ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಅತ್ತೂರುಕೊಲ್ಲಿ 52 ಕುಟುಂಬಗಳ ಒಕ್ಕಲೆಬ್ಬಿಸುವ ಪ್ರಕರಣವು ಇನ್ನೂ ಪರಿಶೀಲನಾ ಹಂತದಲ್ಲಿದ್ದು, ಜಿಲ್ಲಾ ಮಟ್ಟದ ಸಮಿತಿ ವರದಿ ಬಂದ ನಂತರ ಪುನರ್ ಪರಿಶೀಲನೆಗೆ ಅವಕಾಶವಿದ್ದು, ಬಾಧಿತರು ಅರ್ಜಿ ಸಲ್ಲಿಸಿದಲ್ಲಿ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಗಿರಿಜನ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಿ. ರಂದೀಪ್ ಹೇಳಿದರು.ತಾಲೂಕಿನ ನಲ್ಲೂರುಪಾಲ ಆಶ್ರಮಶಾಲೆಯಲ್ಲಿ ಆದಿವಾಸಿ ಮುಖಂಡರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಎಲ್‌ಸಿ ಸಮಿತಿ ವರದಿ ಬಂದ ನಂತರ ಆಕ್ಷೇಪಣೆಗೆಳನ್ನು ಸಲ್ಲಿಸಲು 90 ದಿನಗಳ ಅವಕಾಶವಿದ್ದು, ಬಾಧಿತರು ಅರ್ಜಿ ಸಲ್ಲಿಸಬಹುದಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಾಮೂಹಿಕವಾಗಿ ಅರ್ಜಿದಾರರಿಗೆ ಕಾನೂನಾತ್ಮಕವಾಗಿ ದಾಖಲೆಗಳನ್ನು ಸಲ್ಲಿಸಲು ಮತ್ತಿತರ ಕಾರ್ಯಗಳಿಗೆ ಅವಕಾಶ ನೀಡದೇ ಅರ್ಜಿಗಳು ತಿರಸ್ಕೃತಗೊಂಡಿದ್ದರೆ, ಅಂತಹವುಗಳನ್ನು ಮರು ಪರಿಶೀಲನೆಗೆ ಅವಿಕಾಶ ಕಲ್ಪಿಸಲು ಸೂಚಿಸಿದೆ.
ಅಂತೆಯೇ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರೊ. ಮುಜಾಫರ್ ಅಸಾದಿ ವರದಿಯನ್ವಯ 3,418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ಗಿರಿಜನರ ಪರ ಸರ್ಕಾರ ಸಾಂಕೇತಿವಾಗಿ ನಿರ್ಧಾರ ತೆಗೆದುಕೊಂಡಿದ್ದು, ಈ ಪ್ರಕರಣದಲ್ಲಿ ಗಿರಿಜನರಿಗೆ ಅನ್ಯಾಯವಾಗಿರುವುದು ಕಂಡು ಬಂದಿದೆ. ಶೀಘ್ರ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ ಎಂದರು.ಸುಳ್ಳು ಜಾತಿ ಪ್ರಮಾಣಪತ್ರ
ತಾಲೂಕಿನ ಹಲವು ಗ್ರಾಮಗಳಲ್ಲಿ ತಮಿಳು ಸಮುದಾಯದ ಅಲೆಮಾರಿ ಕುಟುಂಬಗಳಿಗೆ ಜೇನು ಕುರುಬ ಜಾತಿ ಪ್ರಮಾಣಪತ್ರ ನೀಡಲಾಗಿದ್ದು, ಈ ಕುರಿತು ಜೇನು ಕುರುಬರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಗಮನ ಸೆಳೆದಾಗ, ಜಿಲ್ಲಾಧಿಕಾರಿಗಳ ಹಂತದಲ್ಲಿ ಜಾತಿ ಪರಿಶೀಲನಾ ಸಮಿತಿ ಇದ್ದು, ಬಾಧಿತರು ಕೂಡಲೇ ಸಿಆರ್.ಐ ಸಮಿತಿಗೆ ದೂರು ನೀಡಿದಲ್ಲಿ ಶೀಘ್ರ ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು. ಸುಳ್ಳು ಜಾತಿಪ್ರಮಾಣಪತ್ರ ನೀಡುವುದು ಅಕ್ಷಮ್ಯ ಅಪರಾಧವಾಗಿದ್ದು, ಅದರಲ್ಲೂ ಅರಣ್ಯ ಆಧಾರಿತ ಸಮುದಾಯಗಳಲ್ಲೇ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಜೇನು ಕುರುಬ ಸಮುದಾಯಕ್ಕೆ ಅನ್ಯಾಯವಾಗಬಾರದು ಎನ್ನುವುದು ಸರ್ಕಾರದ ಅಭಿಮತವಾಗಿದೆ ಎಂದರು.ಆದಿವಾಸಿ ನಿಗಮ ಸ್ಥಾಪನೆ
ಆದಿವಾಸಿಗಳನ್ನು ಅಲೆಮಾರಿ ನಿಗಮದೊಳಗೆ ಸೇರ್ಪಡೆಗೊಳಿಸಿರುವ ಕುರಿತು ಆದಿವಾಸಿಗಳ ಆಕ್ಷೇಪಣೆಯನ್ನು ಗಮನದಲ್ಲಿರಿಸಿಕೊಂಡು ಇದೀಗ ಆದಿವಾಸಿ ನಿಗಮ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆ ಮೂಲಕ ಆದಿವಾಸಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿದೂಗಿಸಲು ಕ್ರಮವಹಿಸಲಾಗುವುದು. ಆದಿವಾಸಿಮಂಡಳಿ ರಚನೆ ಅತ್ಯಂತ ದೀಘ್ರ ಉಪಕ್ರಮಗಳನ್ನು ಹೊಂದಿದ್ದು, ಈ ಕುರಿತು ಹಂತ ಹಂತವಾಗಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.ಜೇನು ಕುರುಬ ಕಚೇರಿ ಸ್ಥಾಪಿಸಿ
ಆದಿವಾಸಿ ಮುಖಂಡ ಜೆ.ಕೆ. ರಾಜಪ್ಪ ಮಾತನಾಡಿ, ಹುಣಸೂರಿನಲ್ಲಿ 15 ವರ್ಷಗಳ ಹಿಂದೆ ಜೇನು ಕುರುಬರ ಕಚೇರಿ ಇತ್ತು. ಅದನ್ನು ಮರುಸ್ಥಾಪಿಸಲು ಒತ್ತಾಯಿಸಿದರು. ಹೆಬ್ಬಳ್ಳ ಹಾಡಿಯ ಚಂದ್ರು, ಆಶ್ರಮ ಶಾಲೆಗಳಲ್ಲಿ ನುರಿತ ಶಿಕ್ಷಕರನ್ನು ನೇಮಿಸಲು ಕೋರಿದರು.ನಾಗಪುರ ಖಾಲಿ ಮಾಡಲು ಸೂಚಿನೆ
ನಾಗಪುರ ಒಂದನೇ ಬ್ಲಾಕ್ ಯುವಕ ಸಂಜಯ್ ಮಾತನಾಡಿ, ಮೂರು ದಿನಗಳ ಹಿಂದೆ ಉಪವಿಭಾಗಾಧಿಕಾರಿಗಳು ಪುನರ್ವಸತಿ ಕೇಂದ್ರಕ್ಕೆ ಬಂದು ಈ ಜಾಗ ರೆಸಾರ್ಟ್ ಸ್ಥಾಪನೆಗೆ ಮಂಜೂರಾಗಿದ್ದು, ನೀವು ಖಾಲಿ ಮಾಡಬೇಕು ಎಂದು ಸೂಚಿಸಿದ್ದಾರೆ. ನಮಗೆಲ್ಲರಿಗೂ ಆತಂಕವಾಗಿದೆ ಎಂದು ದೂರಿದಾಗ ಈ ಕುರಿತು ಇಲಾಖೆಗೆ ಮಾಹಿತಿ ಇಲ್ಲ. ಪರಿಶೀಲನೆ ನಡೆಸುವುದಾಗಿ ಜಂಟಿ ನಿರ್ದೇಶಕ ಮಲ್ಲೇಶ್ ತಿಳಿಸಿದರು.ಪಿರಿಯಾಪಟ್ಟಣದ ನಾರಾಯಣಪುರ ಹಾಡಿಯ ಬಸವಣ್ಣ, ವಸತಿಯೋಜನೆಯಡಿ ಮನೆ ನಿರ್ಮಾಣಕ್ಕೆ ಗಿರಿಜನರು ಮುಂದಾಗಿದ್ದು ಕೆಲವರಿಗೆ ನಿವೇಶನದ ದಾಖಲೆಗಳು ಸಿಗುತ್ತಿಲ್ಲ. ಆಯಾ ಗ್ರಾಪಂಗಳಿಗೆ ಶೀಘ್ರ ದಾಖಲೆ ನೀಡಲು ಸೂಚಿಸಿರಿ ಎಂದು ಕೋರಿದರು.
ಅಯ್ಯನಕರೆ ಹಾಡಿಯ ಶಿವಣ್ಣ ಅರಣ್ಯ ಹಕ್ಕು ಕಾಯ್ದೆಯಡಿ ಸಾಮೂಹಿಕ ಹಕ್ಕು ಮತ್ತು ವೈಯಕ್ತಿಕ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದು, ಕ್ರಮವಹಿಸಿಲ್ಲವೆಂದು ಬೇಸರಿಸಿದಾಗ, ಜಂಟಿ ನಿರ್ದೇಶಕ ಮಲ್ಲೇಶ್ ಉತ್ತರಿಸಿ ಜಿಲ್ಲೆಯಲ್ಲಿ 25 ಸಾಮೂಹಿಕ ಅರ್ಜಿಗಳ ಸರ್ವೇ ಕಾರ್ಯ ಸಂಪನ್ನಗೊಂಡು ಸ್ಕೆಚ್ ತಯಾರಿಸುವ ಹಂತದಲ್ಲಿದ್ದು, ಶೀಘ್ರ ಸಾಮೂಹಿಕ ಹಕ್ಕನ್ನು ನೀಡಲಾಗುವುದು ಎಂದರು.ಲ್ಯಾಂಪ್ಸ್ ಸೊಸೈಟಿಯ ಎಂ. ಕೃಷ್ಣಯ್ಯ, ಮರಳುಕಟ್ಟೆಹಾಡಿಯ ಮಧುಕರ್, ಮಾಸ್ತಿಗುಡಿಯ ಅಣ್ಣಯ್ಯ ಸಲಹೆಗಳನ್ನು ನೀಡಿದರು.
ಸಂವಾದದ ವೇಳೆ ಡಾ. ರವೀಶ್, ಭವ್ಯ, ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಗಂಗಾಧರ್ ಇದ್ದರು.;Resize=(128,128))
;Resize=(128,128))
;Resize=(128,128))