ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಜಿಲ್ಲೆಯ ಮೂಲಕ ರಾಮನಗರ ಸೇರಿದಂತೆ ಇತರ ಪ್ರದೇಶಗಳಿಗೆ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಹರಿಸುವ ಕಾಮಗಾರಿಯನ್ನು ವಿರೋಧಿಸಿ ತುರುವೇಕೆರೆ ಬಂದ್ ಯಶಸ್ವಿಯಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಂ ನೇತೃತ್ವದಲ್ಲಿ ನಡೆದ ಬಂದ್ ಗೆ ತಾಲೂಕಿನ ಹಲವಾರು ಸಂಘಟನೆಗಳು ಸಾಥ್ ನೀಡಿದ್ದವು. ಬೆಳಗ್ಗೆ ೬ ಗಂಟೆಯಿಂದ ಬಂದ್ ಆಚರಣೆಗೆ ಕರೆ ನೀಡಲಾಗಿತ್ತು. ಬೆಳಗ್ಗೆಯಿಂದಲೇ ಎಲ್ಲಾ ಅಂಗಡಿ, ಹೋಟೆಲ್, ಶಾಲಾಕಾಲೇಜುಗಳು, ಸೇರಿದಂತೆ ಹತ್ತು ಹಲವಾರು ವಾಣಿಜ್ಯ ವಹಿವಾಟುಗಳು ಸಂಪೂರ್ಣ ಸ್ವಯಂ ಪ್ರೇರಣೆಯಿಂದ ಬಂದ್ ಆಗಿದ್ದವು. ಬಸ್ ಸಂಚಾರ ಎಂದಿನಂತೆ ಇದ್ದವು. ಬ್ಯಾಂಕ್. ಸರ್ಕಾರಿ ಕಚೇರಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರೂ ಸಹ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಪಟ್ಟಣದ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿತ್ತು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರನ್ನು ರಾಮನಗರ ಸೇರಿದಂತೆ ಇತರ ಪ್ರದೇಶಗಳಿಗೆ ಕೊಂಡೊಯ್ದರೆ ಜಿಲ್ಲೆಯ ಹಲವಾರು ತಾಲೂಕುಗಳಿಗೆ ನೀರಿಲ್ಲದಂತಾಗುತ್ತದೆ. ಕುಡಿಯುವ ನೀರಿಗೂ ತತ್ವಾರ ಬಂದೊದಗಿದರೂ ಸಹ ಆಶ್ಚರ್ಯವಿಲ್ಲ. ಈಗಲೇ ಜಿಲ್ಲೆಯ ರೈತಾಪಿಗಳು ಎಚ್ಚೆತ್ತು ಹೋರಾಟಕ್ಕಿಳಿದು ಕಾಮಗಾರಿಯನ್ನು ತಡೆಹಿಡಿಯದಿದ್ದಲ್ಲಿ ಜಿಲ್ಲೆಯ ರೈತರಿಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು.ಮಾಜಿ ಶಾಸಕ ಮಸಾಲಾ ಜಯರಾಂ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಿಲ್ಲೆಯ ರೈತಾಪಿ ವರ್ಗಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಜಿಲ್ಲೆಗೆ ನಿಗದಿಪಡಿಸಿರುವ ೨೩ ಟಿಎಂಸಿ ನೀರನ್ನು ಹೊರತುಪಡಿಸಿ ರಾಮನಗರ ಸೇರಿದಂತೆ ಇತರ ಪ್ರದೇಶಗಳಿಗೆ ನೀರು ಹರಿಸಲು ತಕರಾರಿಲ್ಲ. ಆದರೆ ಜಿಲ್ಲೆಗೆ ಹರಿಸಬೇಕಿರುವ ನೀರನ್ನೇ ಹರಿಸಿದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು. ಪಟ್ಟಣ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ರಾಮೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎಚ್.ಧನಪಾಲ್, ಪಪಂ ಸದಸ್ಯರಾದ ಎನ್.ಆರ್.ಸುರೇಶ್, ಮಧು, ಚಿದಾನಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.