ಕಲೆ ಸಂರಕ್ಷಿಸುವ ಅನಿವಾರ್ಯತೆ ಇದೆ: ಮೋಹನ್ ಆಳ್ವ

| Published : Feb 04 2024, 01:32 AM IST

ಸಾರಾಂಶ

ರಾಜ್ಯದ ಕಲೆ ಯಾವುದು ಎಂಬುದನ್ನು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಕಲೆಗಳನ್ನು ಪೋಷಿಸಿ, ಸಂರಕ್ಷಿಸುವ ಅನಿವಾರ್ಯತೆ ಇದೆ

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ನಾಡಿನ ತುಂಬಾ ಹಲವಾರು ಜಾನಪದ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಲೆಗಳಿದ್ದು, ರಾಜ್ಯದ ಕಲೆ ಯಾವುದು ಎಂಬುದನ್ನು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಕಲೆಗಳನ್ನು ಪೋಷಿಸಿ, ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಪಟ್ಟಣದಲ್ಲಿ ದುಂಡಿಬಸವೇಶ್ವರ ಜನಪದ ಕಲಾಸಂಘದಿಂದ ಆಯೋಜಿಸಿರುವ ೩೨ನೇ ಕನ್ನಡ ನುಡಿ ಸಂಭ್ರಮದ 2ನೇ ದಿನವಾದ ಶುಕ್ರವಾರ ಜನಪದ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಕ್ಕೆ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಗಳು ಎಂಟು ಬಾರಿ ಲಭಿಸಿದ್ದು ನಮ್ಮ ಭಾಷೆಗಿರುವ ಮೌಲ್ಯವನ್ನು ತೋರುತ್ತದೆ. ಜನಮಾನಸದಲ್ಲಿ ನಿತ್ಯಕರ್ಮಗಳ ಆಧಾರದ ಮೇಲೆ ಹುಟ್ಟಿಕೊಂಡಿರುವ ಜನಪದ ಸಾಹಿತ್ಯ ೭ನೇ ಶತಮಾನದ ಶಿಸ್ತುಬದ್ಧ ಅವಶೇಷವಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಲಕಸುಬುಗಳು ಮರೆಯಾದಂತೆಲ್ಲ ಜಾನಪದ ಸಾಹಿತ್ಯ ಕಳೆ ಕಳೆದುಕೊಳ್ಳುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳ ಉನ್ನತೀಕರಣದಲ್ಲಿ ಕನ್ನಡ ಭಾಷೆಯ ಉಳಿವು ಅಡಗಿದೆ ಎಂಬುದನ್ನು ರಾಜ್ಯ ಸರ್ಕಾರ ಮನಗಾಣಬೇಕಿದೆ. ೧೦೦೦ಕ್ಕೂ ಹೆಚ್ಚು ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಾದರಿಯ ಶಾಲೆಗಳು ರಾಜ್ಯದಲ್ಲಿದ್ದು, ಇಂದಿಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ ಕಾಣುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಪ್ರತಿಷ್ಠಿತ ಬಸವ ಚೇತನ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಜಾನಪದ ಗಾರುಡಿಗ ಗುರುರಾಜ್ ಹೊಸಕೋಟೆ, ಇತ್ತೀಚೆಗೆ ರಾಜ್ಯದ ರಾಜಧಾನಿಯನ್ನೆ ಬದಲಾಯಿಸುವ ಮಟ್ಟಕ್ಕೆ ಕನ್ನಡ ಭಾಷೆ ಸ್ವಾಮ್ಯತೆ ಕಳೆದುಕೊಂಡಿದೆ. ಕನ್ನಡ ಭಾಷೆ ಅನುಷ್ಠಾನಗೊಳಿಸುವ ಇಲಾಖೆಗಳಿಗೆ ಸೋಲಾಗುತ್ತಿದೆಯೇ ಹೊರತು ಕನ್ನಡಕ್ಕೆ ಎಂದು ಸೋಲಾಗಿಲ್ಲ. ರಾಜಧಾನಿ ಬೆಂಗಳೂರಿನಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಪ್ರಾದೇಶಿಕ ಭಾಷೆಯ ಬೆಳವಣಿಗೆಯತ್ತ ಮುಖ ಮಾಡಬೇಕಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, ಅವುಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕಿದೆ ಎಂದ ಅವರು, ಜಾನಪದ ಹಾಡುಗಳ ಮೂಲಕ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು.

ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಮಾತನಾಡಿ, ತಾತ್ಕಾಲಿಕ ಸಂದರ್ಭಕ್ಕೆ ದೇಶೀಯ ಪರಂಪರೆಗಳಿಂದ ವಿಮುಖರಾಗುತ್ತಿರುವ ಅಸಂಖ್ಯಾತ ಜನತೆ, ಪಾಶ್ಚಾತ್ಯ ಸಂಸ್ಕೃತಿಯನ್ನೆ ಮೈಗೂಡಿಸಿಕೊಂಡು ಜೀವನಶೈಲಿ ಬದಲಿಸಿಕೊಳ್ಳುತ್ತಿರುವುದು ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ ಎಂದರು.

ಇದೇ ವೇಳೆ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ವಾಗ್ಮಿ ನಾರಾಯಣ ಭಾಗ್ವತ್, ರಾಜಕೀಯ ಧುರೀಣರಾದ ಕಾಂತೇಶ ಈಶ್ವರಪ್ಪ, ರಾಜಶೇಖರ ಕಟ್ಟೇಗೌಡ್ರ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಕಡುಬಗೆರೆ ಮಂಜುನಾಥ ತಂಡದವರಿಂದ ವಿಶೇಷ ಗೀತ ಸಂಭ್ರಮ ಎಲ್ಲರ ಮನಸೂರೆಗೊಂಡಿತು.