ಶಿಕ್ಷಣ ಪಡೆಯಬೇಕೆಂಬ ಜಾಗೃತಿ ಮೂಡಿದೆ: ರುದ್ರಪ್ಪ ಲಮಾಣಿ

| Published : Jan 31 2024, 02:15 AM IST

ಶಿಕ್ಷಣ ಪಡೆಯಬೇಕೆಂಬ ಜಾಗೃತಿ ಮೂಡಿದೆ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿತ್ರಿಬಾಯಿ ಅವರ ತ್ಯಾಗದ ಫಲವಾಗಿ ಇಂದು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ನಿಜವಾದ ಅಕ್ಷರ ಸರಸ್ವತಿ.

ಶೈಕ್ಷಣಿಕ ಕಾರ್ಯಾಗಾರ ಮತ್ತು ಉತ್ತಮ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಹಾವೇರಿ

ಇಂದಿನ ದಿನಮಾನಗಳಲ್ಲಿ ಎಲ್ಲ ವರ್ಗದ ಮಹಿಳೆಯರಲ್ಲಿ ಶಿಕ್ಷಣ ಪಡೆಯಬೇಕೆಂಬ ಜಾಗೃತಿ ಮೂಡಿದೆ. ಶಿಕ್ಷಣ ಇಲ್ಲದಿದ್ದರೆ ಸಮಾಜದಲ್ಲಿ ನಮಗೊಂದು ಸ್ಥಾನ ಇಲ್ಲ ಎಂಬ ಅರಿವು ಮೂಡಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ಉತ್ತಮ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಶತಮಾನದ ಹಿಂದೆ ಎಲ್ಲ ಸಂಕಷ್ಟಗಳನ್ನು ಎದುರಿಸಿದ ಸಾವಿತ್ರಿಬಾಯಿ ಅವರ ತ್ಯಾಗದ ಫಲವಾಗಿ ಇಂದು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ನಿಜವಾದ ಅಕ್ಷರ ಸರಸ್ವತಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಮತ್ತು ರಾಷ್ಟ್ರೀಯ ಅಧ್ಯಕ್ಷೆ ಲತಾ ಎಸ್. ಮುಳ್ಳೂರ, ಅಕ್ಷರ ಅರಿವು ಹಾಗೂ ಮೌಢ್ಯಗಳ ವಿರುದ್ಧ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ದಿನವೇ ಮಹಿಳೆಯರಿಗೆ ಪ್ರಶಸ್ತಿ ನೀಡಬೇಕು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ತಮ್ಮ ಸಂಘ ಕೇಳದಿದ್ದರು ಎರಡುವರೆ ಗುಂಟೆ ಜಮೀನನ್ನು ಸಾವಿತ್ರಿಬಾಯಿ ಫುಲೆ ಸಭಾಭವನಕ್ಕೆ ನೀಡಲಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಗದಿತ ಮೊತ್ತವನ್ನು ತುಂಬಿ ಪಡೆಯಬೇಕು. ಈಗಾಗಲೇ ನಗರದ ಉದ್ಯಾನವನಕ್ಕೆ ಅವರ ಹೆಸರನ್ನು ಇಡಲಾಗಿದೆ ಎಂದರು.

ಹಿರಿಯ ನ್ಯಾಯವಾದಿ ಕೆ.ಎಲ್. ಅಂಗರಗಟ್ಟಿ ವಿಶೇಷ ಉಪನ್ಯಾಸ ನೀಡಿ, ಸಾವಿತ್ರಿಬಾಯಿ ಫುಲೆ ಇಡೀ ದೇಶಕ್ಕೆ ಒಂದು ಮಾದರಿಯ ಮಹಿಳೆ. ಹೋರಾಟವನ್ನು ಮೈಗೂಡಿಸಿಕೊಂಡ ಜಾಗೃತ ಪ್ರಜ್ಞೆ ಎಂದರು.

ಸಾನಿಧ್ಯ ವಹಿಸಿದ್ದ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಕೇವಲ ಶಿಕ್ಷಕಿಯರು ಮಾತ್ರ ಸಂಘಟಿತರಾಗದೆ, ನಿರ್ಲಕ್ಷಿತ ಸಾಮಾನ್ಯ ಮಹಿಳೆಯರಿಗೂ ಸಾವಿತ್ರಿಬಾಯಿ ಫುಲೆ ವಿಚಾರಧಾರೆಗಳನ್ನು ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಉದ್ಯಮಿ ಪ್ರಕಾಶ ಶೆಟ್ಟಿ, ಜಿಲ್ಲಾ ಮತ್ತು ತಾಲೂಕಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಶಾಂತಗಿರಿ, ಸುರೇಶ ಕಲ್ಮನಿ, ಎನ್.ಪಿ. ಬಣಕಾರ, ಪೃಥ್ವಿರಾಜ ಬೆಟಗೇರಿ, ಶೋಭಾ ಜಾಗಟಗೇರಿ, ದಾಕ್ಷಾಯಣಿ ವಾಲ್ಮೀಕಿ, ರಶ್ಮಿ ನಾಗೇನಹಳ್ಳಿ, ಪ್ರಭಾವತಿ, ಎನ್.ವೈ. ದುರ್ವೆ, ಉಷಾ ನವಲೆ, ಪಾರ್ವತಿ ಪಾಟೀಲ, ಮಂಜುಳಾ ಕಡ್ಲೇರ, ಸೀಮಾ ಕೌಸರ, ಅಕ್ಷತಾ ಹಿರೇಮಠ ಇತರರಿದ್ದರು.

ಸಮಾರಂಭವನ್ನು ಅಕ್ಕಮಹಾದೇವಿ ನೀರಲಗಿ, ಬಸವರಾಜ ಅರಳಿ, ಇ.ಸಿ. ಅಗಸಿಬಾಗಿಲ, ಬಸವರಾಜ ಹಳೇಮನಿ ಇತರರು ಸಂಘಟಿಸಿದ್ದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ೧೮ ಜನ, ಪ್ರಾಥಮಿಕ ಶಾಲೆಯ ೮ ಜನ ರಾಜ್ಯ ಸಮಿತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಗೌರವ ಪಡೆದರೆ, ಜಿಲ್ಲಾ ಸಮಿತಿಯಿಂದ ಒಟ್ಟು ೧೬ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಡಾ. ಗೀತಾ ಸುತ್ತಕೋಟಿ ಸ್ವಾಗತಿಸಿದರು. ಪುಷ್ಪಾ ಬಗಾಡೆ ನೃತ್ಯ ಪ್ರದರ್ಶನ ಮಾಡಿದರು. ಕವಿತಾ ಕೆ.ಎಸ್. ಮತ್ತು ದಾಕ್ಷಾಯಣಿ ಕೆ. ನಿರೂಪಿಸಿ, ಚಂದ್ರಮ್ಮ ಬಿ. ವಂದಿಸಿದರು.