ಕರಾವಳಿಯಲ್ಲಿ ಎರಡು ಧರ್ಮದ ಪಾತಕಿಗಳ ಫ್ಯಾಕ್ಟರಿ ಇದೆ : ರಾಮಲಿಂಗಾರೆಡ್ಡಿ

| N/A | Published : May 06 2025, 12:18 AM IST / Updated: May 06 2025, 01:06 PM IST

Ramalingareddy
ಕರಾವಳಿಯಲ್ಲಿ ಎರಡು ಧರ್ಮದ ಪಾತಕಿಗಳ ಫ್ಯಾಕ್ಟರಿ ಇದೆ : ರಾಮಲಿಂಗಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿಯಲ್ಲಿ ಒಂದು ಕಡೆ ಹಿಂದೂ ಸಂಘಟನೆಯವರ ಮತ್ತೊಂದು ಕಡೆ ಮುಸ್ಲಿಂ ಸಂಘಟನೆಯ ಪಾತಕಿಗಳ ಫ್ಯಾಕ್ಟರಿ ಇದೆ. ಯಾರ ಕಡೆಯವರೇ ಇರಲಿ, ಅಪರಾಧಿಗಳಿಗೆ ಶಿಕ್ಷೆಯಾಗಬೇಕು.

  ಹೊಸಪೇಟೆ : ಕರಾವಳಿಯಲ್ಲಿ ಒಂದು ಕಡೆ ಹಿಂದೂ ಸಂಘಟನೆಯವರ ಮತ್ತೊಂದು ಕಡೆ ಮುಸ್ಲಿಂ ಸಂಘಟನೆಯ ಪಾತಕಿಗಳ ಫ್ಯಾಕ್ಟರಿ ಇದೆ. ಯಾರ ಕಡೆಯವರೇ ಇರಲಿ, ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಜೊತೆಗೆ ಇವರ ಹಿಂದೆ ಇರುವವರನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿ-ಪ್ಲಾನ್ ಇವರು ಮಾಡ್ತಾರೆ, ಅವರು ಮಾಡ್ತಾರೆ. ದಕ್ಷಿಣ ಕನ್ನಡ ಚರಿತ್ರೆ ತೆಗೆದು ನೋಡಿ, ಯಾರೇನು ಕಮ್ಮಿ ಇಲ್ಲ ಎಂಬುದು ತಿಳಿಯುತ್ತದೆ. ನಾನು ಗೃಹಮಂತ್ರಿ ಇದ್ದಾಗ "ನಗ್ನ ಸತ್ಯ " ಎನ್ನುವ ಪುಸ್ತಕ ಬಿಡುಗಡೆ ಮಾಡಿದ್ದೆ. ಗಲಭೆ ಕುರಿತ ಪುಸ್ತಕ ಇದಾಗಿದೆ. ಇದನ್ನು ಓದಿದರೆ ಗೊತ್ತಾಗುತ್ತದೆ ಎಂದರು.

ಮಂಗಳೂರು ಮರ್ಡರ್ ವಿಷಯದಲ್ಲಿ ಒಂದು ಕೈಯಿಂದ ಚಪ್ಪಾಳೆ ತಟ್ಟೋಕೆ ಸಾಧ್ಯವಿಲ್ಲ. ಎರಡು ಕಡೆಯವರು ಯಾರಿಗೇನು ಕಮ್ಮಿಯಿಲ್ಲ ಎನ್ನುವಂತೆ ಇದ್ದಾರೆ. ಇವರೆಷ್ಟು ಸಂಖ್ಯೆಯಲ್ಲಿ ಮರ್ಡರ್ ಮಾಡಿದ್ದಾರೋ, ಅವರು ಅಷ್ಟೇ ಸಂಖ್ಯೆಯಲ್ಲಿ ಮಾಡಿದ್ದಾರೆ. ಗಲಾಟೆ ಮಾಡಿದವರು, ಮರ್ಡರ್ ಮಾಡಿದವರು ಅರೆಸ್ಟ್ ಆಗುತ್ತಿದ್ದಾರೆ. ಆದರೆ ಹಿಂದೆ ಇರೋ ಶಕ್ತಿ ಅರೆಸ್ಟ್ ಆಗ್ತಿಲ್ಲ. ನಾನು ಗೃಹ ಮಂತ್ರಿ ಆಗಿದ್ದಾಗ ಯಾರು ಹಿಂದೆ ಇದ್ದಾರೋ ಅವರನ್ನು ಫಿಟ್ ಮಾಡುತ್ತಿದ್ದೆ. ಬಷೀರ್, ದೀಪಕ್ ರಾವ್ ಕೇಸ್ ನಲ್ಲಿ ಫಿಟ್ ಮಾಡಿದ್ದೆವು. ಐದಾರು ವರ್ಷ ಯಾವುದೇ ಮರ್ಡರ್ ಆಗಿರಲಿಲ್ಲ. ಈಗ ಮತ್ತೆ ಪ್ರಾರಂಭವಾಗಿದೆ ಎಂದರು.

ಬಿಜೆಪಿ ಸರ್ಕಾರದಲ್ಲೇ ಸುಹಾಸ್ ಶೆಟ್ಟಿ ವಿರುದ್ಧ ರೌಡಿ ಶೀಟ್‌ ಓಪನ್‌ ಮಾಡಲಾಗಿತ್ತು. ಆರೋಪಿಗಳು ಜೈಲಿಗೆ ಹೋದಾಗ, ಕೋರ್ಟ್‌ ಗೆ ಓಡಾಡೋರು ಯಾರು? ನಾವ್ಯಾರಿಗೂ ಕುಮ್ಮಕ್ಕು ಕೊಡಲ್ಲ, ನಮ್ಮ ಪಕ್ಷದವರು ಇದ್ದರೂ ಒಳಗೆ ಹಾಕಿ ಎನ್ನುತ್ತೇವೆ ಎಂದರು.

ಕೆಎಸ್‌ಆರ್‌ಟಿಸಿ ನೌಕರರ ವೇತನ ಸಮಸ್ಯೆ ಆಗಿಲ್ಲ. ಅರಿಯರ್ಸ್‌ ಉಳಿದಿದೆ. ಬಿಜೆಪಿ ಸರ್ಕಾರದಲ್ಲಿ ಉಳಿಸಿದ ಬಾಕಿ ಹೆಚ್ಚಾಗಿದೆ. ಬಜೆಟ್ ಇಲ್ಲದೇ ಘೋಷಣೆ ಮಾಡಿದ ಹಿನ್ನೆಲೆ ಹೀಗಾಗಿದೆ. ಸದ್ಯದಲ್ಲಿ ಇದನ್ನು ಬಗೆಹರಿಸುತ್ತೇವೆ ಎಂದರು.

ಅವಧಿ ಮುಗಿದ ಯಾವುದೇ ಬಸ್‌ ಓಡಿಸಲ್ಲ. ಹದಿನೈದು ವರ್ಷದ ಮೇಲೆ ಯಾವುದೇ ಕಾರಣಕ್ಕೂ ವಾಹನ ಓಡಿಸಲ್ಲ. ಹೊಸದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 700 ಬಸ್ ನೀಡುತ್ತೇವೆ. ಬಿಜೆಪಿ ಅವಧಿಯಲ್ಲಿ ಒಂದು ಬಸ್ ಕೊಟ್ಟಿಲ್ಲ ಎಂದರು.

ಶಕ್ತಿ ಯೋಜನೆಗೆ ಇಲ್ಲ ಕಂಟಕ:

ರಾಜ್ಯದಲ್ಲಿ ಶಕ್ತಿ ಯೋಜನೆ ಅಬಾಧಿತವಾಗಿ ಮುಂದುವರಿಯಲಿದೆ. ಈಗಾಗಲೇ ಎರಡು ವರ್ಷ ಕೊಟ್ಟಿದ್ದೇವೆ. ಇನ್ನೂ ಮೂರು ವರ್ಷ ಕೂಡ ನಮ್ಮದೇ ಸರ್ಕಾರ ಇರುತ್ತದೆ. ಈ ಯೋಜನೆ ನಿಲ್ಲಿಸುವುದಿಲ್ಲ. ಮುಂದೆಯೂ ನಮ್ಮ ಸರ್ಕಾರ ಬರಲಿದ್ದು, ಶಕ್ತಿ ಯೋಜನೆ ಮುಂದುವರೆಸುತ್ತೇವೆ ಎಂದರು. ಶಾಸಕ ಎಚ್.ಆರ್‌. ಗವಿಯಪ್ಪ, ಹುಡಾ ಅಧ್ಯಕ್ಷ ಎಚ್ಎನ್‌ಎಫ್‌ ಇಮಾಮ್‌ ಮತ್ತಿತರರಿದ್ದರು.