ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದ 3ನೇ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಯುರ್ವೇದದಲ್ಲಿ ವಿಜ್ಞಾನ ಇಲ್ಲ, ವೈದ್ಯವಿಜ್ಞಾನ ಅಲ್ಲ ಎಂಬ ಅಪಪ್ರಚಾರ ಸಾಕಷ್ಟಿದೆ. ಆಯುರ್ವೇದ ಕ್ಷೇತ್ರದ ಹಲವು ವರ್ಷಗಳ ಯಶಸ್ಸು, ಚಿಕಿತ್ಸೆಯ ಅಂಕಿಅಂಶ ಸೇರಿ ಇತರೆ ಅಂಶಗಳ ಡೇಟಾ ಕೃತಕ ಬುದ್ಧಿಮತ್ತೆಗೆ ಸೇರ್ಪಡೆ ಆದಲ್ಲಿ ಆಯುರ್ವೇದದಲ್ಲಿ ಸಾಕಷ್ಟು ವಿಜ್ಞಾನ ಅಡಗಿರುವುದನ್ನು ತೋರ್ಪಡಿಸಬಹುದು ಎಂದು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಆಯುರ್ವೇದ ವಿಶ್ವ ಸಮ್ಮೇಳನದ 3ನೇ ದಿನವಾದ ಶನಿವಾರ ಮುಖ್ಯ ವೇದಿಕೆಯಲ್ಲಿ ಅವರು ಮಾತನಾಡಿದರು. ಆಯುರ್ವೇದದ ವೈಜ್ಞಾನಿಕ ಸತ್ವದ ಕುರಿತು ಅರಿವು ಮೂಡಿಸುತ್ತಾ ಮುಂದುವರಿದರೆ ವಿದೇಶಗಳಲ್ಲಿರುವ ಪಾಶ್ಚಾತ್ಯ ಮೆಡಿಕಲ್‌ ಸೆಂಟರ್‌ಗೆ ಪರ್ಯಾಯವಾಗಿ ಆಯುರ್ವೇದ ಮೆಡಿಕಲ್‌ ಸೆಂಟರ್‌ ಬೆಳೆಯಲು ಸಾಧ್ಯವಿದೆ. ಜತೆಗೆ ಇದರಿಂದ ನಮ್ಮ ವೈದ್ಯರಲ್ಲೂ ಆಯುರ್ವೇದದ ಬಗೆಗಿನ ವೈಜ್ಞಾನಿಕ ಮನೋಭಾವ ಹೆಚ್ಚಲಿದೆ ಎಂದರು.

ಪಾಶ್ಚಾತ್ಯ ವಿಜ್ಞಾನವೇ ಜ್ಞಾನ, ನಮ್ಮದು ಜ್ಞಾನವಲ್ಲ ಎಂಬ ಭಾವನೆ ಅಲ್ಲಿಯೂ ಇದೆ, ದುರದೃಷ್ಟವಶಾತ್‌ ನಮ್ಮಲ್ಲೂ ಇದೆ. ಪಾಶ್ಚಾತ್ಯರು ಈಗಲೂ ಆಯುರ್ವೇದದಲ್ಲಿ ವಿಜ್ಞಾನ, ಜೀವ ವಿಜ್ಞಾನ, ವೈದ್ಯಕೀಯ ವಿಜ್ಞಾನದಲ್ಲಿ ಒಂದೇ ದಾರಿ ಎಂದು ಜಗತ್ತು ನಂಬಿದ್ದಾಗ ಭಾರತ ಆಯುರ್ವೇದದ ಹೊಸ ದಾರಿಯನ್ನು ತೋರಿದೆ. ಅಂಥವನ್ನು ಅಲ್ಲಗಳೆಯಲು ಎಐ ಉತ್ತಮ ಸಾಧನವಾಗಿ ಬಳಸಿಕೊಳ್ಳುವ ಅವಕಾಶವಿದೆ ಎಂದರು.

ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಮಾತನಾಡಿ, ಲಭ್ಯತೆ ಕಡಿಮೆಯಾಗುತ್ತಿರುವ ಆಯುರ್ವೇದ ಸಸಿಗಳನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ರಾಮಕೃಷ್ಣ-ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಆಯುರ್ವೇದ ಯಾವ ಮಟ್ಟಿಗೆ ಬೆಳೆಯಬೇಕಾಗಿತ್ತೋ ಆ ಹಂತ ತಲುಪಲಿಲ್ಲ. ಇನ್ನಾದರೂ ಹೆಚ್ಚಿನ ಸಂಶೋಧನೆ, ಆಯುರ್ವೇದ ವೈಜ್ಞಾನಿಕ ಕೇಂದ್ರಗಳು ಹೆಚ್ಚಾಗಬೇಕು ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ಮನೋಹರ್‌, ಬಿ.ಎ.ಪಾಟೀಲ್‌ ಮಾತನಾಡಿದರು. ಕರ್ನಾಟಕ ಬ್ಯಾಂಕ್‌ ಸಿಒಒ ರಾಜಾ ಬಿ.ಎಸ್‌. ಇದ್ದರು.

ಆಯುರ್ವೇದ ಕೇವಲ ಪಾಠವಾಗೋದು ಬೇಡ:

ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಆಯುರ್ವೇದ ತಜ್ಞರಾದ ಸುಶ್ರುತರು ಶಸ್ತ್ರಚಿಕಿತ್ಸೆಯ ಕುರಿತಾಗಿ ಉಲ್ಲೇಖಿಸಿದ್ದಾರೆ. ಆದರೆ ಆನಂತರ ಆ ವಿಚಾರವಾಗಿ ಹೆಚ್ಚಿನ ಸಂಶೋಧನೆ ನಡೆಯಲಿಲ್ಲ. ಇಂದು ಆಯುರ್ವೇದ ವಿದ್ಯಾಲಯಗಳಲ್ಲಿ ಅಷ್ಟಾಂಗ ಯೋಗ ಪಾಠಮಾಡುವಾಗ ‘ಯಮ-ನಿಯಮ’ ಮುಂತಾದವನ್ನು ಕೇವಲ ಪಾಠವಾಗಿ ಮಾಡುತ್ತಿದ್ದಾರೆ. ಜೀವನಕ್ಕೆ ಅಳವಡಿಸಿಕೊಳ್ಳುತ್ತಿಲ್ಲ ಎಂದರು.