ಹೊಸಹಳ್ಳಿ ಶಾಲೆಯಲ್ಲಿ ಶಿಕ್ಷಕರೇ ಇಲ್ಲ

| Published : Aug 05 2025, 11:45 PM IST

ಸಾರಾಂಶ

ಕೆಜಿಎಫ್‌ನ ದಳವಾಯಿ ಹೊಸಹಳ್ಳಿ ಶಾಲೆಗೆ ಜಿಪಂ ಸಿಸಿಒ ಭೇಟಿ ನೀಡಿದಾಗ ಶಿಕ್ಷಕರೇ ಇರಲಿಲ್ಲ. ಶಿಕ್ಷಕರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದ ಜಿಪಂ ಸಿಇಒಗೆ ಶಿಕ್ಷಕ ತಮಿಳುನಾಡಿನ ದೇವಾಲಯಕ್ಕೆ ಪ್ರವಾಸ ಹೋಗಿರುವುದಾಗಿ ತಿಳಿಸಿದರು. ಶಿಕ್ಷಕರು ಶಾಲೆಯಿಂದ ರಜೆಯಲ್ಲಿ ತೆರಳಬೇಕಾದಲ್ಲಿ ಸಿಆರ್‌ಪಿ ಬದಲಿ ಶಿಕ್ಷಕರ ವ್ಯವಸ್ಥೆ ಮಾಡಬೇಕು. ಆದರೆ ಯಾವುದೇ ಬದಲಿ ವ್ಯವಸ್ಥೆ ಮಾಡಿರಲಿಲ್ಲ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಕೋಲಾರದ ಜಿಪಂ ಸಿಒಇ ಡಾ.ಪ್ರವೀಣ್ ಪಿ ಬಾಗೇವಾಡಿ ಅವರು ಕೆಜಿಎಫ್ ತಾಲೂಕಿನ ದಳವಾಯಿ ಹೊಸಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಮಾತ್ರ ಇದ್ದು ಶಿಕ್ಷಕರು ಇಲ್ಲದಿರುವುದು ಕಂಡು ಬಂತ್ತು,

ಶಿಕ್ಷಕರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದ ಜಿಪಂ ಸಿಇಒಗೆ ಶಿಕ್ಷಕ ತಮಿಳುನಾಡಿನ ದೇವಾಲಯಕ್ಕೆ ಪ್ರವಾಸ ಹೋಗಿರುವುದಾಗಿ ತಿಳಿಸಿದರು. ಶಿಕ್ಷಕರು ಶಾಲೆಯಿಂದ ರಜೆ ಮತ್ತು ಅನ್ಯ ಕಾರ್ಯನಿಮಿತ್ತ ತೆರಳಬೇಕಾದಲ್ಲಿ ಸಿಆರ್‌ಪಿ ಬದಲಿ ಶಿಕ್ಷಕರ ವ್ಯವಸ್ಥೆ ಮಾಡಬೇಕು. ಆದರೆ ಯಾವುದೇ ಬದಲಿ ವ್ಯವಸ್ಥೆ ಮಾಡದೇ ನಿರ್ಲಕ್ಯ ವಹಿಸಿರುವುದಾಗಿ ಕಂಡು ಬಂದಿದೆ.

ವಿವಿಧ ಕಾಮಗಾರಿಗಳ ವೀಕ್ಷಣೆ

ತಾಲೂಕಿನ ಕ್ಯಾಸಂಬಳ್ಳಿ ಗ್ರಾಮ ಪಂ, ವ್ಯಾಪ್ತಿಯ ಬಳುವನಹಳ್ಳಿ, ರಾಮಸಾಗರ, ಶ್ರೀನಿವಾಸಂದ್ರ ಗ್ರಾಪಂ ವ್ಯಾಪ್ತಿಯ ದಳವಾಯಿ ಹೊಸಹಳ್ಳಿ, ಬೆನ್ನವಾರ, ಮೇಲಪಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿ ಹಾಗೂ ಬಹುಗ್ರಾಮ ಕುಡಿಯುವ ನೀರು ಸ್ಥಾವರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.

ಸ್ಥಾವರದ ಜಾಕ್ವೆಲ್ ಸುತ್ತ ಸ್ವಚ್ಛಗೊಳಿಸಿ, ರಿಟೈನಿಂಗ್ ವಾಲ್ ನಿರ್ಮಿಸುವಂತೆ ತಿಳಿಸಿದರು. ಪ್ಯಾನಲ್ ಬೋರ್ಡ್ ದುರಸ್ತಿಗೆ ಬಂದಿದ್ದು, ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಬಹುಗ್ರಾಮ ಯೋಜನೆ

ಗ್ರಾಮಸ್ಥರಿಗೆ ಕೊಳವೆಬಾವಿ ಬದಲಾಗಿ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ನೀಡಬೇಕು. ಶುದ್ಧವಾದ ಸಿಹಿ ನೀರನ್ನು ಕುಡಿಯುವಂತೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ಪಿಡಿಒಗೆ ನಿರ್ದೇಶಿಸಿದರು. ತೆರಿಗೆ ವಸೂಲಾತಿ ಪರಿಶೀಲಿಸಿ ವಸೂಲಾತಿ ಕುಂಠಿತವಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ನೋಟಿಸ್ ನೀಡುವಂತೆ ಸೂಚಿಸಿದರು.

ಬಿಸಿಯೂಟ ಪರಿಶೀಲನೆ

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಸ್ವತಃ ತಾವೇ ಸೇವಿಸಿ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಕಾಲಕಾಲಕ್ಕೆ ಮಕ್ಕಳಿಗೆ ತೂಕ, ಎತ್ತರ, ಆರೋಗ್ಯ ತಪಾಸಣೆ ನಡೆಸುವಂತೆ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಾಪಂ ಇಒ ವೆಂಕಟೇಶಪ್ಪ, ಸಹಾಯಕ ನಿರ್ದೇಶಕರು, ಗ್ರಾಪಂ ಸದಸ್ಯರು, ಪಿಡಿಒ, ಗ್ರಾಮಸ್ಥರು ಉಪಸ್ಥಿತರಿದ್ದರು.