ಸಾರಾಂಶ
‘ಚಂದ್ರ ಮುತ್ತು’ ಕವನ ಸಂಕಲನ ಓದುವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬ್ಯಾಡಗಿಭಾಷೆ ಸಂಸ್ಕೃತೀಯ ಪ್ರತೀಕ, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಇದಕ್ಕೆ ಜಗತ್ತಿನಲ್ಲಿ ವಿಶಿಷ್ಟ ಸ್ಥಾನಮಾನವಿದೆ. ಕನ್ನಡ ಮನಸ್ಸುಗಳಿಗೆ ಧಕ್ಕೆಯಾಗದಂತೆ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತಗೊಳಿಸಬೇಕಿದ್ದು, ಸಾಹಿತಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಹೇಳಿದರು.
ಪಟ್ಟಣದ ಸಾಹಿತಿ ಮಂಗಳಾ ಕಂಬಿ ಅವರ ಮನೆಯಲ್ಲಿ ನಡೆದ ‘ಚಂದ್ರ ಮುತ್ತು’ ಕವನ ಸಂಕಲನ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಮೂಲತಃ ದ್ರಾವಿಡ ಭಾಷೆಯಾಗಿದ್ದು, ವಿಶ್ವದೆಲ್ಲೆಡೆ 40 ಕೋಟಿಗೂ ಅಧಿಕ ಜನರು ಕನ್ನಡ ಭಾಷೆ ಅಥವಾ ಅದಕ್ಕೆ ಹೋಲಿಕೆಯಾಗುವಂತಹ 2ನೇ ಅಥವಾ 3ನೇ ಭಾಷೆಯಾಗಿ ಬಳಕೆ ಮಾಡುತ್ತಿದ್ದು ದೇಶದಲ್ಲಿ ಸುಮಾರು 13 ಕೋಟಿಗೂ ಅಧಿಕ ಜನರು ಕನ್ನಡ ಭಾಷಿಕರಿದ್ದಾರೆ ಎಂದರು.ನಿವೃತ್ತ ಡಿಡಿಪಿಐ ಪ್ರಕಾಶ್ ಮನ್ನಂಗಿ ಮಾತನಾಡಿ, ಕನ್ನಡ ಮಧ್ಯ ಭಾರತದ ಪ್ರಬಲ ರಾಜವಂಶಗಳ ಆಸ್ಥಾನ ಭಾಷೆ ಯಾಗಿದ್ದು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಯಾದವ ರಾಜವಂಶ, ಪಶ್ಚಿಮದಲ್ಲಿ ಗಂಗ ರಾಜವಂಶ, ಮೈಸೂರಿನ ಒಡೆಯರು, ಕೆಳದಿ ನಾಯಕರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯ ಸೇರಿದಂತೆ ನೈಋತ್ಯ ಭಾರತದ ಬಹುತೇಕ ರಾಜರ ಪ್ರಮುಖ ಭಾಷೆ ಕನ್ನಡವಾಗಿತ್ತು ಎಂದರು.
ಬಿಇಎಸ್ ಕಾಲೇಜು ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಮಾತನಾಡಿ, ಕನ್ನಡ ಸಾಹಿತ್ಯವನ್ನು ಪಂಪ, ರನ್ನ, ಜನ್ನರಂತಹ ಸಾಹಿತಿಗಳು ಗಟ್ಟಿಯಾಗಿ ಕಟ್ಟಿದ್ದಾರೆ. ಕುವೆಂಪು, ಬೇಂದ್ರೆ, ಅಡಿಗರಂತಹ ಕವಿಗಳು ತೇಜಸ್ವಿ, ಕಾರಂತ ವೈಚಾರಿಕ ಬರಹಗಾರರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಓದುಗರ ಮನಸ್ಸನ್ನು ಅರ್ಥಮಾಡಿಕೊಂಡು ಸಾಹಿತಿಗಳು ಕಥೆ, ನಾಟಕ, ಕಾದಂಬರಿ ಮುಂತಾದ ಗದ್ಯ ಸಾಹಿತ್ಯದ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.ಸಾಹಿತಿ ಜೀವರಾಜ್ ಛತ್ರದ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. ಯಾವುದೇ ಭಾರತೀಯ ಭಾಷೆಗೆ ಕನ್ನಡದಷ್ಟು ಪ್ರಶಸ್ತಿಗಳು ಲಭಿಸಿಲ್ಲ. ಹೀಗಾಗಿ ಕನ್ನಡ ಸಾಹಿತ್ಯಕ್ಕೆ ತನ್ನದೇಯಾದ ಚರಿತ್ರೆಯಿದೆ ಅದನ್ನು ಕನ್ನಡಿಗರಾದ ನಾವುಗಳು ಅಧ್ಯಯನದಿಂದ ತಿಳಿದುಕೊಳ್ಳಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ. ಜಗಾಪುರ, ಮಂಗಳ ಕಂಬಿ, ವೀರಯ್ಯ ಕೆಂಡದಮಠ, ಮಲ್ಲಪ್ಪ ಕರೇಣ್ಣನವರ, ಎಂ.ಎಂ. ಪಾಟೀಲ, ಡಿ.ಎನ್. ಅಲ್ಲಾಪುರ, ಸುಮಾ ಹೂಲಿಹಳ್ಳಿ, ಮಹದೇವ ಕರಿಯಣ್ಣನವರ, ಶಕುಂತಲಾ ದಾಳೇರ, ರಾಜೇಶ್ವರಿ ಬಿಲ್ಲಳ್ಳಿ, ಸಿ.ಎನ್. ಬಣಕಾರ, ಬಿ.ಎಂ. ತುಮರಿಕೊಪ್ಪದ, ಇಂದಿರಾ ಕಂಗೂರಿ, ಜಮೀರ್ ರಿತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.