2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕುತಂತ್ರ ನಡೆದಿದೆ: ಬಸನಗೌಡ ಪಾಟೀಲ್ ಯತ್ನಾಳ್

| Published : Nov 21 2025, 01:30 AM IST

2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕುತಂತ್ರ ನಡೆದಿದೆ: ಬಸನಗೌಡ ಪಾಟೀಲ್ ಯತ್ನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ದೇವಸ್ಥಾನಗಳ ಮೇಲೆ ಧ್ವನಿವರ್ಧಕ ಹಾಕಲು ಮತ್ತು ಗಣಪತಿ ಪ್ರತಿಷ್ಠಾಪಿಸಲು ಪೊಲೀಸರ ಅನುಮತಿ ಪಡೆಯಬೇಕು. ಆದರೆ, ದಿನಕ್ಕೆ ಐದುಬಾರಿ ಮಸೀದಿಗಳಲ್ಲಿ ಕೂಗುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಮುಸ್ಲಿಮರಿಗೊಂದು ಕಾನೂನು ಹಿಂದೂಗಳಿಗೊಂದು ಕಾನೂನೇ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹಿಂದೂಗಳು ಎಚ್ಚರ ವಹಿಸದಿದ್ದರೆ ಮುಂದೊಂದು ದಿನ ಭಾರತ ಪಾಕಿಸ್ತಾನವಾಗುತ್ತದೆ. 2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕುತಂತ್ರ ನಡೆದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಜಾತ್ಯಾತೀತ ಎಂಬ ನಕಲಿ ಡೋಂಗಿಗಳು ನಡೆಸುತ್ತಿರುವ ಸರ್ಕಾರ, ಹಿಂದೂ ಒಕ್ಕಲಿಗ, ಲಿಂಗಾಯತ, ದಲಿತ, ಹಿಂದುಳಿದ ವರ್ಗಗಳ ಸರ್ಕಾರವಲ್ಲ. ಅದು ಕೇವಲ ಮುಸಲ್ಮಾನರ ಸರ್ಕಾರವಾಗಿದೆ ಎಂದು ದೂಷಿಸಿದರು.

ಇಸ್ರೇಲ್ ಮಾದರಿಯಲ್ಲಿ ಡ್ರೋನ್ ಮೂಲಕ ಹಿಂದೂಗಳನ್ನು ಹತ್ಯೆಗೈಯುವ ಸಂಚು ನಡೆಸಿರುವುದು ಬಯಲಾಗಿದೆ. ಹಿಂದೂ ಪವಿತ್ರ ದೇವಸ್ಥಾನಗಳ ಕುಡಿಯುವ ನೀರಿನ ಪೈಪ್‌ಗಳಿಗೆ ವಿಷಮಿಶ್ರಣ ಮಾಡಿ ಪ್ರಸಾದದಲ್ಲಿ ವಿಷಹಾಕಿ ಹಿಂದೂಗಳನ್ನು ಕೊಲೆ ಮಾಡಲು ಯತ್ನಿಸಿರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ ಎಂದು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಬೇಕೆಂದರೆ ಜಾತಿ ನೋಡದೆ ಪ್ರತಿಯೊಬ್ಬರೂ ಹಿಂದೂ ಪರ ವ್ಯಕ್ತಿಗೆ ಮತ ಹಾಕಲು ಪ್ರತಿಜ್ಞೆ ಮಾಡಬೇಕು. ರಾಜ್ಯದಲ್ಲಿ ಹಿಂದುತ್ವವನ್ನು ಉಳಿಸಬೇಕೆಂಬ ಚಿಂತನೆಯಿಂದ ಜಾತಿ, ಮತ ಬಿಟ್ಟು ಎಲ್ಲರೂ ಒಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಹಿಂದೂಗಳು ಒಂದಾಗದಿದ್ದರೆ ಮತ್ತು ಹಿಂದೂಗಳನ್ನು ಪ್ರತಿನಿಧಿಸುವ ವ್ಯಕ್ತಿ ರಾಜ್ಯದ ನೇತೃತ್ವ ವಹಿಸದಿದ್ದರೆ ದೇಶದಲ್ಲಿ ಹಿಂದೂಗಳಿಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.

ಜಾತಿ ವ್ಯವಸ್ಥೆಯಿಂದ ಹೊರಬರದಿದ್ದರೆ ನಮ್ಮ ದೇವಸ್ಥಾನಗಳು ಉಳಿಯುವುದಿಲ್ಲ. ಎಲ್ಲಾ ಹಿಂದೂಗಳು ದೇವಸ್ಥಾನದ ಪೂಜಾ ಸಾಮಗ್ರಿಗಳನ್ನು ಹಿಂದೂಗಳಲ್ಲಿಯೇ ಖರೀದಿಸಬೇಕು. ಎಲ್ಲೆಂದರಲ್ಲಿ ಹೂವು ತೆಗೆದುಕೊಂಡರೆ ಅದು ದೇವರಿಗೆ ಅರ್ಪಣೆಯಾಗುವುದಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಾಯಿ ತೆಗೆದರೆ ಮುಸ್ಲಿಂ ಎನ್ನುತ್ತಾರೆ. ರಾಜ್ಯದ ವಿಧಾನಸೌಧ ಇಂದು ದಾಡಿ ಮತ್ತು ಬುರ್ಕಾಗಳಿಂದ ತುಂಬಿ ತುಳುಕುತ್ತಿದ್ದು, ಇದು ಕರ್ನಾಟಕದ ವಿಧಾನಸಭೆಯೋ ಅಥವಾ ಅರಬಸ್ತಾನದ ವಿಧಾನಸಭೆಯೋ ಎನ್ನುವಂತಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಕೂಡ ರಾಜ್ಯದ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮತ್ತು ಶಿಕ್ಷಕರ ನೇಮಕಾತಿಗೆ ಹಣವಿಲ್ಲ ಎನ್ನುವ ಮುಖ್ಯಮಂತ್ರಿಗಳು ಮದರಸಾ ಮತ್ತು ಉರ್ದು ಶಾಲೆಗಳಿಗೆ ಎಷ್ಟು ಬೇಕಾದರೂ ಹಣ ನೀಡುತ್ತೇನೆ ಎನ್ನುತ್ತಾರೆ. ಕುರಿಗಾಹಿಗಳಿಗೆ 5 ಲಕ್ಷ ರು. ಸಬ್ಸಿಡಿ ಕೊಡುತ್ತೇವೆಂದಿದ್ದರೆ ಹಿಂದೂಗಳಿಗೆ ಸಿಗುತ್ತಿದೆ ಎಂದು ನಾವು ಖುಷಿ ಪಡಬಹುದಿತ್ತು. ಆದರೆ, ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ನನ್ನನ್ನು ಮುಸಲ್ಮಾನ ಎಂದೇ ತಿಳಿದುಕೊಳ್ಳಿ ಎನ್ನುವ ಕೀಳುಮಟ್ಟಕ್ಕಿಳಿದಿದ್ದಾರೆ. ತಾನು ಹುಟ್ಟಿದ ಸಮಾಜದ ಬಗ್ಗೆ ಗೌರವ ಇಲ್ಲದ ವ್ಯಕ್ತಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿರುವುದು ನಾಡಿನ ದುರ್ದೈವ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಹಿಂದೂಗಳು ಜಾಗೃತರಾಗದಿದ್ದರೆ ಕಳೆದ 25 ವರ್ಷ ಮುಸ್ಲಿಂ ಮತ್ತು ಯಾದವರು ಬಿಹಾರವನ್ನು ಲೂಟಿ ಮಾಡಿದಂತೆ ರಾಜ್ಯದಲ್ಲಿಯೂ ಲೂಟಿ ನಡೆಯುತ್ತದೆ. ಗ್ಯಾರಂಟಿಯನ್ನು ನಂಬಿಕೊಂಡು ರಾಜ್ಯದ ಜನರು ಕಾಂಗ್ರೆಸ್‌ಗೆ ಮತ ನೀಡಿದ್ದರಿಂದ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ದೇವಸ್ಥಾನಗಳ ಮೇಲೆ ಧ್ವನಿವರ್ಧಕ ಹಾಕಲು ಮತ್ತು ಗಣಪತಿ ಪ್ರತಿಷ್ಠಾಪಿಸಲು ಪೊಲೀಸರ ಅನುಮತಿ ಪಡೆಯಬೇಕು. ಆದರೆ, ದಿನಕ್ಕೆ ಐದುಬಾರಿ ಮಸೀದಿಗಳಲ್ಲಿ ಕೂಗುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಮುಸ್ಲಿಮರಿಗೊಂದು ಕಾನೂನು ಹಿಂದೂಗಳಿಗೊಂದು ಕಾನೂನೇ ಎಂದು ಪ್ರಶ್ನಿಸಿದರು.

ವೋಟ್ ಚೋರಿ ಎಂದು ಈಗ ಬಾಯಿ ಬಡಿದುಕೊಳ್ಳುತ್ತಿರುವವರು ಮೊದಲು ಅವರ ಮುತ್ಯಾ (ತಾತ) ಅಧಿಕಾರಕ್ಕಾಗಿ ಏನು ಮಾಡಿದರೆಂದು ದೇಶದ ಜನರಿಗೆ ತಿಳಿಸಲಿ ಎಂದು ಪರೋಕ್ಷವಾಗಿ ರಾಹುಲ್‌ಗಾಂಧಿ ಅವರನ್ನು ಜರಿದರು.

ಪಟ್ಟಣಕ್ಕೆ ಭೇಟಿ ಕೊಟ್ಟ ಯತ್ನಾಳ್ ಅವರು ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದ ಗಣಪತಿ ದೇವಸ್ಥಾನಕ್ಕೆ ಈಡುಗಾಯಿ ಒಡೆದು ನಮಸ್ಕರಿಸಿದರು. ನಂತರ ಜೆಸಿಬಿ ಯಂತ್ರಗಳ ಮೂಲಕ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದ ನೂರಾರು ಮಂದಿ ಹಿಂದೂ ಕಾರ್ಯಕರ್ತರು, ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನಕ್ಕೆ ಕರೆತಂದರು.

ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಯತ್ನಾಳ್ ಬಳಿಕ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠಕ್ಕೆ ಭೇಟಿ ಕೊಟ್ಟು ಕ್ಷೇತ್ರಾಧಿದೇವತೆಗಳು ಮತ್ತು ಶ್ರೀಗಳ ದರ್ಶನಾಶೀರ್ವಾದ ಪಡೆದು ತೆರಳಿದರು.