ಸಾರಾಂಶ
ಜಾನಪದರ ಆಷಾಢ ಮಾಸ ಸಂಭ್ರಮ-ಸಾಹಿತಿಗಳು, ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುಜಾನಪದ ಸಂಸ್ಕೃತಿಯಲ್ಲಿ ವಾಸ್ತವಿಕತೆ ಅಡಗಿದೆ. ಆಡಂಬರದ ಜೀವನವಿಲ್ಲ, ಸತ್ಯ, ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆ, ನಿಷ್ಕಲ್ಮಶವಾದ ಮನಸ್ಸು, ಪ್ರೀತಿ, ಅಹಿಂಸೆ, ತ್ಯಾಗ ಬಲಿದಾನವಿದೆ ಎಂದು ಜಾನಪದ ಸಾಹಿತಿ ಹೊಸೂರು ಪುಟ್ಟರಾಜು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಕಡೂರು ತಾಲೂಕು ಘಟಕದಿಂದ ತಾಲೂಕಿನ ಗಿರಿಯಾ ಪುರದಲ್ಲಿ ಶ್ರೀ ಮಲ್ಲಿಕಾಂಬ ಮಹಿಳಾ ಮಂಡಳಿಯಿಂದ ಜಾನಪದರ ಆಷಾಢ ಮಾಸ ಸಂಭ್ರಮ ಮತ್ತು ಸಾಹಿತಿಗಳು, ಕಲಾವಿದರಿಗೆ ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇವುಗಳಿಗೆ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳಿದ್ದು ಈ ಸಂಸ್ಕೃತಿಯನ್ನು ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಬಿತ್ತಬೇಕೆಂದರು. ಜಾನಪದ ಆಷಾಢ ಮಾಸ ಸಂಭ್ರಮ ನನಗೆ ಸಂತೋಷ ತಂದಿದೆ ಎಂದು ತಿಳಿಸಿದರು.ಮಾನವೀಯ ಮೌಲ್ಯಗಳನ್ನು ಬಿತ್ತುವ ಶಕ್ತಿ ಸಾಹಿತ್ಯ, ಕಲೆ, ಸಂಗೀತ, ಜಾನಪದ ಸಂಸ್ಕೃತಿಯಲ್ಲಿ ಅಡಗಿದೆ, ಜಾನಪದ ಸಂಸ್ಕೃತಿಯಲ್ಲಿ ಕೃಷಿಯ ಮಹತ್ವವಿದೆ. ಬೆವರಿಳಿಸಿ ದುಡಿಯುವ ಮಾರ್ಗದರ್ಶನವಿದೆ. ಹಾಗಾಗಿ ಜಾನಪದ ಮತ್ತು ಕೃಷಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಶಾಲಾ ಕಾಲೇಜುಗಳಲ್ಲಿ, ಸರ್ಕಾರ ಪಠ್ಯ ಪುಸ್ತಕಗಳಲ್ಲಿ ಈ ಆಚಾರ ವಿಚಾರಗಳನ್ನು ಬಿತ್ತಬೇಕಾಗಿದೆ. ಸತ್ವಯುತ ಆಹಾರ ಪದ್ಧತಿ, ಯೋಗ, ಧ್ಯಾನ ಮುಂತಾದ ಕ್ರಮಗಳಿಂದ ಆರೋಗ್ಯ ಪೂರ್ಣ ದೇಹ ಮತ್ತು ಮನಸ್ಸನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ನಮ್ಮ ಜನಪದರು ಮನದಟ್ಟು ಮಾಡಿದ್ದಾರೆ. ಹಾಗಾಗಿ ಜಾನಪದ ಸಂಸ್ಕೃತಿಯಿಂದ ಸದೃಢ ಮತ್ತು ಸ್ವಾಸ್ಥ್ಯಸಮಾಜವನ್ನು ಕಟ್ಟಲು ಸಾಧ್ಯ ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ, ಮನೆಯಲ್ಲಿ ಚಿಕ್ಕಂದಿನಿಂದಲೇ ಮಕ್ಕಳಿಗೆ, ನಮ್ಮ ಧಾರ್ಮಿಕ ಸಂಪ್ರದಾಯ, ಉಡುಗೆ ತೊಡುಗೆ, ಆಚಾರ,ವಿಚಾರ, ಧಾರ್ಮಿಕ ಸಹಿಷ್ಣುತೆ, ಪರಸ್ಪರ ಹೊಂದಾ ಣಿಕೆ ಪ್ರೀತಿ ವಿಶ್ವಾಸ ಕಲಿಸಿಕೊಡಲು ಉತ್ಸಾಹ ತೋರಬೇಕು. ಜಾನಪದ ಕಲೆಗಳಿಗೆ ಸಂಬಂಧಿಸಿದ ಲಾವಣಿ, ಗೀಗಿ ಪದ, ಸುಗ್ಗಿ ಹಾಡು, ತತ್ವಪದಗಳೊಂದಿಗೆ, ವೀರಗಾಸೆ, ಡೊಳ್ಳು, ಜಾನಪದ ನೃತ್ಯ, ಸುಗ್ಗಿ ಉತ್ಸವ, ಕೋಲಾಟ ಮುಂತಾದ ಮೌಲ್ಯಾಧಾರಿತ ಕಲೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದು ತಿಳಿಸಿದರು.ಕಜಾಪ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸುನಿತಾ ಮಾತನಾಡಿ, ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಇದನ್ನು ಮರೆತರೆ, ನಮ್ಮತನವನ್ನು ಕಳೆದುಕೊಂಡು ಅರ್ಥಹೀನ ಬದುಕಿನತ್ತ ಸಾಗುತ್ತೇವೆ. ಆದ್ದರಿಂದ ಯುವಕ ಯುವತಿಯರು, ವಿದ್ಯಾರ್ಥಿಗಳು ಜಾನಪದ ಕವಿಗಳು ಮತ್ತು ದಾರ್ಶನಿಕರ ಗ್ರಂಥಗಳನ್ನು ಓದಬೇಕೆಂದು ಕಿವಿಮಾತು ಹೇಳಿದರು.ಕಡೂರು ತಾಲೂಕು ಕಜಾಪ ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, ಜನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಉಳಿಸಲು ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಯುವ ಸಮೂಹ ಮುಂದೆ ಬರಬೇಕೆಂದು ಕರೆ ನೀಡಿದರು.ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತರಾದ ಜಿ.ಪಿ ಜಗದೀಶ್, ಡಾ. ಮಾಳೇನಳ್ಳಿ ಬಸಪ್ಪ, ಜಿ ಪಿ ಜಗದೀಶ್ ಮತ್ತಿತರ ಕಲಾವಿದರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಜಾಪ ಉಪಾಧ್ಯಕ್ಷ ಗೊಂಡೇದಹಳ್ಳಿ ತಿಪ್ಪೇಶ್, ಜಿ.ಪಿ. ಪ್ರಭುಕುಮಾರ್, ಮಲ್ಲಿಕಾಂಬ ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾಮಣಿ, ಚಿಕ್ಕನಲ್ಲೂರು ಜಯಣ್ಣ, ಈರಣ್ಣ, ಪುಟ್ಟಪ್ಪ,ನಾರಾಯಣಪುರ ರಾಜಣ್ಣ, ಭಾಗ್ಯ, ನಳಿನ, ಅನುಸೂಯಮ್ಮ,ಶೀಲಾ, ಪ್ರೇಮ,ಪಾರ್ವತಮ್ಮ ಇತರರು ಉಪಸ್ಥಿತರಿದ್ದರು.21ಕೆಕೆಡಿಯು2.
ಗಿರಿಯಾಪುರದಲ್ಲಿ ಶ್ರೀ ಮಲ್ಲಿಕಾಂಬ ಮಹಿಳಾ ಮಂಡಳಿಯಿಂದ ಜಾನಪದರ ಆಷಾಢ ಮಾಸ ಸಂಭ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.