ಮಾಗಡಿ ಗಣಪನಿಗೆ ಭಾರಿ ಬೇಡಿಕೆ

| Published : Sep 02 2024, 02:15 AM IST

ಸಾರಾಂಶ

ಗಣೇಶ ಹಬ್ಬಕ್ಕೆ ಮಾಗಡಿ ಮಣ್ಣಿನ ಗಣಪ ಸಿದ್ದವಾಗಿದ್ದು ಭಾರಿ ಬೇಡಿಕೆ ಕಂಡು ಬಂದಿದೆ. ಪಟ್ಟಣದ ಎರಡು, ಮೂರು ಕುಟುಂಬಗಳು ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದು ಮುದ್ದಣ್ಣನ ಮಕ್ಕಳು ಕಲೆಯನ್ನು ಕರಗತ ಮಾಡಿಕೊಂಡು ಬೇಡಿಕೆಗೆ ತಕ್ಕಂತೆ ಗಣಪತಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಜನರು ವರ್ಷಕ್ಕೆ ಮೊದಲೇ ತಮಗೆ ಬೇಕಾದ ಗಣಪತಿಯನ್ನು ಮುಂಗಡವಾಗಿಯೇ ಹೇಳಿ ತಮಗೆ ಇಷ್ಟವಾದ ಗಣಪತಿಯನ್ನು ತಯಾರಿಸಿಕೊಳ್ಳುತ್ತಿದ್ದಾರೆ, ಉಮಾಶಂಕರ್ ವಿವಿಧ ಆಕಾರದ ಗಣಪತಿ ತಯಾರಿಸಿದ್ದು ಹೆಚ್ಚು ಬೇಡಿಕೆಯಲ್ಲಿ ಇದೆ.

ಎಚ್.ಆರ್.ಮಾದೇಶ್‌

ಕನ್ನಡಪ್ರಭ ವಾರ್ತೆ ಮಾಗಡಿ

ಗಣೇಶ ಹಬ್ಬಕ್ಕೆ ಮಾಗಡಿ ಮಣ್ಣಿನ ಗಣಪ ಸಿದ್ದವಾಗಿದ್ದು ಭಾರಿ ಬೇಡಿಕೆ ಕಂಡು ಬಂದಿದೆ. ಪಟ್ಟಣದ ಎರಡು, ಮೂರು ಕುಟುಂಬಗಳು ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದು ಮುದ್ದಣ್ಣನ ಮಕ್ಕಳು ಕಲೆಯನ್ನು ಕರಗತ ಮಾಡಿಕೊಂಡು ಬೇಡಿಕೆಗೆ ತಕ್ಕಂತೆ ಗಣಪತಿಗಳನ್ನು ತಯಾರಿಸಿ ಕೊಡುತ್ತಿದ್ದಾರೆ. ಜನರು ವರ್ಷಕ್ಕೆ ಮೊದಲೇ ತಮಗೆ ಬೇಕಾದ ಗಣಪತಿಯನ್ನು ಮುಂಗಡವಾಗಿಯೇ ಹೇಳಿ ತಮಗೆ ಇಷ್ಟವಾದ ಗಣಪತಿಯನ್ನು ತಯಾರಿಸಿಕೊಳ್ಳುತ್ತಿದ್ದಾರೆ, ಉಮಾಶಂಕರ್ ವಿವಿಧ ಆಕಾರದ ಗಣಪತಿ ತಯಾರಿಸಿದ್ದು ಹೆಚ್ಚು ಬೇಡಿಕೆಯಲ್ಲಿ ಇದೆ. ಈ ಬಾರಿ ಪೂರಿ ಜಗನ್ನಾಥ ಗಣಪತಿ ಮಾಡುತ್ತಿದ್ದು ಇದು ವಿಶೇಷವಾಗಿದೆ. ಮಾಗಡಿ ತಾಲೂಕಿನವರೇ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಸಾಲುಮರದ ತಿಮ್ಮಕ್ಕನ ಗಣಪತಿ ಕೂಡ ತಯಾರು ಮಾಡಿದ್ದಾರೆ. ನರಸಿಂಹನ ಮೇಲೆ ನಿಂತಿರುವ ಗಣಪ, ಶಿವ ರೂಪದ ಗಣಪ, ರಾಘವೇಂದ್ರ ಸ್ವಾಮಿಯ ಗಣಪ, ಸೇರಿದಂತೆ ಹಲವು ಭಂಗಿಯ ಗಣಪತಿಯನ್ನು ತಯಾರಿಸಲಾಗಿದೆ. 12 ಅಡಿಯ ಬೃಹತ್ ಗಣಪತಿಯನ್ನು ತಯಾರಿಸಲಾಗಿದ್ದು ಪರಿಸರ ಪ್ರೇಮಿ ಗಣಪನಾಗಿದ್ದು ಶುದ್ಧ ಜೇಡಿ ಮಣ್ಣಿನಿಂದ ಗಣಪತಿಯನ್ನು ತಯಾರಿಸಿರುವುದು ವಿಶೇಷ.

ಈ ಕೆಲಸವನ್ನು ಉಳಿಸುವ ನಿಟ್ಟಿನಲ್ಲಿ ಮಾಡಿಕೊಂಡು ಬಂದಿದ್ದು ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಬೆಂಗಳೂರು, ದೇವನಹಳ್ಳಿ, ಪುಟ್ಟಪರ್ತಿಗೂ ಕೂಡ ಮಾಗಡಿ ಗಣಪನನ್ನೇ ಕಳುಹಿಸಲಾಗುತ್ತಿದ್ದು ಸರ್ಕಾರರದಿಂದ ನಮಗೆ ಯಾವುದೇ ರೀತಿ ಅನುಕೂಲವಿಲ್ಲ, ಈ ಕಲೆಗೆ ಕೂಲಿ ಆಳುಗಳು ಕೂಡ ಸಿಗುತ್ತಿಲ್ಲ. -ಉಮಾಶಂಕರ್. ಪ್ರಸಿದ್ದ ಗಣಪತಿ ತಯಾರಕರು ಮಾಗಡಿ

ಯುಗಾದಿ ಹಬ್ಬದಂದೆ ಕೆರೆಗೆ ಹೋಗಿ ಪೂಜೆ ಸಲ್ಲಿಸಿ ಅಂದೇ ಗಣಪತಿ ಹಬ್ಬವನ್ನು ಆಚರಿಸುತ್ತೇವೆ. ಅಂದೇ ಮಣ್ಣು ತಂದು ಗಣಪತಿ ತಯಾರಿಕೆ ಆರಂಭ ಮಾಡುತ್ತೇವೆ, ಈ ಕಲೆಗೆ ಸರ್ಕಾರ ಯಾವುದೇ ರೀತಿ ಪ್ರೋತ್ಸಾಹ ಕೊಡುತ್ತಿಲ್ಲ ನಮಗೆ ಆರೋಗ್ಯ ವಿಮೆಯಾದರೂ ಕೊಟ್ಟರೆ ಹೆಚ್ಚು ಅನುಕೂಲವಾಗುತ್ತದೆ. -ಮಲ್ಲಿಕಾರ್ಜುನ. ಪ್ರಸಿದ್ಧ ಗಣಪತಿ ತಯಾರಕರು ಮಾಗಡಿ.