ಸಾರಾಂಶ
ವಸಂತಕುಮಾರ ಕತಗಾಲ
ಕಾರವಾರ: ಕುಂಟುತ್ತಾ ಸಾಗಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿರುವ ಶಿರಸಿ- ಕುಮಟಾ ಹೆದ್ದಾರಿಯ ನಿಧಾನ ಕಾಮಗಾರಿಗೆ ಹಲವು ಕಾರಣಗಳಿವೆ.ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆ ಪಡೆದಿರುವ ಆರ್‌ಎನ್ಎಸ್ ಕಂಪನಿಯ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಅಂತ್ಯದೊಳಗೆ ಹೆದ್ದಾರಿ ಕಾಮಗಾರಿ ಮುಕ್ತಾಯ ಆಗದಿದ್ದರೂ ಒಂದು ಹಂತಕ್ಕೆ ಬರಲಿದೆ. ಈಗ ಹತ್ತು ಸೇತುವೆಗಳ ನಿರ್ಮಾಣ ಕಾರ್ಯ ನಡೆದಿದೆ. ಅವುಗಳಲ್ಲಿ ಬೆಣ್ಣೆಹೊಳೆಗೆ ಅತಿ ದೊಡ್ಡ ಸೇತುವೆ. ಈಗ ಫೌಂಡೇಶನ್ ಆಗಿದ್ದು, ಕಾಂಕ್ರೀಟ್ ಕೂಡ ನಡೆದಿದೆ. ಮಾಸ್ತಿಹಳ್ಳ ಸೇತುವೆ ಕಾಂಕ್ರೀಟ್ ತನಕ ಬಂದಿದೆ. ಕಬ್ಬರ್ಗಿ ಕ್ರಾಸ್ ಸೇತುವೆ ಫೌಂಡೇಶನ್ ಹಾಕಲಾಗಿದೆ. ಉಳಿದ ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಗುತ್ತಿಗೆ ಪಡೆದಿರುವ ಆರ್‌ಎನ್‌ಎಸ್ ಕಂಪನಿ ಅಧಿಕಾರಿಗಳು ಹೇಳುತ್ತಾರೆ. ಈ ಹೆದ್ದಾರಿ ನಿರ್ಮಾಣಕ್ಕೆ ಟೆಂಡರ್ ಆಗಿ ಒಂದು ವರ್ಷವಾದರೂ ಭೂಸ್ವಾಧೀನದ ಬಗ್ಗೆ ಯಾವುದೆ ಬೆಳವಣಿಗೆ ಆಗದೆ ಇರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಈಗಲೂ ಕೆಲವೆಡೆ ಭೂಸ್ವಾಧೀನ ಆಗಬೇಕಿದೆ. ನಂತರ ಅರಣ್ಯ ಪರವಾನಗಿಗೆ ಮತ್ತಷ್ಟು ವಿಳಂಬ ಉಂಟಾಯಿತು. ಕರಾವಳಿ ಹಾಗೂ ಮಲೆನಾಡಿನಲ್ಲಿ ಆರು ತಿಂಗಳುಗಳ ಕಾಲ ಮಳೆ ಆಗುವುದರಿಂದ ವರ್ಷದಲ್ಲಿ ಆರು ತಿಂಗಳು ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ ಎಲ್ಲೆಡೆ ಕಡಿಮೆ ಎಂದರೂ 15- 16 ಮೀ. ಆಗಲ ಇರಲಿದೆ. ಆದರೆ ಕುಮಟಾ ಶಿರಸಿ ಹೆದ್ದಾರಿಗೆ ಕೇವಲ 12 ಮೀ. ಅಗಲದ ಸ್ಥಳ ನೀಡಿ ಕಾಮಗಾರಿ ನಡೆಯುವಾಗಲೂ ಭಾರಿ ವಾಹನಗಳನ್ನು ಬಿಡಬೇಕೆಂದರೆ ಹೇಗೆ ಸಾಧ್ಯ. ಅದರಲ್ಲೂ ಬೆಣ್ಣೆಹೊಳೆ ಸೇತುವೆ ಬಳಿ ಕಾಮಗಾರಿ ನಡೆದಿರುವಾಗ ಪಕ್ಕದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ತುಂಬ ಕಷ್ಟಕರ. ಎಲ್ಲ ವಾಹನಗಳು ಸಂಚರಿಸುತ್ತಿದ್ದರೆ ನಿರ್ಮಾಣ ಕಾಮಗಾರಿಯ ಜೆಸಿಬಿ, ಬೃಹತ್ ಯಂತ್ರಗಳ ಸರಾಗ ಓಡಾಟ ಸಾಧ್ಯವಾಗದು. ಇದರಿಂದ ವೇಗವಾಗಿ ರಸ್ತೆ ನಿರ್ಮಾಣ ಕಾರ್ಯ ಸಾಧ್ಯವಿಲ್ಲ ಎನ್ನುವುದು ಗುತ್ತಿಗೆ ಕಂಪನಿಯ ಅಧಿಕಾರಿಗಳ ವಾದ. ವಿಳಂಬಕ್ಕೆ ಕಾರಣಗಳು ಹಲವಾದರೂ ಹೆದ್ದಾರಿ ಬೇಗ ಬಳಕೆಗೆ ಸಿಗದೆ ಪ್ರಯಾಣಿಕರಿಗೆ ಭಾರಿ ಸಮಸ್ಯೆ ಉಂಟಾಗಿರುವುದಂತೂ ಹೌದು.
ಶೀಘ್ರ ಭೂಸ್ವಾಧೀನ: ಕತಗಾಲ ಹಾಗೂ ಸಮೀಪದ ಊರುಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಒಟ್ಟೂ 142 ಪ್ರಕರಣಗಳಿತ್ತು. ಅವುಗಳಲ್ಲಿ 26 ಪ್ರಕರಣಗಳು ಮಾತ್ರ ಇತ್ಯರ್ಥವಾಗಿ ಪರಿಹಾರ ನೀಡಲಾಗಿದೆ. ಎಲ್ಲವೂ ಇತ್ಯರ್ಥವಾಗಿ ಪರಿಹಾರ ನೀಡದೆ ಭೂಸ್ವಾಧೀನ ಮಾಡದ ಹೊರತೂ ಹೆದ್ದಾರಿ ನಿರ್ಮಾಣ ಸಾಧ್ಯವಿಲ್ಲದಂತಾಗಿದೆ. ಶೀಘ್ರವಾಗಿ ಭೂಸ್ವಾಧೀನ ಪೂರ್ಣಗೊಳ್ಳಬೇಕು ಎಂದು ಆರ್‌ಎನ್‌ಎಸ್ ಕಂಪನಿ ಎಂಜಿನಿಯರ್ ಗೋವಿಂದ ಭಟ್ ತಿಳಿಸಿದರು.