ವರ್ಷದ ಕೆಲವೇ ದಿನ ಸಿಗುವ ನೇರಳೆ ಹಣ್ಣಿಗೆ ಭಾರಿ ಡಿಮ್ಯಾಂಡ್‌

| Published : Jun 25 2024, 12:30 AM IST

ಸಾರಾಂಶ

ಋತುಮಾನಕ್ಕೆ ಅನುಗುಣವಾಗಿ ಬರುವ ಮಾವು, ಹಲಸು ಹಣ್ಣುಗಳಲ್ಲಿ ಜಂಬು ನೇರಳೆ ಹಣ್ಣು ಸಹ ಒಂದಾಗಿದೆ. ಇದು ವರ್ಷದ ಕೆಲವೇ ದಿನಗಳಲ್ಲಿ ಮಾತ್ರ ಸಿಗುವ ಹಣ್ಣು. ಹಾಗಾಗಿ ಖರೀದಿಗೆ ಜನ ಮುಗಿಬೀಳುವುದು ಸಹಜ. ಪ್ರಸ್ತುತ ಚನ್ನರಾಯಪಟ್ಟಣದಲ್ಲಿ ಕೆಜಿ ಜಂಬು ನೇರಳೆ ಹಣ್ಣು ೨೦ ರು.ನಿಂದ ೩೫೦ ರು.ಗೆ ಮಾರಾಟವಾಗುತ್ತಿದೆ. ಇದು ಆರೋಗ್ಯಕ್ಕೂ ಸಹಕಾರಿಯಾಗಿದೆ.

ಋತುಮಾನಕ್ಕೆ ಬರುವ ಫಲಗಳಲ್ಲಿ ಒಂದು । ಕೆ.ಜಿಗೆ 250 ರು.ವರೆಗೆ ಮಾರಾಟ । ಮಧುಮೇಹ ಸೇರಿ ಹಲವು ಕಾಯಿಲೆಗಳಿಗೆ ರಾಮಬಾಣ

ನಂದನ್‌ಪುಟ್ಟಣ್ಣ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಋತುಮಾನಕ್ಕೆ ಅನುಗುಣವಾಗಿ ಬರುವ ಮಾವು, ಹಲಸು ಹಣ್ಣುಗಳಲ್ಲಿ ಜಂಬು ನೇರಳೆ ಹಣ್ಣು ಸಹ ಒಂದಾಗಿದೆ. ಇದು ವರ್ಷದ ಕೆಲವೇ ದಿನಗಳಲ್ಲಿ ಮಾತ್ರ ಸಿಗುವ ಹಣ್ಣು. ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಹಾಗಾಗಿ ಖರೀದಿಗೆ ಜನ ಮುಗಿಬೀಳುವುದು ಸಹಜ. ಪ್ರಸ್ತುತ ಕೆಜಿ ಜಂಬು ನೇರಳೆ ಹಣ್ಣು ೨೦ ರು.ನಿಂದ ೩೫೦ ರು.ಗೆ ಮಾರಾಟವಾಗುತ್ತಿದೆ. ಇದು ಆರೋಗ್ಯಕ್ಕೂ ಸಹಕಾರಿಯಾಗಿದೆ.

ಹಿಂದಿನ ಕಾಲದಲ್ಲಿ ಊರಿನ ಮಾವಿನ ತೋಪುಗಳಲ್ಲಿ, ಸರ್ಕಾರದ ವತಿಯಿಂದ ಕೆರೆಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ನೇರಳೆ ಮರ ಬೆಳೆಸುತ್ತಿದ್ದರು. ಇದರಿಂದ ನೆರಳು ಸಿಗುವುದರ ಜತೆಗೆ ನೇರಳೆ ಹಣ್ಣುಗಳು ಸಿಗುತ್ತಿದ್ದವು. ಇದರಿಂದ ಅನೇಕ ಪಕ್ಷಿಗಳು ಹಣ್ಣು ತಿಂದು ಜೀವಿಸುತ್ತಿದ್ದವು. ಆದರೆ ರಸ್ತೆ ಅಗಲೀಕರಣದ ಸಮಯದಲ್ಲಿ ಮರಗಳನ್ನು ಕಡಿದ ಸಂದರ್ಭದಲ್ಲಿ ಅನೇಕ ಮರಗಳು ಕಣ್ಮರೆಯಾದವು ಎಲ್ಲೋ ತೆರೆಮರೆಯಲ್ಲಿ ಒಂದೊಂದು ಮರಗಳು ಕಣ್ಣಿಗೆ ಕಾಣಿಸುತ್ತಿದ್ದವು.

ಈಗ ನೇರಳೆ ಹಣ್ಣಿನ ಬೇಡಿಕೆ ಹೆಚ್ಚಾಗಿದ್ದು ಇದರಲ್ಲಿ ಮಧುಮೇಹ ನಿಯಂತ್ರಣಕ್ಕೆ ಔಷಧಿಯ ಗುಣ ಅಡಗಿರುವುದರಿಂದ ರೈತರ ವಾಣಿಜ್ಯ ಬೆಳೆಯಾಗಿ ಹೆಚ್ಚು ಬೇಡಿಕೆಯ ಹಣ್ಣಾಗಿದೆ. ಇಂದು ರೈತರು ಮಾವಿನ ಗಿಡಗಳನ್ನು ಬೆಳೆಯುವುದಕ್ಕಿಂತ ಜಂಬು ನೇರಳೆ ಹೆಚ್ಚಾಗಿ ಬೆಳೆಯುವ ಕಡೆಗೆ ಒತ್ತು ನೀಡುತ್ತಿದ್ದಾರೆ. ಸಸಿ ನೆಟ್ಟು ಕನಿಷ್ಠ ಐದಾರು ವರ್ಷಗಳಲ್ಲಿ ನೇರಳೆ ಹಣ್ಣು ಫಸಲು ಬಿಡುತ್ತದೆ. ಹೆಚ್ಚಾಗಿ ಆಂಧ್ರಪ್ರದೇಶದ ಮದನಪಲ್ಲಿ ಕಡೆಯಿಂದ ಈ ಜಂಬು ನೇರಳೆ ಹಣ್ಣು ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಇದೊಂದು ವಾಣಿಜ್ಯ ಬೆಳೆಯಾಗಿರುವುದರಿಂದ ರೈತರು ತಮ್ಮ ತೋಟದ ಬೆಳೆಗಳ ಜತೆಗೆ ಈ ಗಿಡಗಳನ್ನು ಬೆಳೆಸುತ್ತಾರೆ.

ಸಾಮಾನ್ಯವಾಗಿ ಬೇರೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಔಷಧಿಗಳು ಸಿಂಪಡಿಸಬೇಕು. ಆದರೆ ಈ ಬೆಳೆಗೆ ಸಸಿ ನೆಡುವ ಸಮಯದಲ್ಲಿ ನಾಟಿ ಗೊಬ್ಬರ ಹಾಕಿ ನೆಟ್ಟರೆ ಸಾಕು. ಬೇರೆ ಖರ್ಚುಗಳು ಬರದೆ ಲಾಭದಾಯಕವಾಗಿರುತ್ತದೆ. ಜನರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು ಸಾಮಾನ್ಯವಾಗಿ ಜನರಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗುತ್ತಿದೆ. ಮಾವು, ಹಲಸು ಮತ್ತಿತ್ತರ ಹಣ್ಣುಗಳನ್ನು ತಿಂದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದರ ಜತೆಗೆ ಮಧುಮೇಹ ಕಾಯಿಲೆ ಇನ್ನೂ ಹೆಚ್ಚಾಗುತ್ತದೆ. ಆದರೆ ನೇರಳೆ ಹಣ್ಣು ಹಾಗಲ್ಲ ಬಾಯಿಗೆ ರುಚಿಕರವಾಗಿಯೂ ಇರುತ್ತದೆ ಹಾಗೂ ಇದರಲ್ಲಿ ಅಡಗಿರುವ ಒಗರಿನ ಪ್ರಮಾಣ ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ ಎಂಬುದು ವೈದ್ಯಕೀಯವಾಗಿಯೂ ಸಾಬೀತಾಗಿದೆ. ಹಾಗಾಗಿ ಸಕ್ಕರೆ ಕಾಯಿಲೆಯುಳ್ಳವರು ಈ ಹಣ್ಣನ್ನು ಸೇವಿಸುವುದು ಸಾಮಾನ್ಯ.

ಜಂಬು ನೇರಳೆ ಹಣ್ಣು ಹಾಸನ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದು, ತುಮಕೂರು ಹಾಗೂ ಮದನಪಲ್ಲಿ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಆದರೆ ಈಗ ನೇರಳೆ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು. ಬೇರೆ ರಾಜ್ಯಗಳಿಂದ ತರಿಸಿಕೊಂಡು ಮಾರಾಟ ಮಾಡುತ್ತಾರೆ.

ಗೂರನಹಳ್ಳಿ ರಮೇಶ್, ಅಧ್ಯಕ್ಷ, ಭೂಮಿ ಕ್ಷೇಮಾಭಿವೃದ್ಧಿ ಸಂಘ, ಚನ್ನರಾಯಪಟ್ಟಣ

ಜಂಬು ನೇರಳೆಯಿಂದ ಮಧುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ಸಹಕಾರಿಯಾಗಲಿದ್ದು ಚಿಕ್ಕ ಮಕ್ಕಳಿಂದ ವಯೋವೃದ್ಧರು ಸಹ ಸೇವಿಸುವ ಹಣ್ಣಾಗಿದ್ದು ಜನರು ಹೆಚ್ಚು ಉಪಯೋಗಿಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ.

ಡಾ.ತಿಲಕ್ ಎಂ.ಆರ್., ಸ್ವಾಸ್ಥ್ಯಸ್ಪೆಷಾಲಿಟಿ ಕ್ಲಿನಿಕ್‌ನ ಖ್ಯಾತ ಮಧುಮೇಹ, ಹೃದಯ ಮತ್ತು ಶ್ವಾಸ ಕೋಶ ತಜ್ಞ. ಚನ್ನರಾಯಪಟ್ಟಣ.