ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಅಂದಿನ ಯುದ್ಧಕ್ಕೂ ಈಗಿನ ಯುದ್ಧಕ್ಕೂ ಬಹಳ ವ್ಯತ್ಯಾಸವಿದೆ. ಭಾರತವು ಈಗ ಯಾವುದೇ ವೈರಿಯ ಅಡಗುತಾಣಕ್ಕೆ ಒಂದು ಅಡಿಯೂ ಹಿಂದುಮುಂದಾಗದಂತೆ ತಾಗುವಂತೆ ಮಿಸೈಲ್ ದಾಳಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
-ಇದು ಭಾರತೀಯ ಸೇನೆಯ ವಿಮಾನಪಡೆಯ ನಿವೃತ್ತ ಸಾರ್ಜೆಂಟ್ ಕಿಗ್ಗಾಲು ಎಸ್ ಗಿರೀಶ್ ಅವರ ಅಭಿಪ್ರಾಯ.ಅಖಂಡ ಭಾರತವನ್ನು ಬ್ರಿಟಿಷರು ತೊರೆದು ಹೊರಡುವಾಗ ಮಹಾತ್ಮಾ ಗಾಂಧಿ ಮತ್ತು ನೆಹರೂ ಅವರು ಇದನ್ನು ಮೂರು ಭಾಗಗಳಾಗಿ ವಿಭಜಿಸಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಹಾಗೂ ಭಾರತವೆಂಬ ಮೂರು ತುಂಡುಗಳನ್ನು ಮಾಡಿದರು. ನಂತರ ಪೂರ್ವ ಪಾಕಿಸ್ತಾನವು ತನ್ನ ಪ್ರಜೆಗಳಿಂದ ಎಲ್ಲ ತೆರಿಗೆಗಳನ್ನು ಸಂಗ್ರಹಿಸಿ ಪಶ್ಚಿಮ ಪಾಕಿಸ್ತಾನದ ನಾಯಕ ಅಯೂಬ್ ಖಾನನಿಗೆ ನೀಡಬೇಕಾಗಿ ಬರುತ್ತಿತ್ತು. ಈ ತೆರಿಗೆ ಹಣದ ಬಹುಪಾಲು ಮೊತ್ತವನ್ನು ಪೂರ್ವ ಪಾಕಿಸ್ಥಾನದ ಅಭಿವೃದ್ಧಿಗೆ ತೆರಿಗೆಯ ಹಣವನ್ನು ನೀಡದಿದ್ದುದರಿಂದ ಅಂದಿನ ಪೂರ್ವ ಪಾಕಿಸ್ತಾನದ ಅಧ್ಯಕ್ಷ ಮುಜೀಬುರ್ ರೆಹಮಾನ್ ರೊಚ್ಚಿಗೆದ್ದು ವಿವಿಧ ಚಳುವಳಿಗಳನ್ನು ಮಾಡತೊಡಗಿದನು. ಇದರಿಂದ ರೋಸಿಹೋದ ಅಲ್ಲಿನ ಪ್ರಜೆಗಳು ಭಾರತದ ಗಡಿಯೊಳಗೆ ನುಸುಳತೊಡಗಿದರು. ಭಾರತಕ್ಕೆ ಇದು ದೊಡ್ಡ ಹೊರೆಯೆನಿಸಿದಾಗ ಭಾರತವು ಪೂರ್ವ ಪಾಕಿಸ್ತಾನದ ವಿರುದ್ಧ ಕದನವನ್ನು ಸಾರಿ ಅದನ್ನು ಅಯೂಬ್‌ಖಾನನ ಹಿಡಿತದಿಂದ ಬಿಡಿಸಿಕೊಟ್ಟಿತು ಎನ್ನುತ್ತಾರೆ ಗಿರೀಶ್. ಭಾರತವು ಆಗ ಪೂರ್ವ ಪಾಕಿಸ್ತಾನದ ಸೇನೆಯನ್ನು ಪತರುಗುಟ್ಟಿಸಲು ಬಳಸುತ್ತಿದ್ದ ವಿಮಾನಗಳು ಬಹಳ ನಿಧಾನಗತಿಯಲ್ಲಿ ಹಾರುತ್ತಿದ್ದುವಲ್ಲದೆ ಬಾಂಬ್ ದಾಳಿಗಾಗಿ ಗಿರಿಗಿಟ್ಟಿಯ ಇಂಜಿನ್ ಇರುವ ಎ ಎನ್ 12 ಎಂಬ ಬೃಹತ್ ವಿಮಾನಗಳನ್ನು ಹಂಟರ್, ಅಜೀತ್ ವಿಮಾನಗಳ ಬೆಂಗಾವಲಿನಲ್ಲಿ ಕಳುಹಿಸಿಕೊಡಲಾಗುತ್ತಿತ್ತು. ಆಗ, ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂದೇಶವನ್ನು ತಲುಪಿಸಲು ಬಹಳ ಸಮಯವು ತಗಲುತ್ತಿತ್ತು. ಟೆಲಿಗ್ರಫಿಯಲ್ಲಿ ಬಳಸುವ ಮೋರ್ಸ್ ಸಂಕೇತಗಳಿಂದ ಸಂದೇಶವನ್ನು ಕಳುಹಿಸಬೇಕಾಗುತ್ತಿತ್ತು. ಭಾರತದ ವಾಯುನೆಲೆಗಳಲ್ಲಿ ಟೆಲಿಪ್ರಿಂಟರ್ ಎನ್ನುವ ಸಂವಹನ ಮಾಧ್ಯಮವು ಆ ಸಮಯದಲ್ಲಿ ಆರಂಭದ ಹಂತದಲ್ಲಿಯೇ ಇದ್ದು ಭೂಮಿಯ ಅಡಿಯಲ್ಲಿ ತಂತಿಗಳನ್ನು ಹುಗಿದು ಅದರ ಮೂಲಕ ಸಂದೇಶಗಳು ಹೋಗುತ್ತಿದ್ದವು. ಈ ಸಂದೇಶಗಳು ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಕರಪ್ಟ್ ಆಗುತ್ತಿದ್ದು ಸಂದೇಶವನ್ನು ಮತ್ತೊಮ್ಮೆ, ಮಗದೊಮ್ಮೆ ಕಳುಹಿಸಬೇಕಾದ ಪ್ರಮೇಯವೂ ಬರುತ್ತಿತ್ತು ಎಂದು ಗಿರೀಶ್ ವಿವರಿಸಿದರು.
ಡ್ರೋನ್‌ಗಳ ಬಳಕೆ ಇರಲೇ ಇಲ್ಲ:ಆ ಬಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಸಾಮಾನ್ಯ ರೆಡಾರ್‌ಗಳನ್ನು ಬಳಸುತ್ತಿದ್ದರಲ್ಲದೆ ವೈರಿಯ ವಿಮಾನವನ್ನು ಲಾಕ್ ಮಾಡಿ ಅದನ್ನು ಹೊಡೆದುರುಳಿಸುವ ಸಾಮರ್ಥ್ಯವು ಭಾರತಕ್ಕೆ ಆಗ ಇರಲಿಲ್ಲ. ಡ್ರೋನ್‌ಗಳ ಬಳಕೆಯಂತೂ ಇರಲೇ ಇಲ್ಲ. ಉಪಗ್ರಹಗಳ ಆಧಾರದಿಂದ ವೈರಿಗಳ ನೆಲೆಯನ್ನು ಗುರುತಿಸುವ ವ್ಯವಸ್ಥೆಯೂ ಇರಲಿಲ್ಲ. ಆದರೂ ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನವೇ ನಕ್ಷತ್ರಗಳ ಗುರುತನ್ನು ಬಳಸಿಕೊಂಡು ಕ್ಯಾನ್‌ಬೆರಾದಂತಹ ಬಾಂಬರ್‌ಗಳು ಹಾರಿ ವೈರಿಗಳ ನೆಲೆಯತ್ತ ಬಾಂಬ್‌ಗಳನ್ನು ಎಸೆದು ಬರಬೇಕಾಗುತ್ತಿತ್ತು. ಈ ವಿಮಾನಗಳಲ್ಲಿ ಬಳಸುತ್ತಿದ್ದ ಏರ್ ಟು ಗ್ರೌಂಡ್ ಸಂಪರ್ಕಕ್ಕೆ ವಾಲ್ವ್ ಟ್ಯೂಬ್‌ಗಳಿರುವ ಎಸ್‌ಟಿ ಆರ್ 9 ಎಕ್ಸ್ ಎನ್ನುವಂತಹ ಜೇನುಪೆಟ್ಟಿಗೆಯ ಗಾತ್ರದ ಉಪಕರಣಗಳನ್ನು ಬಳಸಲಾಗುತ್ತಿತ್ತು ಎಂದು ಗಿರೀಶ್ ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿದರು.
ಈಗ ಅವೆಲ್ಲವೂ ಕೇವಲ ನೆನಪಾಗಿಯಷ್ಟೇ ಉಳಿಯುತ್ತವೆ. ಈಗ, ಕೆಲವೇ ಸೆಕೆಂಡ್‌ಗಳಲ್ಲಿ ವಿಶ್ವದ ಯಾವುದೇ ಭಾಗಕ್ಕೂ ಸಂದೇಶಗಳನ್ನು ಕಳುಹಿಸಬಹುದಾಗಿದೆಯಲ್ಲದೆ ನೈಟ್‌ವಿಶನ್ ಕನ್ನಡಕದ ಮೂಲಕ ಅಮಾವಾಸ್ಯೆಯ ರಾತ್ರಿಯಲ್ಲಿಯೂ ವಿಮಾನಗಳಲ್ಲಿ ಕುಳಿತು ರಡಾರ್ ಮಾರ್ಗದರ್ಶನದಲ್ಲಿ ನಿಖರವಾಗಿ ದಾಳಿಯನ್ನು ಮಾಡಬಹುದಾಗಿದೆ. ಇಸ್ರೇಲ್‌ನ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಭಾರತವು ಈಗ ಯಾವುದೇ ವೈರಿಯ ಅಡಗುತಾಣಕ್ಕೆ ಒಂದು ಅಡಿಯೂ ಹಿಂದುಮುಂದಾಗದಂತೆ ತಾಗುವಂತೆ ಮಿಸೈಲ್ ದಾಳಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಯುದ್ಧವನ್ನು ಯಾರೂ ಬಯಸುವುದಿಲ್ಲ. ಯುದ್ಧದಲ್ಲಿ ಪಾಲ್ಗೊಳ್ಳುವ ಎರಡೂ ರಾಷ್ಟ್ರಗಳಿಗೆ ಅಪಾರಮೌಲ್ಯದ ನಷ್ಟವುಂಟಾಗುವುದಲ್ಲದೆ ಮೌಲ್ಯವನ್ನು ಕಟ್ಟಲಾಗದ ಜೀವಹಾನಿಯೂ ಆಗುವುದು. ಆದರೆ, ತನ್ನ ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ ಯುದ್ಧವು ಅನಿವಾರ್ಯವಾಗಿಬಿಡುತ್ತದೆ. ಯುದ್ಧದಲ್ಲಿ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪುತ್ತಾರೆಯೇ ಹೊರತು ಯಾವುದೇ ನಾಯಕರೂ ಜೀವವನ್ನು ಕಳೆದುಕೊಳ್ಳುವುದಿಲ್ಲ ಎಂದು ಗಿರೀಶ್ ಹೇಳುತ್ತಾರೆ.ಗೆಲ್ಲುವುದೊಂದೇ ಧ್ಯೇಯವಾಗಿರುತ್ತದೆ:
ಯುದ್ಧವೆಂಬ ಹೋರಾಟದಲ್ಲಿ ಗೆದ್ದ ರಾಷ್ಟ್ರಕ್ಕೆ ಮಾತ್ರ ವಿಜಯಮಾಲೆಯು ಲಭಿಸುತ್ತದೆಯಷ್ಟೇ ಹೊರತು ಸೋತರಾಷ್ಟ್ರಕ್ಕೆ ದ್ವಿತೀಯ ಬಹುಮಾನವಾಗಲೀ ಅಥವಾ ಸಮಾಧಾನಕರ ಬಹುಮಾನವಾಗಲೀ ಎಂದೂ ಇರುವುದಿಲ್ಲ. ಹಾಗಾಗಿ ಒಮ್ಮೆ ಯುದ್ಧಕ್ಕೆ ಇಳಿದಾಗ ಗೆಲ್ಲುವುದೊಂದೇ ಧ್ಯೇಯವಾಗಿರುತ್ತದೆ. ಭಾರತವು ಈಗ ವೈರಿಯೊಂದಿಗೆ ಹೋರಾಡಬೇಕಾಗಿ ಬಂದಿರುವುದರಿಂದ ಪ್ರತಿಯೊಬ್ಬ ಭಾರತೀಯನೂ ಪರೋಕ್ಷವಾಗಿಯಾದರೂ ದೇಶದ ವಿಜಯಕ್ಕೆ ತನ್ನನ್ನು ಅರ್ಪಿಸಿಕೊಳ್ಳಲೇಬೇಕಾಗಿದೆ ಎನ್ನುವುದು ಗಿರೀಶ್ ಅವರ ಅಭಿಪ್ರಾಯವಾಗಿದೆ.