ಸಾರಾಂಶ
ಮಂಗಳೂರು : ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿಯಾಗುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ಲಾಘಿಸಿದ್ದಾರೆ.
ನಗರದಲ್ಲಿ ಶನಿವಾರ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ-2025’ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಸಹಕಾರಿ ರಂಗದಿಂದ. ಈಗ ಉಪಮುಖ್ಯಮಂತ್ರಿಯಾಗಿ ಸಹಕಾರಿಯ ದೀಪ ಬೆಳಗಿದ್ದೇನೆ. ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯದಂಥ ಶಕ್ತಿ ಕ್ಷೇತ್ರ ಹೊಂದಿರುವ ಕರಾವಳಿ, ಧರ್ಮ ಮತ್ತು ಶಕ್ತಿ ಸಮ್ಮಿಳಿತದ ಪವಿತ್ರ ಭೂಮಿ. ಶೈಕ್ಷಣಿಕ- ಧಾರ್ಮಿಕ ಸ್ಥಳಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿಯಾಗುತ್ತಿದೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ’ ಎಂದು ಅವರು ಶ್ಲಾಘಿಸಿದರು.
ಮಹಿಳಾ ಸಬಲೀಕರಣದಿಂದ ಶಕ್ತಿ: ಸಹಕಾರಿ ತತ್ವಕ್ಕೆ ಮಹಿಳೆಯರು ಶಕ್ತಿ ತುಂಬುತ್ತಿದ್ದು, ಇದು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ. ನನಗೆ ಹೆಣ್ಣುಮಕ್ಕಳು ಮತ್ತು ಯುವಕರ ಮೇಲೆ ನಂಬಿಕೆ ಹೆಚ್ಚು. ಅವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಕೊಟ್ಟ ಅವಕಾಶದಲ್ಲಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ದುಡ್ಡು- ಬ್ಲಡ್ ಎರಡೂ ಸರ್ಕ್ಯುಲೆಟ್ ಆದಾಗ ಆರೋಗ್ಯ ಚೆನ್ನಾಗಿರುತ್ತದೆ. ಇದೇ ಸಹಕಾರಿ ತತ್ವದ ಮೂಲ ಎಂದರು.
ಹೆಣ್ಣುಮಕ್ಕಳ ತ್ಯಾಗ ಅರಿತವನು ಆ ಕುಟುಂಬದ ಶಕ್ತಿ ಬಲ್ಲ. ಲಕ್ಷಾಂತರ ತಾಯಂದಿರು ಮನೆಯ ಜ್ಯೋತಿ ಬೆಳಗಿ ದೇಶದ ಆಸ್ತಿಯಾಗಿ ಉಳಿದುಕೊಂಡಿದ್ದಾರೆ. ಇದೇ ನಾರಿಯ ಶಕ್ತಿ. ನಾವೆಲ್ಲಿಯೂ ತಂದೆ ಭಾಷೆ ಎನ್ನುವುದಿಲ್ಲ, ಮಾತೃಭಾಷೆ, ಮಾತೃಭೂಮಿ ಎನ್ನುತ್ತೇವೆ. ಅದು ಈ ನಾಡು ಸ್ತ್ರೀಯರನ್ನು ಕಾಣುವ ರೀತಿ ಎಂದು ನಾರಿ ಶಕ್ತಿಯನ್ನು ಡಿಕೆಶಿ ಶ್ಲಾಘಿಸಿದರು.
ಡಾ.ರಾಜೇಂದ್ರ ಕುಮಾರ್ ಅಂದಿನಿಂದ ಇವತ್ತಿನವರೆಗೂ ಕರಾವಳಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರಾಗಿ, ಯಾವುದೇ ಸ್ಥಾನ ಅಪೇಕ್ಷಿಸದೆ, ಜನರ- ತಾಯಂದಿರ ಸೇವೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಎಲ್ಲರಿಗೂ ಶಕ್ತಿ ಕೊಡಬೇಕೆಂದು ನವೋದಯ ಚಾರಿಟೇಬಲ್ ಟ್ರಸ್ಟ್ ರೂಪಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಅವರಿಗೆ ಅಭಿನಂದನೆ ಹೇಳುತ್ತೇನೆ ಎಂದರು.ಪ್ರಗತಿಗೆ ಪೂರಕ ಎಸ್‌ಎಚ್‌ಜಿ: ವೀರೇಂದ್ರ ಹೆಗ್ಗಡೆ‘ಸಂತೃಪ್ತಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೂ ಸ್ವಸಹಾಯ ಸಂಘಗಳು ಇವೆ. ಸಮಾಜದ ಪ್ರಗತಿಗೆ ಪೂರಕವಾಗಿ ಅವು ಕಾರ್ಯ ನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಎಸ್‌ಎಚ್‌ಜಿಯನ್ನು ರೂಪಿಸುತ್ತಿರುವ ಡಾ.ಎಂ.ಎನ್.ಆರ್. ಸಾಧನೆ ಶ್ಲಾಘನೀಯ ಎಂದರು.
ಸಮಾವೇಶದಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಹಕಾರ ಸಚಿವ ರಾಜಣ್ಣ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಮುರುಗೇಶ್ ನಿರಾಣಿ, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.