ಸಾರಾಂಶ
ಹಾನಗಲ್ಲ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಿವಕುಮಾರ ಉದಾಸಿ ಅವರೇ ಸಮರ್ಥ ಅಭ್ಯರ್ಥಿ. ಅವರನ್ನೇ ಮನವೊಲಿಸಬೇಕು ಎಂದು ಹಾನಗಲ್ಲ ಬಿಜೆಪಿ ಪಾಳಯದಲ್ಲಿ ಕಾರ್ಯಕರ್ತರ ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ.
ಹಾವೇರಿ ಲೋಕಸಭಾ ಕ್ಷೇತ್ರ ಎಂದು ಘೋಷಣೆಯಾಗಿ ಮೂರು ಚುನಾವಣೆಗಳು ನಡೆದಿದ್ದು, ಶಿವಕುಮಾರ ಉದಾಸಿ ನಿರಾಯಾಸವಾಗಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಈ ಕ್ಷೇತ್ರದ ಜನಮಾನಸದಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಕಳೆದ ಒಂದು ವರ್ಷದಿಂದ ಶಿವಕುಮಾರ ಉದಾಸಿ ಅವರೇ ಮತ್ತೇ ಅಭ್ಯರ್ಥಿಯಾಗಬೇಕೆಂಬ ಕೂಗು ಸಾಮಾನ್ಯ ಮತದಾರರ ಆದಿಯಾಗಿ, ನಾಯಕರ, ಕಾರ್ಯಕರ್ತರ ಅಪೇಕ್ಷೇಯಾಗಿದೆ.ಒಂದು ವರ್ಷದಷ್ಟು ಹಿಂದೆಯೇ ಶಿವಕುಮಾರ ಉದಾಸಿ ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಮೂರು ಬಾರಿ ಜಯ ಸಾಧಿಸಿ ನನ್ನ ಶಕ್ತಿಗೆ ಮೀರಿ ಈ ಕ್ಷೇತ್ರದ ಹಿತಕ್ಕೆ ಸೇವೆ ಮಾಡಿದ್ದೇನೆ ಎಂದು ಪ್ರಕಟಿಸಿದ್ದು, ಅಂದಿನಿಂದ ಕಾರ್ಯಕರ್ತರು ಮತ್ತೆ ಮತ್ತೆ ಶಿವಕುಮಾರ ಉದಾಸಿ ಅವರೇ ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ.
ಕಳೆದ ಫೆಬ್ರವರಿ ೨ರಂದು ದಿ. ಸಿ.ಎಂ. ಉದಾಸಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಭೆಯನ್ನುದ್ದೇಶಿಸಿ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಶಿವಕುಮಾರ ಉದಾಸಿಯೇ ಸೈ. ಹತ್ತಾರು ಸ್ಪರ್ಧಾಕಾಂಕ್ಷಿಗಳು ಈ ಕ್ಷೇತ್ರದ ಅಭ್ಯರ್ಥಿಯಾಗಲು ಪೈಪೋಟಿ ನಡೆಸಿದ್ದು, ಎಲ್ಲರಿಗೂ ಗೊತ್ತಿದೆ. ಆದರೆ, ಈ ಕ್ಷೇತ್ರದ ಗೆಲುವಿಗಾಗಿ ಎಲ್ಲ ಆಕಾಂಕ್ಷಿತ ಅಭ್ಯರ್ಥಿಗಳು ಶಿವಕುಮಾರ ಉದಾಸಿ ಅವರ ಮನವೊಲಿಸಲು ನನಗೆ ಸಹಕರಿಸಿ. ನಾನೇ ನೇತೃತ್ವ ವಹಿಸಿ ಶಿವಕುಮಾರ ಉದಾಸಿ ಅವರನ್ನು ಒಪ್ಪಿಸಲು ಮುಂದಾಗುತ್ತೇನೆ. ನೀವೆಲ್ಲ ನನ್ನ ಜೊತೆಗಿರಿ ಎಂದು ತಿಳಿಸಿದ್ದರು. ಆದರೆ, ಈ ಕ್ಷೇತ್ರದ ಕಾರ್ಯಕರ್ತರು ಪದೇ ಪದೆ ಒತ್ತಡ ಹೇರುತ್ತಿರುವುದರಿಂದ ಶಿವಕುಮಾರ ಉದಾಸಿ ಇತ್ತೀಚೆಗೆ ಕ್ಷೇತ್ರಕ್ಕೆ ಬರುವುದನ್ನೇ ಮಿತಗೊಳಿಸಿದ್ದಾರೆ. ಇತ್ತೀಚೆಗೆ ರಾಣಿಬೆನ್ನೂರಿನಲ್ಲಿ ನಡೆದ ರೇಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಸಂದೇಶವನ್ನು ಕಳಿಸಿ ತಾವು ಮಾಡಿದ ಕೆಲಸದ ಬಗ್ಗೆ ತಿಳಿಸಿದ್ದಾರೆ. ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಶಿವಕುಮಾರ ಉದಾಸಿ ಅವರ ಕುಟುಂಬದ ಸದಸ್ಯರೊಬ್ಬರು ಬಿಜೆಪಿ ಅಭ್ಯರ್ಥಿಯಾಗಬೇಕು ಎಂಬ ಒತ್ತಾಸೆ ಪಕ್ಷದ ಕಾರ್ಯಕರ್ತರಲ್ಲಿತ್ತು. ಬಿಜೆಪಿ ಕಾರ್ಯಕರ್ತರು ಇದು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಲೋಕಸಭಾ ಚುನಾವಣೆ ಶಿವಕುಮಾರ ಉದಾಸಿ ಅಭ್ಯರ್ಥಿಯಾಗಿ ಎದುರಿಸಿದಲ್ಲಿ ಮತ್ತೆ ಗೆಲುವು ಖಚಿತ. ಹೈಕಮಾಂಡ್ ಕಾರ್ಯಕರ್ತರ ಇಂಗಿತ ಅರಿತು ಅಭ್ಯರ್ಥಿ ಘೋಷಿಸಬೇಕು ಎಂಬ ಚರ್ಚೆ ಬಲವಾಗಿ ನಡೆದಿದೆ.ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿರಬಹುದು. ಬಿಜೆಪಿ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಶಿವಕುಮಾರ ಉದಾಸಿ ಮತ್ತೆ ಅಭ್ಯರ್ಥಿಯಾಗಲು ಒಪ್ಪುವುದಾದರೆ ಎಲ್ಲರೂ ಅದನ್ನು ಒಪ್ಪುತ್ತಾರೆ. ಆದರೆ ನಮ್ಮಲ್ಲಿ ಎಲ್ಲವೂ ಹೈಕಮಾಂಡ್ ನಿರ್ಣಯಕ್ಕೆ ಬದ್ಧ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡ್ರ ಹೇಳಿದರು.
ಶಿವಕುಮಾರ ಉದಾಸಿ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿಸಲು ನಾವು ಮಾಡಿದ ಪ್ರಯತ್ನಕ್ಕೆ ಸಕಾರಾತ್ಮಕ ಒಲವು ವ್ಯಕ್ತವಾಗಿಲ್ಲ. ಆದಾಗ್ಯೂ ಹೈಕಮಾಂಡ್ ಯತ್ನಿಸಿದರೆ ಸಾಧ್ಯವಾಗಬಹುದು. ಬಿಜೆಪಿ ಕಾರ್ಯಕರ್ತರು ಸಂಪೂರ್ಣವಾಗಿ ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗಿದ್ದಾರೆ. ನಮಗೆ ನಾಲ್ಕನೇ ಗೆಲುವು ದೊರೆತು ಈ ಕ್ಷೇತ್ರ ಬಿಜೆಪಿ ಕ್ಷೇತ್ರ ಎಂದು ಮತ್ತೆ ದಾಖಲೆಯಾಗಬೇಕಾಗಿದೆ ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ ಹೇಳಿದರು.