ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಕನ್ನಡಪ್ರಭ ವಾರ್ತೆ ಹಳಿಯಾಳ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಜ್ಯದಲ್ಲಿ ಅನಾವಶ್ಯಕವಾಗಿ ಚರ್ಚೆಯನ್ನು ಕಥೆಗಳನ್ನು ಹುಟ್ಟು ಹಾಕಲಾಗಿದ್ದು, ಇದರಲ್ಲಿ ಯಾವುದೇ ಹುರಳಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು, ನಾನು ಸಹ ದೆಹಲಿಗೆ ಹೋದಾಗ ಅವರನ್ನು ಭೇಟಿಯಾಗಿಯೇ ಬರುತ್ತೇನೆ. ಬೆಂಗಳೂರಿಗೆ ಅವರು ಆಗಮಿಸಿದಾಗ ಅವರನ್ನು ಭೇಟಿಯಾಗಿ ಮಾತನಾಡಿಸುತ್ತೇನೆ. ಹೀಗೆ ಭೇಟಿ ಮಾಡುವುದಕ್ಕೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದರು. ದಿ.ಮುಖ್ಯಮಂತ್ರಿ ಧರ್ಮಸಿಂಗ್ ಕ್ಯಾಬಿನೆಟ್‌ನಲ್ಲಿ ನಾನು ಸಹ ಖರ್ಗೆಯವರೊಂದಿಗೆ ಸಂಪುಟ ಸಹದ್ಯೋಗಿಯಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಆದರೆ ಕೆಲವರು ತಮ್ಮ ಜೀವನದಲ್ಲಿ ಒಂದೊಂದು ಗುರಿ ಕನಸನ್ನು ಹೊಂದಿರುತ್ತಾರೆ. ನಾನು ಶಾಸಕನಾಗಬೇಕು, ನಾನು ಸಂಸದನಾಗಬೇಕು, ಮಂತ್ರಿಯಾಗಬೇಕು, ಮುಖ್ಯಮಂತ್ರಿ ಯಾಗಬೇಕು, ಉಪಮುಖ್ಯಮಂತ್ರಿಯಾಗಬೇಕು ಹೀಗೆ ಗುರಿ ಮತ್ತು ಕನಸನ್ನು ಹೊಂದಿರುವುದು ತಪ್ಪಲ್ಲ ಎಂದರು.ನಮಗೆ ಹೈಕಮಾಂಡ್ ಇದೆ. ಅದು ನಿರ್ಧಾರಗಳನ್ನು ನಾವು ಒಪ್ಪಿಕೊಂಡು ಪಾಲಿಸುತ್ತೇವೆ. ಅದಕ್ಕಾಗಿ ನಮ್ಮಲ್ಲಿ ಶಿಸ್ತು ಇದೆ. ಹಾಗಾಗಿ ಕಾಂಗ್ರೆಸ್ ರಾಜ್ಯದಲ್ಲಿ ಆರೋಗ್ಯಕರವಾಗಿ ಬೆಳೆಯುತ್ತಿದೆ. ರಾಹುಲ್ ಗಾಂಧಿಯವರು ಹೆಚ್ಚಿನ ಆಸಕ್ತಿಯಿಂದ ದೇಶದಲ್ಲಿ ವಿರೋಧಿ ಪಕ್ಷಗಳ ಸಹಕಾರದಿಂದ ವಿರೋಧ ಪಕ್ಷಗಳನ್ನು ಸಬಲಿಕರಣಗೊಳಿಸುವ ಪ್ರಯತ್ನ ಆರಂಭಿಸಿದ್ದಾರೆ ಎಂದರು.ಹಳಿಯಾಳಕ್ಕೆ ವಿವಿಧ ಅಭಿವೃದ್ಧಿ ಯೋಜನೆಗೆ ₹28.67 ಕೋಟಿ ಮಂಜೂರು:
ವಸತಿ ಶಾಲೆ ನಿರ್ಮಾಣ ಸೇರಿದಂತೆ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಭೂಕುಸಿತ ತಡೆಗಟ್ಟಲು ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹28.67ಕೋಟಿ ಅನುದಾನವು ಮಂಜೂರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಹಳಿಯಾಳ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಕೊಠಡಿಗೆ ₹1.88 ಕೋಟಿ:ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಒಟ್ಟು 11 ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ₹1.88 ಕೋಟಿ ಅನುದಾನವು ಮಂಜೂರಾಗಿದ್ದು, ಕಾಮಗಾರಿಯ ಟೆಂಡರ್ ಸಹ ನಿಗದಿಪಡಿಸಲಾಗಿದ್ದು, ನೀಡಿದ ವಾಗ್ದಾಣದಂತೆ ಅತೀ ಶೀಘ್ರದಲ್ಲಿಯೇ ನಾವು ಒಟ್ಟು 11 ಕೊಠಡಿಗಳನ್ನು ನಿಗದಿತ ಅವಧಿಯಲ್ಲಿ ಸಿದ್ಧಪಡಿಸಿ ನೀಡಲಿದ್ದೆವೆ ಎಂದು ತಿಳಿಸಿದರು.ವಸತಿ ಶಾಲೆ:ದಾಂಡೇಲಿ ತಾಲೂಕಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮಂಜೂರಾಗಿದ್ದು, ಅದಕ್ಕಾಗಿ ₹5 ಕೋಟಿ ಮಂಜೂರಾಗಿದೆ. ಜೋಯಿಡಾ ತಾಲೂಕಿನ ಅಣಶಿಯಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮಂಜೂರಾಗಿದೆ. ಕೈಗಾ ಅಣು ವಿದ್ಯುತ್ ನಿಗಮ ಲಿಮಿಟೆಡ್ ಕಂಪನಿಯ ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ₹2.60 ಕೋಟಿ ನೀಡಲು ಆಡಳಿತಾತ್ಮಕ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.
ಭೂಕುಸಿತ ತಡೆಯಲು ₹21.79 ಕೋಟಿ:ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಭೂಕುಸಿತ ತಡೆಯುವ ದಿಸೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಗೃಹಸಚಿವರಿಗೆ ನಾನು ಮಾಡಿದ ಮನವಿ ಮತ್ತು ಮಾತುಕತೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಜಿಲ್ಲೆಗೆ ₹100 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಜೋಯಿಡಾ ತಾಲೂಕಿಗೆ ₹21.79 ಕೋಟಿ ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.ಹೊಸ ಡಿಪ್ಲೋಮಾ ತರಬೇತಿ:ಹಳಿಯಾಳದ ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಎರಡೂ ಹೊಸ ಡಿಪ್ಲೋಮಾ ಕೋರ್ಸ್ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಅಟೋಮೊಬೈಲ್ ಹಾಗೂ ಅಟೋಮೇಷನ್ ಮತ್ತು ರೋಬೋಟಿಕ್ಸ್ ಆರಂಭಗೊಳ್ಳಲಿದ್ದು, ಪ್ರತಿ ಕೋರ್ಸ್‌ಗಳಿಗೆ ತಲಾ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಅಲ್ಟರ್ನೆಟೀವ್ ಎನರ್ಜಿ ಟೆಕ್ನಾಲಜಿ ಕೋರ್ಸ್‌ಗಳು ನಡೆದಿವೆ ಎಂದರು.
ಆರೋಗ್ಯ ಸೇತು ಯೋಜನೆಯಲ್ಲಿ ಹಳಿಯಾಳ ಮತ್ತು ಜೋಯಿಡಾ ತಾಲೂಕಿಗೆ ಸಂಚಾರಿ ಚಿಕಿತ್ಸಾ ವೈದ್ಯಕೀಯ ಘಟಕವು ಮಂಜೂರಾಗಿದೆ. ಈ ಸಂಚಾರಿ ಚಿಕಿತ್ಸಾ ಘಟಕದಲ್ಲಿ ಒರ್ವ ವೈದ್ಯರು, ಸಿಬ್ಬಂದಿ ನರ್ಸ್ ಹಾಗೂ ಪ್ರಯೋಗಾಲಯ ತಜ್ಞರು ಇರುತ್ತಾರೆ. ಈ ಸಂಚಾರಿ ಘಟಕವು ಪ್ರತಿದಿನ ಎರಡೂ ಗ್ರಾಮಗಳಿಗೆ ಭೇಟಿ ನೀಡಿ ವೈದ್ಯಕೀಯ ಸೇವೆ ನೀಡಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಮುಖಂಡರಾದ ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ ಹಾಗೂ ವಿ.ಆರ್.ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಉಪಸ್ಥಿತರಿದ್ದರು.