ಸಾರಾಂಶ
ಕೂಡ್ಲಿಗಿ ತಾಲೂಕಿನಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ
ಹಂಪಿ ವಿವಿಯಿಂದ ಸ್ಥಳೀಯ ಚರಿತ್ರೆ ಕುರಿತು ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಕೂಡ್ಲಿಗಿಕೂಡ್ಲಿಗಿ ತಾಲೂಕಿನಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್‌ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದಿಂದ ಆಯೋಜಿಸಿದ್ದ ಕೂಡ್ಲಿಗಿ ತಾಲೂಕಿನ ಸ್ಥಳೀಯ ಚರಿತ್ರೆ ವಿವಿಧ ಆಯಾಮಗಳು ಕುರಿತಾದ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೂಡ್ಲಿಗಿ ತಾಲೂಕಿನಲ್ಲಿ ಆದಿಮಾನವ ವಾಸಿಸುತ್ತಿದ್ದ ಶಿಲಾಯುಗ ಕಾಲದ, ಸಹಸ್ರಾರು ವರ್ಷಗಳ ಇತಿಹಾಸ ಹುದುಗಿದೆ. ಇದಕ್ಕೆ ಕುಮತಿ ಮತ್ತು ಹುಲಿಕುಂಟೆ ಗುಡೇಕೋಟೆ ಸುತ್ತಮುತ್ತ ದೊರೆತಿರುವ ಆದಿಮಾನವನ ಸಮಾಧಿ ಕಲ್ಲುಗಳು, ಗುಹೆಗಳೇ ಸಾಕ್ಷಿಯಾಗಿವೆ ಎಂದು ಹೇಳಿದರು.ಕೂಡ್ಲಿಗಿ ತಾಲೂಕಿನಲ್ಲಿ ಗುಡೇಕೋಟೆ, ಜರ್ಮಲಿ ಹಾಗೂ ಬೀರಲಗುಡ್ಡ (ವೀರನದುರ್ಗ) ಮೂರು ಪಾಳೇಗಾರರು ಆಳ್ವಿಕೆ ನಡೆಸಿದ್ದಾರೆ. ಪಾಳೇಗಾರರ ಇತಿಹಾಸದ ಜತೆಗೆ ತಾಲೂಕಿನಲ್ಲಿ ಬುಡಕಟ್ಟು ಸಮುದಾಯ ಜನತೆಯ ಅನೇಕ ಸಂಸ್ಕೃತಿಗಳು ಸಹ ಇತಿಹಾಸ ಹೇಳುತ್ತವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿರಬಹುದು. ಆದರೆ ಐತಿಹಾಸಿಕವಾಗಿ ಶ್ರೀಮಂತವಾಗಿದೆ. ತಾಲೂಕಿನ ಪ್ರತಿಯೊಬ್ಬರೂ, ಅದರಲ್ಲೂ ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಹಿರಿಯ ಸಂಶೋಧಕ ಆರ್.ಎಂ. ಷಡಕ್ಷರಯ್ಯ, ಮೊಗಳ್ಳಿ ಗಣೇಶ್ ಮುಂತಾದವರು ಉಪಸ್ಥಿತರಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಪ್ರಾಸ್ತಾವಿಕ ನುಡಿ ನುಡಿದರು. ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಕೂಡ್ಲಿಗಿ ರೈತ ಸಂಘದ ಮುಖಂಡರಾದ ದೇವರಮನೆ ಮಹೇಶ, ಸರ್ಕಾರಿ ಪಿಯು ಕಾಲೇಜು ಪ್ರಾಂಶಪಾಲರಾದ ಟಿ. ಕೊತ್ಲಮ್ಮ, ಸಿಪಿಐ ಕಾರ್ಯದರ್ಶಿ ಎಚ್. ವೀರಣ್ಣ, ಟಿ. ಓಂಕಾರಪ್ಪ ಉಪಸ್ಥಿತರಿದ್ದರು. ಅಮೃತ ಪ್ರಾರ್ಥಿಸಿದರು. ಕಾರ್ಯಕ್ರಮದ ಆನಂತರ ಕೂಡ್ಲಿಗಿ ತಾಲೂಕಿನ ಪುರಾತತ್ವ ನೆಲೆಗಳು ಮತ್ತು ಪ್ರಾಚೀನ ಸಂಸ್ಕೃತಿ ಹಾಗೂ ಕೂಡ್ಲಿಗಿ ಮಧ್ಯಕಾಲಿಕ ಮತ್ತು ಆಧುನಿಕ ಚರಿತ್ರೆ ಕುರಿತಾದ ವಿಚಾರಗೋಷ್ಠಿ ಮತ್ತು ಕೂಡ್ಲಿಗಿ ತಾಲೂಕಿನ ಸಾಂಸ್ಕೃತಿಕ ಚರಿತ್ರೆ ವಿವಿಧ ಆಯಾಮಗಳ ಕುರಿತಾಗಿ ವಿವಿಧ ಸಂಶೋಧಕರಿಂದ ಸಂವಾದ ನಡೆಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.