ರಕ್ತದಾನದಿಂದ ಅಡ್ಡ ಪರಿಣಾಮ ಆಗುವುದಿಲ್ಲ : ಡಾ. ಜಯದೇವ್

| Published : Oct 01 2025, 01:00 AM IST

ರಕ್ತದಾನದಿಂದ ಅಡ್ಡ ಪರಿಣಾಮ ಆಗುವುದಿಲ್ಲ : ಡಾ. ಜಯದೇವ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ, ದೈಹಿಕ ದೌರ್ಬಲ್ಯವನ್ನು ಉಂಟು ಮಾಡದೇ, ಹೊಸ ರಕ್ತಕಣ ಉತ್ಪತ್ತಿಗೆ ಸಹಕಾರಿಯಾಗಲಿದೆ ಎಂದು ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಹೇಳಿದರು.

- ಎಐಟಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ, ದೈಹಿಕ ದೌರ್ಬಲ್ಯವನ್ನು ಉಂಟು ಮಾಡದೇ, ಹೊಸ ರಕ್ತಕಣ ಉತ್ಪತ್ತಿಗೆ ಸಹಕಾರಿಯಾಗಲಿದೆ ಎಂದು ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಹೇಳಿದರು.ನಗರದ ಎಐಟಿ ಕಾಲೇಜಿನಲ್ಲಿ ಮಂಗಳವಾರ ಹೋಲಿಕ್ರಾಸ್ ಆಸ್ಪತ್ರೆ, ಎಐಟಿ ರೆಡ್‌ಕ್ರಾಸ್ ಸೊಸೈಟಿ, ಎನ್‌ಎಸ್‌ಎಸ್ ಹಾಗೂ ಎಐಟಿ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ಧ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ರಕ್ತದಾನ ಮಾಡುವ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಲವೆಡೆ ರಕ್ತವು ಸರಿಯಾದ ಸಮಯಕ್ಕೆ ಸಿಗದೇ ಮೃತರಾಗುವ ಜೊತೆಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ಯುವಕರು ರಕ್ತದಾನ ಮಾಡುವುದು ಅತ್ಯಗತ್ಯ ಎಂದು ಹೇಳಿದರು.ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಯುವ ಸಮೂಹ ಹೆಚ್ಚು ಮುಂದಾಗಬೇಕು. ಕನಿಷ್ಟ ಮೂರ್‍ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಶರೀರ ಆರೋಗ್ಯದಿಂದ ಕೂಡಿರುವ ಜೊತೆಗೆ ಮತ್ತೊಂದು ಅಮೂಲ್ಯ ಜೀವವನ್ನು ರಕ್ಷಿಸಲು ಸಾಧ್ಯ ಎಂದರು.ಕಾಲೇಜು ವ್ಯಾಸಂಗದಿಂದಲೇ ರಕ್ತದಾನದಂಥ ಮಹಾತ್ಕಾರ್ಯದಲ್ಲಿ ಯುವಕರು ಮುಂದಾದರೆ ರಕ್ತದೊತ್ತಡ, ಮಧುಮೇಹ ದಂತಹ ರೋಗಗಳು ನಿಯಂತ್ರಣಕ್ಕೆ ಬರುವ ಜೊತೆಗೆ ಆತ್ಮತೃಪ್ತಿ ಸಿಗಲಿದೆ. ಸಮಾಜದ ಪ್ರಶಂಸೆಗೂ ಪಾತ್ರವಾಗಬಹುದು ಎಂದು ಕಿವಿಮಾತು ಹೇಳಿದರು.ಹೋಲಿಕ್ರಾಸ್ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಿ.ಟಿ.ಜೆ. ಲೂಸಿಜಾನ್ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಅಪಘಾತ, ಹೃದ್ರೋಗ ಸಮಸ್ಯೆಗಳು ಹೆಚ್ಚಳಗೊಳ್ಳುತ್ತಿವೆ. ಕಾಲಕ್ಕೆ ತಕ್ಕಂತೆ ಜೀವನಶೈಲಿ ಬದಲಾದ ಕಾರಣ ಕಾಯಿಲೆಗಳ ಸಂಖ್ಯೆ ಹೆಚ್ಚಿವೆ. ಹೀಗಾಗಿ ಬಿಡುವಿನ ವೇಳೆಯಲ್ಲಿ ರಕ್ತದಾನಕ್ಕೆ ಮುಂದಾದರೆ ಹೃದ್ರೋಗದಂತಹ ಮಾರಕ ಕಾಯಿಲೆಗಳಿಂದ ದೂರಾಗಬಹುದು ಎಂದರು.ಎಐಟಿ ರೆಡ್‌ಕ್ರಾಸ್ ಸೊಸೈಟಿ ಸಂಯೋಜಕ ಡಾ. ಜಿ.ಎಂ.ಸತ್ಯನಾರಾಯಣ್ ಮಾತನಾಡಿ, ಇಂದಿನ ರಕ್ತದಾನ ಶಿಬಿರದಲ್ಲಿ ಸುಮಾರು 100ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚೆಚ್ಚು ಯುವ ಸಮೂಹ ತೊಡಗಿಸಿಕೊಳ್ಳಲಿ ಎಂದರು.

ಈ ಸಂದರ್ಭದಲ್ಲಿ ಮಾದಕ ವ್ಯಸನ ಕೇಂದ್ರದ ಯೋಜನಾಧಿಕಾರಿ ಡಾ. ಅನಿತ್‌ಕುಮಾರ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ವೀರೇಂದ್ರ, ಡಾ. ಸಂಪತ್, ಡಾ. ಕಿರಣ್, ಪ್ರೊ.ಸಂಗರೆಡ್ಡಿ, ರಿಜಿಸ್ಟರ್ ಸಾಗರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 30 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರವನ್ನು ಡಾ. ಸಿ.ಟಿ. ಜಯದೇವ್‌ ಉದ್ಘಾಟಿಸಿದರು. ಡಾ. ಸತ್ಯನಾರಾಯಣ್‌, ಡಾ. ಅನಿತ್‌ಕುಮಾರ್‌ ಇದ್ದರು.