ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆ ಮತ್ತು ತಾಲೂಕು ಘಟಕದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಶಾಲಾ-ಕಾಲೇಜುಗಳಲ್ಲಿ ನಡೆಸುವ ವಾಡಿಕೆಯನ್ನು ಹೆಚ್ಚು ಬೆಳೆಸಿಕೊಳ್ಳಬೇಕಿದೆ. ಕಾರಣ ಯುವ ಜನಾಂಗಕ್ಕೆ ವಚನ ಸಾಹಿತ್ಯದ ಅನಿವಾರ್ಯತೆ ಇದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.ನಗರದ ತಣ್ಣೀರುಹಳ್ಳ ಶ್ರೀಮಠದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಉದ್ದೇಶಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆಯುವ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜಿನಲ್ಲಿ ನಡೆಸಲು ಇಲಾಖೆಯಿಂದ ಸುತ್ತೋಲೆ ಇರುವ ಹಿನ್ನಲೆಯಲ್ಲಿ ಜಿಲ್ಲಾ ಮತ್ತು ಹೋಬಳಿ ಅಧ್ಯಕ್ಷರು ಕಾರ್ಯಪ್ರವೃತ್ತರಾಗಬೇಕಿದೆ. ಅಲ್ಲದೆ ಮಕ್ಕಳಿಗೆ ವಚನ ಸಾಹಿತ್ಯದ ಅರಿವು ಮತ್ತು ಮಹತ್ವ ತಿಳಿಸುವ ಉದ್ದೇಶದಿಂದ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ ಹಾಗೂ ಯುವ ಶರಣ ಸಮ್ಮೇಳನಗಳನ್ನು ನಡೆಸಲಾಗುತ್ತದೆ ಎಂದ ಅವರು, ಶರಣ ಸಾಹಿತ್ಯ ಪರಿಷತ್ತು ಸುತ್ತೂರಿನ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ ಜನ್ಮ ದಿನದ ಅಂಗವಾಗಿ ೧೯೮೬ರಲ್ಲಿ ಸ್ಥಾಪಿಸಿದ್ದು, ಅಂದಿನಿಂದ ಇಡೀ ರಾಜ್ಯದಲ್ಲಿ ಸಕ್ರಿಯಾಗಿ ಕೆಲಸ ಮಾಡುತ್ತಿದೆ. ಯಾವುದೇ ಜಾತಿ, ಧರ್ಮ,ವರ್ಗಕ್ಕೆ ಸೀಮಿತವಾಗದ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿಯೊಬ್ಬರು ಕೂಡ ಸದಸ್ಯತ್ವವನ್ನು ಪಡೆಯಬಹುದು ಮತ್ತು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹೆಚ್ಚು ಸದಸ್ಯತ್ವ ಮತ್ತು ಮಹಾಮನೆ ಸದಸ್ಯತ್ವಕ್ಕೆ ಮನ್ನಣೆ ನೀಡಬೇಕಿದೆ ಎಂದು ಕಿವಿಮಾತು ಹೇಳಿದರು.
೧೨ನೇ ಶತಮಾನದಲ್ಲಿ ಜನ್ಮತಾಳಿದ ಶರಣ ಧರ್ಮ ಇಡೀ ಜಗತ್ತಿನಲ್ಲಿ ತನ್ನದೆಯಾದ ಖ್ಯಾತಿಯನ್ನು ಪಡೆದಿದೆ. ವಿಶ್ವಗುರು ಬಸವಣ್ಣನವರು, ಅಕ್ಕಮಹಾದೇವಿ, ಅಲ್ಲಮ, ಸಿದ್ದರಾಮರು ಸೇರಿದಂತೆ ನೂರಾರು ವಚನಕಾರರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ಅಪರೂಪ ಕೊಡುಗೆ ನೀಡಿದ್ದಾರೆ. ಇಂತಹ ಅಮೂಲ್ಯ ವಚನ ಸಾಹಿತ್ಯವನ್ನು ಶರಣ ಸಾಹಿತ್ಯ ಪರಿಷತ್ತು ಘಟಕಗಳು ಯಾವುದೇ ದುರುದ್ದೇಶವಿಲ್ಲದೆ ಜನರಿಗೆ ನೀಡಬೇಕಿದೆ. ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿರವರ ಅಧ್ಯಕ್ಷತೆಯನ್ನು ಜಿಲ್ಲೆಯಲ್ಲಿ ಉತ್ತಮ ಸಂಘಟನೆ ನಡೆದಿದ್ದು, ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಜಿಲ್ಲಾ ಸಮ್ಮೇಳನ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೇಂದ್ರ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಗಾಂಜಿ, ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಖಜಾಂಚಿ ರುದ್ರಸ್ವಾಮಿ, ಉಪಾಧ್ಯಕ್ಷ ನಂಜುಂಡಸ್ವಾಮಿ, ಯುವ ಘಟಕದ ಅಧ್ಯಕ್ಷ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಹೆಬ್ಬಾಳು ಹಾಲಪ್ಪ ಬೇಲೂರು, ಪುಟ್ಟರಾಜು ಹಾಸನ, ವಿಜಿಯಕುಮಾರ್ ಅಲೂರು, ಶೇಖರ್ ಅರಸೀಕೆರೆ, ಚಿರಂಜೀವಿ ಚನ್ನರಾಯಪಟ್ಟಣ, ಎಚ್.ಎನ್. ನಾಗೇಶ್ ಇನ್ನು ಮುಂತಾದವರು ಹಾಜರಿದ್ದರು. ಫೋಟೋ: ನಗರದ ತಣ್ಣೀರುಹಳ್ಳ ಶ್ರೀಮಠದ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಘಟಕದ ಸಭೆ ನಡೆಯಿತು.