ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯ ತುಂಬುವ ಅವಶ್ಯವಿದೆ

| Published : Jul 21 2025, 01:30 AM IST

ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯ ತುಂಬುವ ಅವಶ್ಯವಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ನಗರದ ನಿವೃತ್ತ ನೌಕರರ ಭವನದಲ್ಲಿ ಎಸ್ಎಸಎಲ್‌ಸಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಇಂದಿನ ಮಕ್ಕಳಿಗೆ ನೈತಿಕ ಮೌಲ್ಯದ ಕೊರತೆಯಿದ್ದು ವಯಸ್ಸಾದ ತಂದೆ-ತಾಯಿ, ಅಜ್ಜಿ-ತಾತ ಇತರರನ್ನು ಮನೆಯಿಂದ ದೂರ ತಳ್ಳದೆ ಪ್ರೀತಿ ಮಮತೆ ವಾತ್ಸಲ್ಯ ನೀಡಿ ಆರೈಕೆ ಮಾಡುವತ್ತ ಯುವ ಸಮುದಾಯ ಸಾಗಬೇಕಿದೆ ಎಂದು ಸಮಾಜ ವಿಜ್ಞಾನಿ ಹಾಗೂ ಎಮ್ಎಸ್ಎಸ್ ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ. ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.

ನಗರದ ನಿವೃತ್ತ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ,ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಎಸ್‌ಎಸ್ಎಲ್‌ಸಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಮಾತಿನಂತೆ ಮಕ್ಕಳಿಗೆ ಆಸ್ತಿ ಸಂಪತ್ತು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಿದೆ. ಮುಖ್ಯವಾಗಿ ಹಿರಿಯರನ್ನು ಗೌರವಿಸುವ, ಪೋಷಿಸುವ ಸದ್ಗುಣಗಳನ್ನು ಯುವಕರು ಜನತೆಯಲ್ಲಿ ಬಿತ್ತಬೇಕಿದೆ ಎಂದರು.

ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ತಾಲೂಕಿನಲ್ಲಿ ಮಕ್ಕಳ ಸಾಹಿತ್ಯ ವೇದಿಕೆ ಫೆಬ್ರವರಿ 2002ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೆ ಮಕ್ಕಳ ಸಾಂಸ್ಕೃತಿಕ ಬದುಕಿಗೆ ಚೇತನ ಶಕ್ತಿಯಾಗಿದೆ. ವಚನ ಗಾಯನ, ರಂಗಗೀತೆ, ಜಾನಪದ,ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಕಂಠಪಾಠ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಕೆಲಸವನ್ನು ವೇದಿಕೆ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳಿಗೆ ತಾಲೂಕು ಮಟ್ಟದ ಕನ್ನಡ ಕುವರ ಕುವರಿ ಪ್ರಶಸ್ತಿ ನೀಡುವ ಕಾರ್ಯಕ್ರಮ ರಾಜ್ಯದಲ್ಲೇ ಪ್ರಥಮವಾಗಿದ್ದು ಸರ್ಕಾರ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಿದ್ದು ಮಕ್ಕಳ ಸಾಹಿತ್ಯ ವೇದಿಕೆಯ ಅಸ್ಮಿತೆಗೆ ಸಾಕ್ಷಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಆಲೂರು ಹನುಮಂತರಾಯಪ್ಪ ಮಾತನಾಡಿ, ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಗಮನಿಸಿದಾಗ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳೇ ಪ್ರತಿಭಾವಂತರಾಗಿ ಕಾಣುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಕುಟುಂಬಕ್ಕೆ, ಸಮಾಜಕ್ಕೆ, ಮನೆತನಕ್ಕೆ ಒಳ್ಳೆ ಹೆಸರು ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಜೆ. ನಿಜಲಿಂಗಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಬಿ. ಜಯದೇವಮೂರ್ತಿ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಆರ್ ಏಕಾಂತಪ್ಪ, ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ತಾಲೂಕು ಘಟಕದ ಮಾಜಿ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ. ಎಂ. ರಮೇಶ್ ನಾಯ್ಕ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಕಾಮಣ್ಣ,ಬಿ.ಟಿ. ಶಂಕರ್ ಲಿಂಗಯ್ಯ,ಕೆ ಗುರುಸಿದ್ದಪ್ಪ, ಬಿ ಎಂ ಜನಾರ್ದನ ಶೆಟ್ಟಿ, ಎಂ.ಎಸ್ ಚಂದ್ರವದನ, ಸುಲೋಚನ, ನಾಗರತ್ನಮ್ಮ,ಶಾರದಮ್ಮ ಮುಂತಾದವರು ಉಪಸ್ಥಿತರಿದ್ದರು.