ನಿರ್ಬಂಧವಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಿಮಗೆ ಲಾಕ್‌ಡೌನ್ ಇಷ್ಟವಿದ್ದರೆ ಹೇಳಿ ಘೋಷಣೆ ಮಾಡುತ್ತೇವೆ’ ಎಂದು ಹೇಳಿದರು.