ಸಾರಾಂಶ
ಕೊಪ್ಪಳ:
ಜಾನಪದ ಕಲೆ ನಮ್ಮ ಜೀವನದ ಒಂದು ಭಾಗವಾಗಿದೆ. ಜಾನಪದ ಸಾಹಿತ್ಯದಲ್ಲಿ ಜೀವನ ನಡೆಸುವ ನೀತಿಪಾಠ ಇದೆ ಎಂದು ಸಾಹಿತಿ ಹನುಮಂತಪ್ಪ ಕುರಿ ಹೇಳಿದರು.ತಾಲೂಕಿನ ನಿಲೋಗಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್, ಕಸಾಪ ಅಳವಂಡಿ ಹೋಬಳಿ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಲೋಗಿಪುರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯದಲ್ಲಿ ಜಾನಪದ ಹಾಗೂ ಮಕ್ಕಳ ಸಾಹಿತ್ಯದ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾನಪದ ಕಲೆ ಬಾಯಿಂದ ಬಾಯಿಗೆ ಪಸರಿಸಿದೆ. ಹೆಚ್ಚಾಗಿ ಅನಕ್ಷರಸ್ಥರು ಇದರಲ್ಲಿ ಸಾಧನೆ ಮಾಡಿದ್ದಾರೆ. ಜನಪದ ಕಲೆಗಳು ನಮ್ಮ ಆಚಾರ, ವಿಚಾರ, ಸಂಸ್ಕೃತಿಗಳನ್ನು ಬಿಂಬಿಸುತ್ತಿವೆ. ಆದರೆ ಇತ್ತೀಚಿನ ಜಾನಪದ ಸಾಹಿತ್ಯ ಮಕ್ಕಳಲ್ಲಿ ಋಣಾತ್ಮಕ ಭಾವನೆ ಮೂಡಿಸುತ್ತಿವೆ. ಇಂತಹ ಸಾಹಿತ್ಯದಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳು ಜಾನಪದ ಸಾಹಿತ್ಯದ ಬಗ್ಗೆ ಒಲವು ಹೊಂದಬೇಕು ಎಂದರು.ಸಾಹಿತಿ, ಶಿಕ್ಷಕ ಹನುಮರಡ್ಡಿ ಇಟಗಿ ಮಾತನಾಡಿ, ಸಾಹಿತ್ಯದ ಮೂಲಬೇರು ಜಾನಪದ. ಜಾನಪದ ಸಾಹಿತ್ಯ ಹುಟ್ಟಿನಿಂದ ಮರಣದವರೆಗೂ ಇದೆ. ಗೀಗಿಪದ, ಹಂತಿಪದ, ಬಯಲಾಟ, ನಾಟಕ ಮುಂತಾದವುಗಳು ಜಾನಪದದ ಮೂಲಗಳಾಗಿವೆ. ಜಾನಪದದಲ್ಲಿ ಪ್ರಕೃತಿ, ನೀರು ಮುಂತಾದವುಗಳ ವರ್ಣನೆ ಇದೆ, ಮನಸ್ಸಿಗೆ ಉಲ್ಲಾಸ, ಉತ್ಸಾಹ ನೀಡುತ್ತವೆ. ಇತ್ತೀಚಿನ ಜಾನಪದ ಹಾಡುಗಳು ಜನರ ಹಾದಿ ತಪ್ಪಿಸುತ್ತಿದ್ದು, ಹಳೆಯ ಜಾನಪದ ಹಾಡುಗಳಲ್ಲಿನ ನೀತಿ ಪಾಠಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಜಾನಪದ ಸಾಹಿತಿ ನೀಲಪ್ಪ ಹಕ್ಕಂಡಿ ಮಾತನಾಡಿ, ಕನ್ನಡ ನಾಡು ನುಡಿಯಲ್ಲಿ ಜನಪದ ಹಾಸುಹೊಕ್ಕಾಗಿದೆ ಕನ್ನಡ ಭಾಷೆಯು ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿದೆ. ಮಾತೃಭಾಷೆ ಬಳಕೆ ಬಗ್ಗೆ ಹಿಂಜರಿಕೆ ಬೇಡ. ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕಿದೆ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕು ಎಂದರು.ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಅಡಿವೆವ್ವ ಚವಟಗಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ ಮುಕ್ಕಣ್ಣವರ, ಮುಖ್ಯ ಶಿಕ್ಷಕ ಗುರುರಾಜ ಪಾಟೀಲ, ಪ್ರಮುಖರಾದ ಅಡಿವೆಪ್ಪ ಚವಟಗಿ, ಅಂದಪ್ಪ, ಆನಂದರಡ್ಡಿ, ಹನುಮಪ್ಪ, ಶಾರದಮ್ಮ, ರವಿ, ಅಳವಂಡಿ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಸುರೇಶ ಸಂಗರಡ್ಡಿ, ಪ್ರಮುಖರಾದ ಅಡಿವೆಪ್ಪ ಚವಟಗಿ, ಅಂದಪ್ಪ, ಆನಂದರಡ್ಡಿ, ಹನುಮಪ್ಪ, ಲಕ್ಷ್ಮಣ, ಶಾರದಮ್ಮ, ರವಿ, ಶಿಕ್ಷಕರಾದ ವೆಂಕರಡ್ಡಿ, ಬಸಪ್ಪ, ಸಂಗಪ್ಪ, ಮುತ್ತು, ಮಂಜುನಾಥ, ಚನ್ನಪ್ಪ, ನಾಗಪ್ಪ, ಚಂದ್ರಶೇಖರಯ್ಯ, ಗಂಗಮ್ಮ ಹಾಗೂ ಮಕ್ಕಳು ಇದ್ದರು.