ಡಾ.ಮಂಜುನಾಥ್ ಮೇಲಿದೆ ಬಹಳಷ್ಟು ನಿರೀಕ್ಷೆ

| Published : Jun 08 2024, 12:35 AM IST / Updated: Jun 08 2024, 12:56 PM IST

ಸಾರಾಂಶ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಕಷ್ಟು ಸವಾಲುಗಳಿವೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಕಷ್ಟು ಸವಾಲುಗಳಿವೆ.

ಮೂರೂವರೆ ದಶಕಗಳಿಂದ ವೈದ್ಯ ವೃತ್ತಿಯಲ್ಲಿದ್ದ ಡಾ.ಸಿ.ಎನ್.ಮಂಜುನಾಥ್ ಜನಸೇವೆ ಮಾಡಿಕೊಂಡೇ ಬಂದವರು. ಈ ಬಾರಿ ಜನಸೇವೆಗೆ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಜನರು ಅವರಿಗೆ ಆಶೀರ್ವದಿಸಿ ಸಂಸದರನ್ನಾಗಿ ಮಾಡಿದ್ದಾರೆ.

ಒಂದು ಸಾಧಾರಣ ಸರ್ಕಾರಿ ಸಂಸ್ಥೆಯಾದ ಜಯದೇವ ಹೃದ್ರೋಗ ಸಂಸ್ಥೆಯನ್ನು ವಿಶ್ವ ಶ್ರೇಷ್ಠ ಹೃದಯ ಕೇಂದ್ರವನ್ನಾಗಿ ಮಾಡಿದ ಮಂಜುನಾಥ್ ಮೇಲೆ ಜನರು ಸಹಜವಾಗಿಯೇ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಬೆಂಗಳೂರು ನಗರ, ತುಮಕೂರು ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಮೂರು ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಡಾ.ಸಿ.ಎನ್ .ಮಂಜುನಾಥ್ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಬೇಕಿದೆ.

ರಾಜಕೀಯ ಕ್ಷೇತ್ರಕ್ಕೆ ಮಂಜುನಾಥ್ ಹೊಸಬರು ಇರಬಹುದು. ಆದರೆ, ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾಗಿರುವ ಕಾರಣ ಅವರ ಕುಟುಂಬಕ್ಕೆ ರಾಜಕೀಯದ ಹಿನ್ನೆಲೆ ಇದೆ. ಹೀಗಾಗಿ ಅವರಿಗೆ ರಾಜಕೀಯ ಹೊಸದೇನಲ್ಲ. ಮೊದಲಿನಿಂದಲೂ ಸಮಾಜ ಸೇವೆಯಲ್ಲಿಯೇ ತೊಡಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುವುದು ಜನರ ಆಶಯವಾಗಿದೆ.

ಮೂರು ಜಿಲ್ಲೆಗಳ ಜನರೊಂದಿಗೆ ನಿರಂತರ ಸಂಪರ್ಕ, ಅವರ ಸಮಸ್ಯೆಗಳು, ಬೇಡಿಕೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಬೇಕಿದೆ.

ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿರುವುದರಿಂದ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ನೆರವಾಗುವ ಕಾಳಜಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಅವರಿಗಿದೆ. ಕಾರ್ಯಕರ್ತರ ಕೈಗೆ ಸುಲಭವಾಗಿ ಸಿಗುತ್ತಾರೆ ಎಂಬ ಭಾವನೆ ಬರುವಂತೆ ಮಂಜುನಾಥ್ ನಡೆದುಕೊಳ್ಳಬೇಕಾಗಿದೆ.

ಕೈಗಾರಿಕಾ ಪ್ರದೇಶ ಸ್ಥಾಪನೆ:

ರಾಮನಗರ ಜಿಲ್ಲೆಯಲ್ಲಿ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿವೆ. ಇದರ ಜೊತೆಗೆ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಿ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ಮಾಡಬೇಕಿದೆ. ಈ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಕೆಂಗೇರಿಯಿಂದ ಬಿಡದಿವರೆಗೆ ಮೆಟ್ರೋ ವಿಸ್ತರಿಸುವುದು. ಕಾರ್ಮಿಕರು ಅನಾರೋಗ್ಯ ಪೀಡಿತರಾದಲ್ಲಿ ಅವರ ಚಿಕಿತ್ಸೆಗಾಗಿ ಇಎಸ್ ಐ ಆಸ್ಪತ್ರೆ ಸ್ಥಾಪನೆ ಮಾಡುವ ಜವಾಬ್ದಾರಿ ಮಂಜುನಾಥ್ ಮೇಲಿದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು:

ಪ್ರಾಕೃತಿಕ ಸೊಬಗನ್ನು ಒಡಲಲ್ಲಿ ಇಟ್ಟುಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಆಕರ್ಷಣೀಯ ಪ್ರವಾಸಿ ತಾಣಗಳಿವೆ. ದಟ್ಟ ಅರಣ್ಯ, ಜಲಾಶಯ, ಪುರಾತನ ದೇಗುಲಗಳು, ಮನೋರಂಜನೆಗೆ ಪಾರ್ಕ್ ಗಳು, ಆಕರ್ಷಕ ರೆಸಾರ್ಟ್ ಗಳನ್ನು ಹೊಂದಿದ್ದು, ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಪ್ರವಾಸಿಗರನ್ನು ಸೆಳೆಯಲು ವಿಶೇಷ ಪ್ರವಾಸ ಪ್ಯಾಕೇಜ್ ಜಾರಿಗೆ ತರುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಮಂಜುನಾಥ್ ಒತ್ತು ನೀಡಬೇಕಿದೆ.

ಸುರೇಶ್‌ ಅಭಿವೃದ್ಧಿಯ ನೊಗ ಮಂಜುನಾಥ್‌ ಹೆಗಲಲ್ಲಿ

ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ ಡಿ.ಕೆ.ಸುರೇಶ್ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹತ್ತಾರು ಪ್ರಗತಿ ಕಾರ್ಯಗಳನ್ನು ಮಾಡುವ ಮೂಲಕ ಬಿಜೆಪಿ ನಾಯಕರಿಂದಲೇ ಮಾದರಿ ಸಂಸದ ಎಂಬ ಬಿರುದು ಪಡೆದವರು. ಶಿಕ್ಷಣ, ಆರೋಗ್ಯ, ಕಂದಾಯ, ಸಹಕಾರ ಕ್ಷೇತ್ರ, ನೀರಾವರಿ, ಇಂಧನ, ಲೋಕೋಪಯೋಗಿ, ಪ್ರವಾಸೋದ್ಯಮ, ಅರಣ್ಯ, ರೇಷ್ಮೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದ ಸುರೇಶ್ ನರೇಗಾ ಅನುಷ್ಠಾನದಲ್ಲಿ ರಾಮನಗರ ಜಿಲ್ಲೆ ಗಮನ ಸೆಳೆಯುವಂತೆ ಮಾಡಿದ್ದರು. ಆ ಅಭಿವೃದ್ಧಿಯ ನೊಗವನ್ನು ಡಾ.ಸಿ.ಎನ್. ಮಂಜುನಾಥ್ ಎಳೆದುಕೊಂಡು ಸಾಗಬೇಕಿದೆ.

ಕ್ರಾಂತಿಕಾರಕ ಬದಲಾವಣೆ ತರುವ ಕನಸು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಶಿಕ್ಷಣ, ಆರೋಗ್ಯ ಕ್ಷೇತ್ರ, ರೇಷ್ಮೆ ಉದ್ಯಮ ಅಭಿವೃದ್ಧಿ ಇವೆಲ್ಲವೂ ನನ್ನ ಆದ್ಯತೆಗಳಾಗಿವೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ರಾಮನಗರ ಮೆಡಿಕಲ್ ಕಾಲೇಜು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆಯುಷ್ಮಾನ್ ಭಾರತದ ಸಮರ್ಪಕ ಬಳಕೆ, ಟೆಲಿ ಮೆಡಿಸಿನ್‌ಗಳ ಬಳಕೆ ಸೇರಿದಂತೆ ಸಾಕಷ್ಟು ಕ್ರಾಂತಿಕಾರಕ ಬದಲಾವಣೆ ತರಬೇಕು ಎನ್ನುವುದು ನನ್ನ ಕನಸಾಗಿದೆ. ಇದು ಮಾತ್ರವಲ್ಲ ನನ್ನ ಕ್ಷೇತ್ರದ ಬಹುತೇಕ ಜನತೆಯ ಕಸುಬಾಗಿರುವ ರೇಷ್ಮೆ ಉದ್ಯಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸಿಗುವಂತೆ ಮಾಡಬೇಕು ಎನ್ನುವುದು ಕೂಡ ನನ್ನ ಪ್ರಮುಖ ಗುರಿಗಳ ಪೈಕಿ ಒಂದಾಗಿದೆ.

- ಡಾ.ಸಿ.ಎನ್ .ಮಂಜುನಾಥ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ

ನಿರೀಕ್ಷೆಗಳು ಏನೇನು ?

-ಆಂತರಿಕ ರಸ್ತೆಗಳು, ಫೀಡರ್ ಬಸ್ ಗಳು, ರಿಂಗ್ ರೈಲ್ವೆ ಮತ್ತು ನಮ್ಮ ಮೆಟ್ರೋ ಮೂಲಕ ಬೆಂಗಳೂರು ಗ್ರಾಮಾಂತರದಲ್ಲಿ ಉತ್ತಮ ಸಂಪರ್ಕ ಕಲ್ಪಿಸುವುದು.

-ಹೆಜ್ಜಾಲ - ಚಾಮರಾಜನಗರ ರೈಲು ಮಾರ್ಗಕ್ಕೆ ಹಸಿರು ನಿಶಾನೆ ದೊರಕಿದೆ. ಕೇಂದ್ರ ಬಜೆಟ್ ನಲ್ಲಿ ಅನುದಾನ ಮಂಜೂರು ಮಾಡಿಸಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿ, ಯೋಜನೆ ಕಾರ್ಯಗತಗೊಳಿಸಲು ವೇಗ ನೀಡಬೇಕಿದೆ.

-ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಹಸಿರು ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ಸುಸ್ಥಿರ ಬೆಳವಣಿಗೆಗಾಗಿ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಸಶಕ್ತಗೊಳಿಸುವುದು.

-ಬಯಲು ಸೀಮೆ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ನೀರಿನ ದಾಹ ನೀಗಿಸಲು ಮೇಕೆದಾಟು ಯೋಜನೆ ಜಾರಿಗೊಳಿಸುವುದು.

-ಸುಧಾರಿತ ಸಂಪರ್ಕ, ನಗರ ವಿನ್ಯಾಸ, ಜಲ ಭದ್ರತಾ ಉಪಕ್ರಮಗಳ ಮೂಲಕ ಚನ್ನಪಟ್ಟಣ ಮತ್ತು ರಾಮನಗರವನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿ ಪಡಿಸುವುದು.

-ಚನ್ನಪಟ್ಟಣದ ಮರದ ಆಟಿಕೆ ಉದ್ಯಮಕ್ಕೆ ಕಚ್ಚಾ ಉತ್ಪನ್ನಗಳ ನೆರವು, ಮಾರುಕಟ್ಟೆ ಹಾಗೂ ಪ್ರವಾಸೋದ್ಯಮದ ಮೂಲಕ ಪ್ರೋತ್ಸಾಹಿಸುವುದು. ಆ ಮೂಲಕ ಕ್ಷೇತ್ರದ ಜನರ ಆರ್ಥಿಕತೆ ಸುಧಾರಿಸುವ ಜೊತೆಗೆ ಪರಂಪರೆಯ ರಕ್ಷಣೆ.

-ಸ್ಥಳೀಯ ಪ್ರವಾಸೋದ್ಯಮ , ಸಾಂಸ್ಕೃತಿಕ ಪರಂಪರೆ ಉತ್ತೇಜಿಸಲು ಚನ್ನಪಟ್ಟಣದಲ್ಲಿ ಆಟಿಕೆಗಳ ಸಂಗ್ರಹಾಲಯ, ಹೆರಿಟೇಜ್ ಪಾರ್ಕ್ ಸಹಿತ ವಿವಿಧ ಪ್ರವಾಸಿ ಸೌಲಭ್ಯ ಕಲ್ಪಿಸುವುದು.

-ಪ್ರವಾಸೋದ್ಯಮ ಅಭಿವೃದ್ಧಿಯನ್ನು ಕೇಂದ್ರೀಕರಿಸಿಕೊಂಡು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಫುಡ್ ಹಬ್ ಸ್ಥಾಪನೆ.

-ಡಿಜಿಟಲ್ ಸಂಪನ್ಮೂಲಗಳು, ಸುಧಾರಿತ ತಂತ್ರಜ್ಞಾನ ಹಾಗೂ ಸಿಎಸ್ ಆರ್ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾದರಿ ಶಾಲೆಗಳ ನಿರ್ಮಾಣ.

-ಅಪಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ಸಿಗುವಂತೆ ಮಾಡಲು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸುಸಜ್ಜಿತ ಟ್ರಾಮಾ ಸೆಂಟರ್ ಸ್ಥಾಪನೆ.

-ಹಾರೋಹಳ್ಳಿ, ಆನೇಕಲ್ ಹಾಗೂ ಕೆಐಎಡಿಬಿ ಪ್ರದೇಶಗಳಲ್ಲಿ ಕಾರ್ಮಿಕರಿಗೆ ನೆರವಾಗಲು ಇಎಸ್ ಐ ಆಸ್ಪತ್ರೆಗಳ ಸ್ಥಾಪನೆ. ನಿಮ್ಹಾನ್ಸ್ ನಂತಹ ಇನ್ನೊಂದು ಉಪ ಕೇಂದ್ರ ಸ್ಥಾಪಿಸಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಅಗತ್ಯಗಳನ್ನು ಪೂರೈಸುವುದು.

-ಆಯುಷ್ಮಾನ್ ಭಾರತ್ ವಿಮಾ ಯೋಜನೆಯಡಿಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಕ್ಷೇತ್ರಾದ್ಯಂತ ವಿಸ್ತರಣೆ. ಟೆಲಿಮೆಡಿಸಿನ್ ಸೇವೆಗಳನ್ನು ಸಂಯೋಜಿಸುವುದು.

-ಸಂಶೋಧನೆಗಾಗಿ ಉಪಗ್ರಹ ರೇಷ್ಮೆ ನಿಗಮ ಮಂಡಳಿ ಸ್ತಾಪಿಸುವುದು. ರೇಷ್ಮೆ ಕೃಷಿಕರಿಗೆ ಕನಿಷ್ಠ ಬೆಂಬಲ ಬೆಲೆ ಖಚಿತ ಪಡಿಸುವುದು.

-ಬೆಳೆಗಳ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಕೃಷಿ ಸಂಸ್ಕರಣಾ ಘಟಕಗಳು ಮತ್ತು ತೋಟಗಾರಿಕೆ ಘಟಕಗಳ ಸ್ಥಾಪನೆಗೆ ಒತ್ತು.

-ಮಾನವ - ವನ್ಯಜೀವಿ ಸಂಘರ್ಘ ನಿವಾರಣೆಗೆ ಪರಿಣಾಮಕಾರಿ ಕ್ರಮದ ಅಗತ್ಯವಿದೆ.

-ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಿ, ಬೆಳೆ ಹಾನಿ - ಪ್ರಾಣ ಹಾನಿ ಮೊದಲಾದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ.