ದಾವಣಗೆರೆ ಸ್ವಾಮಿ ವಿವೇಕಾನಂದ ಬಡಾವಣೆ ಪಾರ್ಕ್ ಜಾಗವನ್ನು ಏಕ ನಿವೇಶನ ಮಾಡಿಕೊಟ್ಟಿದ್ದಕ್ಕೆ ದಾಖಲೆಗಳು ನಮ್ಮಲ್ಲಿದ್ದು, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಕಳ್ಳಾಟ ಬಿಟ್ಟು, ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ದೂಡಾ ಮಾಜಿ ಅಧ್ಯಕ್ಷ, ಬಿಜೆಪಿ ಯುವ ಮುಖಂಡ ರಾಜನಹಳ್ಳಿ ಶಿವಕುಮಾರ್‌ ಪಂಥಾಹ್ವಾನ ನೀಡಿದ್ದಾರೆ.

ದಾವಣಗೆರೆ: ದಾವಣಗೆರೆ ಸ್ವಾಮಿ ವಿವೇಕಾನಂದ ಬಡಾವಣೆ ಪಾರ್ಕ್ ಜಾಗವನ್ನು ಏಕ ನಿವೇಶನ ಮಾಡಿಕೊಟ್ಟಿದ್ದಕ್ಕೆ ದಾಖಲೆಗಳು ನಮ್ಮಲ್ಲಿದ್ದು, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಕಳ್ಳಾಟ ಬಿಟ್ಟು, ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ದೂಡಾ ಮಾಜಿ ಅಧ್ಯಕ್ಷ, ಬಿಜೆಪಿ ಯುವ ಮುಖಂಡ ರಾಜನಹಳ್ಳಿ ಶಿವಕುಮಾರ್‌ ಪಂಥಾಹ್ವಾನ ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಬನೂರು ಗ್ರಾಮದ ರಿ.ಸ.ನಂ.127ರ ಪಾರ್ಕ್ ಜಾಹವನ್ನು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಖಾಸಗಿ ವ್ಯಕ್ತಿಗಳಿಗೆ ಏಕ ನಿವೇಶನವಾಗಿ ಮಾಡಿಕೊಟ್ಟಿದ್ದು, ಏಕ ನಿವೇಶನವನ್ನು ರದ್ದುಪಡಿಸಿ, ಪಾರ್ಕ್ ಜಾಗವನ್ನು ಉಳಿಸುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ದೂಡಾ ಅಧಿಕಾರವು ಯೋಗ್ಯರಲ್ಲದವರಿಗೆ ಸಿಕ್ಕರೆ ಏನಾಗುತ್ತದೆಂಬುದಕ್ಕೆ ಇದೊಂದು ನಿದರ್ಶನವಾಗಿದೆ. ನಾವಂತೂ ಪಾರ್ಕ್ ಜಾಗವನ್ನು ಹೀಗೆ ಕಬಳಿಸುವುದಕ್ಕೆ ಬಿಡುವವರಲ್ಲ. ಈ ಬಗ್ಗೆ ಹೋರಾಟ ನಡೆಸುವ ಜೊತೆಗೆ ಸ್ವಾಮಿ ವಿವೇಕಾನಂದ ಬಡಾವಣೆ ಪಾರ್ಕ್ ಜಾಗ ಉಳಿಸುವವರೆಗೂ ಹೋರಾಡುತ್ತೇವೆ ಎಂದರು.

1984ರಲ್ಲಿ ದೂಡಾದಿಂದ ಈ ಜಾಗವು ಪಾರ್ಕ್‌ಗಾಗಿ ಅನುಮೋದನೆಯಾಗಿ, ರಾಜ್ಯಪಾಲರ ಹೆಸರಿಗೆ ನೋಂದಣಿಯಾಗಿದೆ. ಸುಮಾರು 17 ಸಾವಿರ ಅಡಿ ಜಾಗವಾಗಿದ್ದು, ಅದರ ಇಂದಿನ ಬೆಲೆಯೇ ಸುಮಾರು 18-20 ಕೋಟಿ ರು.ಗಳಷ್ಟಿದೆ ಎಂದು ತಿಳಿಸಿದರು.

ಖಾಸಗಿ ವ್ಯಕ್ತಿಯ 2005ರಲ್ಲಿ ದೂಡಾಗೆ ಅರ್ಜಿ ಬರೆದು, ಅಲ್ಲಿರುವ ಉದ್ಯಾನವನ ಜಾಗ ತಮಗೆ ಕೊಡಿ, ಅದಕ್ಕೆ ಪ್ರತಿಯಾಗಿ ತಮ್ಮದೇ ಬೇರೆ ಜಾಗ ನೀಡುವುದಾಗಿ ಮನವಿ ಮಾಡಿದ್ದರು. ಅದನ್ನು ಸರ್ಕಾರದ ನಗರ ಯೋಜನಾ ಇಲಾಖೆ ತಿರಸ್ಕರಿಸಿತ್ತು. 2006 ಹಾಗೂ 2015ರಲ್ಲಿ ಪಾರ್ಕ್ ಅಭಿವೃದ್ಧಿಪಡಿಸಲು ದೂಡಾದಿಂದ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಇದೆಲ್ಲಾ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಸಿವಿಲ್ ನ್ಯಾಯಾಲಯದಲ್ಲಿ ಪಾರ್ಕ್ ಜಾಗ ಖಾಸಗಿ ವ್ಯಕ್ತಿ ಪಾಲಾಗಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದರೂ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಪಾರ್ಕ್ ಜಾಗವನ್ನು ಖಾಸಗಿ ವ್ಯಕ್ತಿಗೆ ಏಕ ನಿವೇಶನ ಮಾಡಿಕೊಟ್ಟಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ದೂಡಾದ ಯಾವುದೇ ಸಭೆಯಲ್ಲೂ ಇದಕ್ಕೆ ಅನುಮೋದನೆ ನೀಡಿಲ್ಲ. ತಾನು ಯಾವುದೇ ಸಹಿ ಮಾಡಿಲ್ಲವೆಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಸುಳ್ಳು ಹೇಳಿದ್ದಾರೆ. 3.6.2025ರಂದು ಅದೇ ದಿನೇಶ ಶೆಟ್ಟಿ ಅಧ್ಯಕ್ಷತೆಯ ದೂಡಾ ಸಭೆಯಲ್ಲಿ ಏಕ ನಿವೇಶನಕ್ಕೆ ಅನುಮೋದನೆ ನೀಡಲಾಗಿದೆ. 18-20 ಕೋಟಿ ರು.ಗಳಷ್ಟು ಮೌಲ್ಯದ ಸಾರ್ವಜನಿಕ ಪಾರ್ಕ್ ಜಾಗ ಖಾಸಗಿ ವ್ಯಕ್ತಿ ಪಾಲಾಗಲು ದೂಡಾ ಅಧ್ಯಕ್ಷ ಎಷ್ಟು ಹಣ ಪಡೆದಿದ್ದಾರೆಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಕಳೆದ 2 ದಶಕದಿಂದಲೂ ಭೂ ಮಾಫಿಯಾದಿಂದ ಪಾರ್ಕ್ ಜಾಗವನ್ನು ರಕ್ಷಿಸಲು ಸ್ವಾಮಿ ವಿವೇಕಾನಂದ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ನಿರಂತರ ಹೋರಾಟ ನಡೆಸುತ್ತಿದೆ. ಆದರೆ, ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಭೂ ಮಾಫಿಯಾದವರ ಜೊತೆಗೆ ಕೈಜೋಡಿಸಿ, ಬಹುಕೋಟಿ ಮೌಲ್ಯದ ಪಾರ್ಕ್ ಜಾಗವನ್ನೇ ಏಕ ನಿವೇಶನವಾಗಿ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕ ಪಾರ್ಕ್ ಉಳಿಸಲು ಇಚ್ಛಾಶಕ್ತಿ, ಬದ್ಧತೆ ಇದ್ದಿದ್ದರೆ ಸಿವಿಲ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಿತ್ತು. ಯಾಕೆ ಮೇಲ್ಮನವಿ ಸಲ್ಲಿಸಲಿಲ್ಲ? ಇದರಲ್ಲಿ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿರುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಪಾಲಿಕೆ ಆಯುಕ್ತರು ಡೋರ್ ನಂಬರ್ ನೀಡದೇ, ಏಕ ನಿವೇಶನ ಅನುಮೋದನೆ ರದ್ದುಪಡಿಸುವಂತೆ ಈಗಾಗಲೇ ದೂಡಾಗೆ ಪತ್ರ ಬರೆದಿದ್ದಾರೆ. ಆದರೂ, ದೂಡಾ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಇದರಲ್ಲಿ ದೂಡಾ ಅಧ್ಯಕ್ಷರೇ ಕೋಟಿಗಟ್ಟಲೇ ಹಣ ತಿಂದಿರುವುದಾಗಿ ಜನ ಮಾತನಾಡುತ್ತಿದ್ದಾರೆ. ಇನ್ನಾದರೂ ಏಕ ನಿವೇಶನ ಅನುಮೋದನೆ ರದ್ಧುಪಡಿಸಬೇಕು. ಯಾರೇ ಆಗಲಿ ಅಧಿಕಾರದಲ್ಲಿದ್ದಷ್ಟು ದಿನಗಳ ಕಾಲ ಒಳ್ಳೆಯ ಕೆಲಸ ಮಾಡಿ, ತಮ್ಮ ಪಾಪ ಕಳೆದುಕೊಳ್ಳಬೇಕು ಎಂದು ಕಿವಿಮಾತು

ಬಿಜೆಪಿ ಮುಖಂಡರಾದ ಶಂಕರಗೌಡ ಬಿರಾದಾರ್, ಟಿಂಕರ್ ಮಂಜಣ್ಣ, ಬಾಲಚಂದ್ರ ಶ್ರೇಷ್ಠಿ, ಕಿರೀಟ್ ಕಲಾಲ್‌, ಪುಲ್ಲಯ್ಯ, ರವಿಕುಮಾರ, ಕಿಶೋರಕುಮಾರ, ಜಯಚಂದ್ರ, ಹನುಮಂತಪ್ಪ, ಹರೀಶ ಹೊನ್ನೂರು, ಪೈಲ್ವಾನ್ ಹನುಮಂತಪ್ಪ, ರಾಜುಗೌಡ ಇತರರು ಇದ್ದರು. ಎಸ್‌ಎಸ್‌ ಕುಟುಂಬದ ಸೇವೆ ಮಾಡಿಕೊಂಡಿದ್ದವರನ್ನು

ದೂಡಾ ಅಧ್ಯಕ್ಷರನ್ನಾಗಿ ಮಾಡಿದ್ದೇ ಪ್ರಮಾದ: ಶಿವುದಾವಣಗೆರೆ: ಶಾಮನೂರು ಕುಟುಂಬದ ಸೇವೆ ಮಾಡಿಕೊಂಡಿದ್ದವರನ್ನು ತಂದು ದೂಡಾ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದೇ ಮಹಾಪ್ರಮಾದವಾಗಿದ್ದು, ನಾನು ದೂಡಾ ಅಧ್ಯಕ್ಷನಾಗಿದ್ದಾಗ ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿ ತಿಂಗಳ ಮೇಲಾದರೂ ಯಾಕೆ ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ದಾಖಲೆ ಬಹಿರಂಗಪಿಡಿಸಿಲ್ಲ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪ್ರಶ್ನಿಸಿದರು.

ನಿವೇಶನವನ್ನೇ ಪಡೆಯದಿದ್ದರೂ ನನ್ನ ಮೇಲೆ ಸುಳ್ಳು ಆರೋಪವನ್ನು ದಿನೇಶ ಶೆಟ್ಟಿ ಮಾಡಿದ್ದಾರೆ. ದಾಖಲೆಗಳೇ ಇಲ್ಲದೇ ಸುಳ್ಳು ಆರೋಪ ಮಾಡುವುದು, ಉಡಾಫೆಯಾಗಿ ಮಾತನಾಡುವುದು, ಪ್ರಶ್ನೆ ಮಾಡಿದರೆ ಓಡಿ ಹೋಗುವುದನ್ನು ಮೊದಲು ನಿಲ್ಲಿಸಬೇಕು. ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಬೇಕಿದ್ದರೆ ಆರೋಪ ಮಾಡಲಿ. ದಾಖಲೆಗಳೆ ಇಲ್ಲದೇ ಹೀಗೆಲ್ಲಾ ಆರೋಪ ಮಾಡುವವರು ಮೊದಲು ಸೂಕ್ತ ದಾಖಲೆ ಸಮೇತ ಆರೋಪ ಮಾಡಲಿ. ಇಲ್ಲವಾದರೆ ಸುಳ್ಳುಗಾರ ಅಂತಾ ಸಾಬೀತಾಗುತ್ತದೆ ಎಂದರು.