ಸಾರಾಂಶ
ದಾವಣಗೆರೆ : ರಾಜ್ಯದಲ್ಲಿ ಸುಮಾರು 50 ಸಾವಿರ ಶಿಕ್ಷಕರ ಕೊರತೆ ಇದ್ದು, ಆದಷ್ಟು ಬೇಗನೆ 25 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಗಳೂರು ತಾಲೂಕಿನ ಉಚ್ಚಂಗಿಪುರ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಂಗ್ ಇಲಾಖೆಯಿಂದ ವಿಪ ಸದಸ್ಯ ಎನ್.ರವಿಕುಮಾರ, ಸಂಸದರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಿದ ನೂತನ ಹೈಟೆಕ್ ಸರ್ಕಾರಿ ಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶೀಘ್ರ 25 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು. ತಾವು ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಕ್ಷೇತ್ರದಲ್ಲಿದ್ದ ಸಾಕಷ್ಟು ಸಮಸ್ಯೆಗಳನ್ನು ಒಂದು ಹಂತದಿಂದ ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಹಿಂದಿನ ಸರ್ಕಾರದಲ್ಲಿ 13 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ನೋಟಿಫಿಕೇಷನ್ ಹೊರಡಿಸಿದ್ದು, ನನ್ನ ಅವದಿಯಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದೇವೆ. ಇನ್ನೂ ಶಿಕ್ಷಕರ ಕೊರತೆ ಇದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.80ರ ಷ್ಟು ಶಿಕ್ಷಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಸರ್ಕಾರಿ ನೌಕರರ ಪೈಕಿ ಶೇ.37ರಷ್ಟು ನೌಕರರು ಶಿಕ್ಷಣ ಇಲಾಖೆಯವರಾಗಿದ್ದಾರೆ. 73 ಸಾವಿರ ಶಾಲೆಗಳು ಇಲಾಖೆ ವ್ಯಾಪ್ತಿಗೆ ಬರುತ್ತವೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 57 ಲಕ್ಷ ಸೇರಿದಂತೆ 1.08 ಕೋಟಿ ಮಕ್ಕಳು ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ 45 ಸಾವಿರ ಕೋಟಿ ರು., ಖಾಸಗಿ ಸಹಭಾಗಿತ್ವದಲ್ಲಿ 5 ಸಾವಿರ ಕೋಟಿ ರು. ಸೇರಿದಂತೆ ಸುಮಾರು 50 ಸಾವಿರ ಕೋಟಿ ರು.ಗಳನ್ನು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದೆ. ತಂದೆ, ತಾಯಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಜೊತೆಗೆ ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದರು.
ತಮ್ಮ ತಂದೆ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶಾಲೆಗಳಿಗೆ ಮಕ್ಕಳು ಬರುವ ಪರಿಸ್ಥಿತಿ ಇರಲಿಲ್ಲ. ಹಾಗಾಗಿ ಶಾಲೆಗೆ ಬರುವ ಮಕ್ಕಳಿಗೆ 1 ರು. ಶಿಷ್ಯವೇತನ ನೀಡುವ ಯೋಜನೆ ಜಾರಿಗೊಳಿಸಿದ್ದರು. ಅದನ್ನೇ ಎಸ್.ಎಂ.ಕೃಷ್ಣರವರ ಸರ್ಕಾರದಲ್ಲಿ ಬಿಸಿಯೂಟ ಯೋಜನೆಯಾಗಿ ಬದಲಾಯಿಸಲಾಯಿತು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬುದೇ ಇದರ ಉದ್ದೇಶ ಎಂದು ಹೇಳಿದರು.
ಮನುಷ್ಯನಿಗೆ ಶಿಕ್ಷಣ ಮುಖ್ಯವಾಗಿದೆ. ರಾಜಕಾರಣಿಗಳು ಹುಟ್ಟು ಹಾಕಿದ ಜಾತಿ, ಧರ್ಮಗಳಿಂದ ಆಗಿರುವ ಎಲ್ಲಾ ಸಮಸ್ಯೆ ಸರಿಪಡಿಸಲು ಹಾಗೂ ಸಂವಿಧಾನ ಉಳಿಸಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.
ಉಚ್ಚಂಗಿಪುರ ಶಾಲೆ ಅಭಿವೃದ್ಧಿಗೆ 25 ಲಕ್ಷ ರು. ಅನುದಾನ ಕೇಳಿದ್ದು, ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುದಾನ ನೀಡಲು ಅವಕಾಶ ಇದೆ. ಸಾಧ್ಯವಾದ ಮಟ್ಟಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತೇನೆ. ಇಲ್ಲಿ 7ನೇ ತರಗತಿವರೆಗೆ ಮಾತ್ರ ಇದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದಲೇ 8ನೇ ತರಗತಿ ಆರಂಭಿಸುವುದಾಗಿ ಈ ವೇದಿಕೆಯಿಂದಲೇ ಘೋಷಣೆ ಮಾಡುತ್ತಿದ್ದೇನೆ. ಮಕ್ಕಳ ದಾಖಲಾತಿ ಸಂಖ್ಯೆ ನೋಡಿಕೊಂಡು, ನಂತರದ ವರ್ಷಗಳಲ್ಲಿ 9, 10ನೇ ತರಗತಿ ಆರಂಭಿಸುವುದಾಗಿ ತಿಳಿಸಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಉಚ್ಚಂಗಿಪುರ ಮೂಲದವರೇ ಆದ ಎನ್.ರವಿಕುಮಾರ, ಎಂ.ವಿ.ಸುಂಕನೂರು, ಎಂ.ಚಿದಾನಂದಗೌಡ, ಕೆ.ಎಸ್.ನವೀನ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ದಿದ್ದಿಗೆ ಗ್ರಾಪಂ ಅಧ್ಯಕ್ಷೆ ಗುತ್ಯಮ್ಮ ಸಿದ್ದಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಡಿಡಿಪಿಐ ಜಿ.ಕೊಟ್ರೇಶ, ಡಿಡಿಪಿಯು ಎಸ್.ಜಿ.ಕರಿಸಿದ್ದಪ್ಪ, ಡಯಟ್ ಪ್ರಾಚಾರ್ಯರಾದ ಎಸ್.ಗೀತಾ, ಎಸ್‌ಡಿಎಂಸಿ ಅಧ್ಯಕ್ಷ ಪಿ.ಟಿ.ರಮೇಶ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ದಾನಿಗಳಾದ ಡಾ.ದಿನೇಶ, ಜೆ.ವಿ.ರಾವ್, ಗ್ರಾಮಸ್ಥರು, ಪಾಲಕರು, ಸಿಬ್ಬಂದಿ, ಮಕ್ಕಳು ಇದ್ದರು.