ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಣ್ಣಿನ ರಾಜ ಎಂದು ಕರೆಸಿಕೊಳ್ಳುವ ಮಾವಿನಹಣ್ಣಿನ ಮಾರುಕಟ್ಟೆಯೇ ಇಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾಗಿದೆ. ಇಲ್ಲಿ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲ. ರೈತರೇ ವ್ಯಾಪಾರಿಗಳು. ಜತೆಗೆ ಗ್ರಾಹಕ ಕೂಡ ನೇರವಾಗಿ ಕೊಳ್ಳಬಹುದು. ಈ ರೀತಿ ಒಂದೇ ಸೂರಿನಡಿ ನಾನಾ ತಳಿಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ತೋಟಗಾರಿಕೆ ಇಲಾಖೆ ಆಯೋಜಿಸಿದೆ. ಬೆಳಗಾವಿ ತೋಟಗಾರಿಕೆ ಇಲಾಖೆ ಶುಕ್ರವಾರದಿಂದ ಮೂರು ದಿನಗಳ ಕಾಲ ಮಾವು ಮೇಳ ಹಾಗೂ ದ್ರಾಕ್ಷಿ ಮೇಳವನ್ನು ನಗರದ ಕ್ಲಬ್ ರಸ್ತೆಯಲ್ಲಿನ ಹ್ಯೂಮ್ ಪಾಕ್೯ನಲ್ಲಿ ಆಯೋಜಿಸಿದೆ. ನಾನಾ ಬಗೆಯ ಮಾವುಗಳು ಹಾಗೂ ದ್ರಾಕ್ಷಿಗಳು ಇಲ್ಲಿ ಲಭ್ಯ ಇವೆ. ಭೀಕರ ಬರಗಾಲ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ನಷ್ಟದಲ್ಲಿರುವ ಮಾವು ಬೆಳೆಗಾರರಿಗೆ ನೆರವಾಗಲು ಈ ಮಾರಾಟ ಮೇಳ ಸಹಜವಾಗಿ ಅನುಕೂಲವಾಗಿದೆ.ದಲ್ಲಾಳಿಗಳ ಮಧ್ಯಸ್ಥಿಕೆಯಿಲ್ಲದೆ ಇರುವುದರಿಂದ ರೈತರಿಗೂ ಇದು ಹೆಚ್ಚು ಲಾಭ ತರುವುದರಲ್ಲಿ ಅನುಮಾನವಿಲ್ಲ. ಅಲ್ಲದೆ, ಗ್ರಾಹಕರು ಕೂಡ ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟಭರಿತ ಮಾವಿನ ಹಣ್ಣುಗಳನ್ನು ಪಡೆದುಕೊಳ್ಳಬಹುದು. ಈ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಈ ಮಾವು ಮೇಳವನ್ನು ಆಯೋಜಿಸಿದೆ.
ಯಾವ್ಯಾವ ಬಗೆಯ ಮಾವುಗಳು ಇಲ್ಲಿವೆ?:ರಸಪುರಿ, ಮಲ್ಲಿಕಾ, ಆಪೂಸ್, ಇಶಾಡ್, ಕೇಸರ್, ರತ್ನಗಿರಿ, ನೀಲಂ, ಕಾಲಪಾಡಿ, ರಸಪುರಿ, ಗೋವಾ ಮಣಕುರು, ಬೆನೆಟ್ ಆಪುಸ್, ಪೈರಿ, ಬಿಳಿ ಇಶಾಡ್, ಮುಂಡಪ್ಪ, ಪರ್ನಾಲ್, ಚಾಲ್ತಿ, ತೋತಾಪುರಿ, ವಿಶೇಷವಾಗಿ ಬೆಳಗಾವಿ ಮಾವು ಪ್ರೇಕ್ಷಕರ ಆಕರ್ಷಣೀಯವಾಗಿದೆ. ಒಂದೇ ಸೂರಿನಡಿ ಸಿಕ್ಕ ಸ್ಥಳೀಯ ಹಾಗೂ ಹೊರ ರಾಜ್ಯದ ಮಾವಿನ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಕೂಡ ಮುಗಿಬಿದ್ದರು. ಇನ್ನು ಹಣ್ಣಿನ ಜತೆಗೆ ವಿನಮಿಡಿ, ಮಸಾಲೆ ಉಪ್ಪಿನಕಾಯಿ, ತೋತಾಪುರಿ ಬಾಯಲ್ಲಿ ನೀರು ತರಿಸುವಂತಿತ್ತು.
----ಮಳೆಯ ಅಭಾವದಿಂದ ಅಷ್ಟೊಂದು ಪ್ರಮಾಣದಲ್ಲಿ ಮಾವುಗಳು ಸಿಗುತ್ತಿಲ್ಲ. ಬೆಳಗಾವಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಮೂರು ದಿನದ ಮಾವು ಮೇಳದಲ್ಲಿ ಮೊದಲನೇ ದಿನವೇ ಉತ್ತಮ ಪ್ರತಿಕ್ರಿಯೆ ದೊರತಿದೆ.
- ಸ್ವರೂಪ್, ಮಾವು ವ್ಯಾಪಾರಿ, ಮಹಾರಾಷ್ಟ್ರ----------
ಎಲ್ಲಿದೆ ಮೇಳ?- ಬೆಳಗಾವಿ ಕ್ಲಬ್ ರಸ್ತೆಯಲ್ಲಿನ ಹ್ಯೂಮ್ ಪಾಕ್೯ಎಷ್ಟು ದಿನ ನಡೆಯುತ್ತೆ?- ಶುಕ್ರವಾರದಿಂದ ಮೂರು ದಿನ