ನೆಲಮೂಲ ಸಂಸ್ಕೃತಿ ಉಳಿಸಿ ಬೆಳೆಸುವ ತುರ್ತಿದೆ: ಡಾ.ಎಂ.ಯು.ಲೋಕೇಶ್

| Published : Mar 02 2024, 01:50 AM IST

ನೆಲಮೂಲ ಸಂಸ್ಕೃತಿ ಉಳಿಸಿ ಬೆಳೆಸುವ ತುರ್ತಿದೆ: ಡಾ.ಎಂ.ಯು.ಲೋಕೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ನೆಲಮೂಲ ಸಂಸ್ಕೃತಿ ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯೋಜನಾಧಿಕಾರಿ ಡಾ.ಎಂ.ಯು.ಲೋಕೇಶ್ ಪ್ರತಿಪಾದಿಸಿದರು.

ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಯುವ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಬೇರೆ ಬೇರೆ ಮಾಧ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ನೆಲಮೂಲ ಸಂಸ್ಕೃತಿ ಪ್ರದರ್ಶಿಸಲು ವೇದಿಕೆಯ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಬೇಸರಿಸಿದರು.

ಯುವ ಜನತೆ, ಕನ್ನಡ ನೆಲಮೂಲ ಸಂಸ್ಕೃತಿಯ ಬಿತ್ತರಿಸಲು ಸಿಗುವ ವೇದಿಕೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಯುವ ಸೌರಭ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಯುವಕ-ಯುವತಿಯರು ಲಭ್ಯವಾಗುವ ಎಲ್ಲ ಅವಕಾಶಗಳಿಗೆ ದನಿಗೂಡಿಸಿ ಪ್ರತಿಭೆ ಅನಾವರಣಗೊಳಿಸಬೇಕು. ನಮ್ಮ ಸಂಸ್ಕೃತಿ ಬಿತ್ತರಗೊಳಿಸಲು ಯುವ ಸೌರಭ ಉತ್ತಮ ವೇದಿಕೆಯಾಗಿದೆ.ಪ್ರಪಂಚದಲ್ಲಿಯೇ ಭಾರತ ದೇಶ ಹೆಚ್ಚು ಯುವಶಕ್ತಿ ಹೊಂದಿದೆ. ಹಾಗೆಯೇ ಭಾರತದ ನೆಲಮೂಲ ಸಂಸ್ಕೃತಿಗೆ ಪೂರಕವಾಗಿ ಪ್ರತಿಯೊಂದು ರಾಜ್ಯದ, ಪ್ರತಿಯೊಂದು ಭಾಗದ ಸಂಸ್ಕೃತಿ ಬಿಂಬಿಸಲು ಕಲಾಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಕನ್ನಡ ಅಧ್ಯಯನ ವಿಭಾಗ ವಿಷಯ ಸಂಯೋಜಕ ಡಾ.ಹೆಚ್.ಜಿ.ವಿಜಯಕುಮಾರ್ ಮಾತನಾಡಿ, ಕಲಾ ತಂಡಗಳು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಯುವ ಜನತೆಯನ್ನು ಕಲೆಗಳ ಕಡೆಗೆ ಸೆಳೆಯುವ ಪ್ರಯತ್ನ ಆಶಾದಾಯಕವಾಗಿದ್ದು, ಯುವ ಜನತೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಯುವ ಸೌರಭ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಮನಸೂರೆಗೊಂಡಿತು. ಚಿತ್ರದುರ್ಗ ಮೈಲಾರಿ ಮತ್ತು ತಂಡದವರ ಜನಪದ ಗೀತೆಗಳು, ಹಿರಿಯೂರಿನ ನಾಗಶ್ರೀ ಭಟ್ ಅವರ ಸಮೂಹ ನೃತ್ಯ, ಚಿತ್ರದುರ್ಗದ ಅಫ್ರೀನ್ ಕೌಸರ್ ಮತ್ತು ಸಂಗಡಿಗರ ಸುಗಮ ಸಂಗೀತ, ಚಿತ್ರಹಳ್ಳಿಯ ಎನ್.ಹನುಮಂತ ಮತ್ತು ತಂಡದಿದವರ ನಾಸಿಕ್ ಡೋಲು, ಎಂ.ಕೆ.ಹಟ್ಟಿಯ ಕೆ.ಮನು ಮತ್ತು ತಂಡದವರ ಕಹಳೆ ವಾಹನ ಹಾಗೂ ಗೋನೂರಿನ ಆಕಾಶ್ ಮತ್ತು ತಂಡದವರಿಂದ ‘ಕೋಟು’ ಹಾಸ್ಯ ನಾಟಕ ಪ್ರದರ್ಶನ ನಡೆಯಿತು.

ಸಂವಿಧಾನ ಜಾಗೃತಿ ಜಾಥಾ

ದಾವಣಗೆರೆ ವಿಶ್ವವಿದ್ಯಾನಿಲಯ ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯದ್ವಾರದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಸಂಯೋಜನಾಧಿಕಾರಿ ಡಾ.ಎಂ.ಯು. ಲೋಕೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.ಅಧ್ಯಯನ ಕೇಂದ್ರದ ಪ್ರಾಧ್ಯಾ ಪಕರಾದ ರೂಪೇಶ್ ಕುಮಾರ್, ಡಾ.ಭೀಮಾಶಂಕರ್, ಡಾ.ಗಿರೀಶ್, ಬಿ.ಟಿ.ನಿವೇದಿತಾ, ಶೌಕತ್ ಅಲಿ, ಅರುಣ್ ಕುಮಾರ್, ಎನ್‍ಎಸ್‍ಎಸ್ ಅಧಿಕಾರಿ ಸುಂದರಂ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಇದ್ದರು.