ನಮ್ಮೊಳಗಿನ ಚಿಂತನೆಯಲ್ಲಿ ಬುದ್ಧನ ದರ್ಶನ: ಡಾ.ಮೋಹನ್ ಕೃಷ್ಣ ರೈ

| Published : Jun 08 2024, 12:35 AM IST

ನಮ್ಮೊಳಗಿನ ಚಿಂತನೆಯಲ್ಲಿ ಬುದ್ಧನ ದರ್ಶನ: ಡಾ.ಮೋಹನ್ ಕೃಷ್ಣ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧನ ಹುಟ್ಟು ಮತ್ತು ಸಾವಿಗೆ ಕಾಲಘಟ್ಟಗಳು ಇರಬಹುದು. ಆದರೆ ಬುದ್ಧನ ಚಿಂತನೆಗಳು ಮತ್ತು ಆಲೋಚನೆಗಳಿಗೆ ಯಾವುದೇ ರೀತಿಯ ಕಾಲಘಟ್ಟಗಳಿಲ್ಲ.

ಹೊಸಪೇಟೆ: ಬುದ್ಧನೆಂದರೆ ಜಾಗೃತಿ, ಎಚ್ಚರ, ಪ್ರಜ್ಞೆ ಮತ್ತು ಜ್ಞಾನದ ಬೆಳಕು. ಬುದ್ಧನನ್ನು ಪ್ರತಿಮೆಗಳಲ್ಲಿ, ವಿಹಾರಗಳಲ್ಲಿ, ಪುಸ್ತಕಗಳಲ್ಲಿ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗಿನ ಚಿಂತನೆಗಳಲ್ಲಿ, ಆಲೋಚನೆಯಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಮೂಡಿದಾಗ ಬುದ್ಧನ ದರ್ಶನವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಕೃಷ್ಣ ರೈ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ದಲಿತ ಸಂಸ್ಕೃತಿ ಅಧ್ಯಯನ ಪೀಠದ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ 2568ನೇ ಭಗವಾನ್ ಗೌತಮ ಬುದ್ಧ ಹಾಗೂ 140ನೇ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧ, ಬೌದ್ಧ ಧರ್ಮ ಹಾಗೂ ಪ್ರಸ್ತುತತೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬುದ್ಧನ ಹುಟ್ಟು ಮತ್ತು ಸಾವಿಗೆ ಕಾಲಘಟ್ಟಗಳು ಇರಬಹುದು. ಆದರೆ ಬುದ್ಧನ ಚಿಂತನೆಗಳು ಮತ್ತು ಆಲೋಚನೆಗಳಿಗೆ ಯಾವುದೇ ರೀತಿಯ ಕಾಲಘಟ್ಟಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದ ಲಕ್ಷಣಗಳು, ಊಳಿಗಮಾನ್ಯ ಪದ್ಧತಿ, ಬಂಡವಾಳಶಾಹಿ ಪದ್ಧತಿ, ರಾಜ್ಯ ಭಾಷೆಯ ಮುಂದೆ ಆಡು ಭಾಷೆಗಳು ಪ್ರಾಮುಖ್ಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬುದ್ಧನ ಆಲೋಚನ ದೃಷ್ಟಿ, ಜೀವನ ಶೈಲಿ ಹಾಗೂ ಚಿಂತನೆಗಳು ಪ್ರಸ್ತುತತೆ ಪಡೆಯುತ್ತವೆ. ಜಾಗತೀಕರಣವು ಮಾನವೀಯತೆಯ ಜಾಗತೀಕರಣವಾಗಬೇಕು. ಬುದ್ಧನ ಆಧ್ಯಾತ್ಮಿಕ ಬೋಧನೆಯಲ್ಲಿ ವೈಜ್ಞಾನಿಕ, ಮಾನವೀಯ, ವಾಸ್ತವಿಕ ನೆಲೆಯನ್ನು ನಾವು ಕಾಣಬಹುದು. ಬದುಕಿನ ದುಃಖಗಳಿಂದ ಹೊರಬರುವುದು, ಆಸೆ ನಿಯಂತ್ರಿಸುವುದು ಮತ್ತು ಲೋಕವನ್ನು ಅರ್ಥ ಮಾಡಿಕೊಳ್ಳಲು ಬುದ್ಧ ಅಷ್ಟಾಂಗ ಮಾರ್ಗ ಎಂಬ ಮಧ್ಯಮ ಮಾರ್ಗವನ್ನು ಪ್ರತಿಪಾದಿಸಿದನು. ಆದರೆ ಇಂದು ಭಾರತವನ್ನು ಬೆಸೆಯುವ ಕೊಂಡಿಗಳು ದೂರವಾಗಿ ಭಾರತವನ್ನು ಒಡೆಯುವ ಕೊಂಡಿಗಳು ಹತ್ತಿರವಾಗುತ್ತಿರುವುದು ದುರಂತದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತತೆ ವಿಷಯದ ಕುರಿತು ಉಪನ್ಯಾಸ ನೀಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಸಂವಿಧಾನದ ಆಶಯಗಳನ್ನು 1910ರಲ್ಲೇ ಒಂದಷ್ಟು ಜಾರಿಗೆ ತರುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿದ್ದರು. ಕೃಷ್ಣರಾಜ ಸಾಗರ ಅಣೆಕಟ್ಟು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಕಾರ್ಯಗಳನ್ನು ಮಾಡುವುದರ ಮೂಲಕ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ರೂಪಿಸದ್ದರು. ಮಹಾತ್ಮ ಗಾಂಧೀಜಿಯವರು ಇವರ ಕಾರ್ಯಗಳನ್ನು ಮೆಚ್ಚಿ ಇವರನ್ನು ರಾಜಶ್ರೀ ಮತ್ತು ಮೈಸೂರು ರಾಜ್ಯವನ್ನು ಮಾದರಿ ರಾಜ್ಯ ಎಂದು ಕರೆದಿರುವುದು ನಾಲ್ವಡಿ ಅವರ ಸಾಧನೆಗೆ ಹಿಡಿದ ಕನ್ನಡಿ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ದಲಿತ ಅಧ್ಯಯನ ಪೀಠದ ಸಂಚಾಲಕ ಡಾ.ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಬಣ್ಣದಮನೆ ಸೋಮಶೇಖರ್‌ ಮತ್ತಿತರರಿದ್ದರು. ಸಂಶೋಧನಾ ವಿದ್ಯಾರ್ಥಿ ಮಣಿಕಂಠ ಅಂಗಳ, ಶ್ರೇಯಸ್ ನಿರ್ವಹಿಸಿದರು.