ಗ್ರಾಮೀಣ ಜೀವನ ವಿಧಾನದಲ್ಲಿ ಕಲಿಯುವುದು ಬಹಳಷ್ಟಿದೆ-ಡಾ. ಸತ್ಯಸಾವಿತ್ರಿ

| Published : May 25 2024, 12:45 AM IST

ಸಾರಾಂಶ

ಇಲ್ಲಿ ಶಿಬಿರಾರ್ಥಿಗಳೇ ಹೆಚ್ಚು ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ. ಪಟ್ಟಣದ ಜೀವನವನ್ನೇ ಅನುಸರಿಸಿಕೊಂಡು ಬಂದಿದ್ದ ಹಲವು ವಿದ್ಯಾರ್ಥಿಗಳಿಗೆ ಈ ಗ್ರಾಮ ಜೀವನ ಅತ್ಯಂತ ಖುಷಿ ನೀಡಿದೆ ಎಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ವಿ.ಜಿ. ಸತ್ಯಸಾವಿತ್ರಿ ಹೇಳಿದರು.

ಹಾನಗಲ್ಲ: ಗ್ರಾಮೀಣ ಜೀವನ ವಿಧಾನದಲ್ಲಿ ಕಲಿಯುವುದು ಬಹಳಷ್ಟಿದೆ. ಇಲ್ಲಿನ ಯುವಕರು, ಹಿರಿಯರು ಅಧಿಕಾರಿಗಳ ಸಹಕಾರದಿಂದ ಈ ಶಿಬಿರ ಯಶಸ್ವಿಯಾಗಿದೆ. ಇಲ್ಲಿ ಶಿಬಿರಾರ್ಥಿಗಳೇ ಹೆಚ್ಚು ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ. ಪಟ್ಟಣದ ಜೀವನವನ್ನೇ ಅನುಸರಿಸಿಕೊಂಡು ಬಂದಿದ್ದ ಹಲವು ವಿದ್ಯಾರ್ಥಿಗಳಿಗೆ ಈ ಗ್ರಾಮ ಜೀವನ ಅತ್ಯಂತ ಖುಷಿ ನೀಡಿದೆ ಎಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ವಿ.ಜಿ. ಸತ್ಯಸಾವಿತ್ರಿ ಹೇಳಿದರು. ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಶುಕ್ರವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯ ಏರ್ಪಡಿಸಿದ ರಾಷ್ಟ್ರೀಯ ಸೇವಾ ಯೋಜನೆಗೆ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಡೀ ಶಿಬಿರ ಯಶಸ್ಸಿನಲ್ಲಿ ಗ್ರಾಮದ ಪ್ರತಿ ಕುಟುಂಬ ಜನರ ಸಹಕಾರವಿದೆ. ಶಿಬಿರಾರ್ಥಿಗಳು ಇಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿಸಿಕೊಳ್ಳುವ ದೊಡ್ಡ ಅವಕಾಶ ಸಾಧ್ಯವಾಯಿತು. ಗ್ರಾಮ ಬದುಕಿಗೆ ನಿಜಕ್ಕೂ ನಾವು ಕೃತಜ್ಞರಾಗಿರಬೇಕು ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಸೇವೆ ಸಹಬಾಳ್ವೆ ಸಾಮರಸ್ಯದ ಅರಿವನ್ನು ಯುವ ಪೀಳಿಗೆಗೆ ಅತ್ಯವಶ್ಯಕವಾಗಿ ಮೂಡಿಸುವ ಅಗತ್ಯ ಇಂದಿನದಾಗಿದ್ದು, ಸಮಾಜಮುಖಿ ಚಿಂತನೆ ದೇಶಪ್ರೇಮ ಎಲ್ಲರಲ್ಲೂ ಜಾಗೃತವಾಗಬೇಕು. ನಮ್ಮ ಮುಷ್ಟಿಯಲ್ಲಿ ಜಗತ್ತಿನ ಎಲ್ಲವನ್ನೂ ನೋಡುವ ಕಾಲದಲ್ಲಿದ್ದೇವೆ. ಆದರೆ ಒಳಿತು ಕೆಡಕಿನ ಅರಿವು ಬೇಕು. ಮನಸ್ಸು ವಿವೇಕ ಕಳೆದುಕೊಳ್ಳದಂತೆ ಲಕ್ಷ್ಯವಿರಬೇಕು. ಯುವಶಕ್ತಿ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳಲು ಕಲಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ದೇಶದ ಹಿತಕ್ಕಾಗಿ ಒಂದಷ್ಟು ಕಾಳಜಿ ಕೆಲಸವೂ ಯುವಕರಿಂದ ಆಗಬೇಕು. ಇಂದು ಹಳ್ಳಿ ಪಟ್ಟಣಗಳೆನ್ನದೆ ಎಲ್ಲೆಡೆ ಶಿಕ್ಷಣಕ್ಕೆ ಹಾತೊರೆಯುತ್ತಿದ್ದಾರೆ. ನಮ್ಮ ಗುರಿಯನ್ನು ಮುಟ್ಟುವ ಶಿಕ್ಷಣಕ್ಕೆ ನಮ್ಮ ಪರಿಶ್ರಮವಿರಬೇಕು. ರೈತರ ಮಕ್ಕಳು ಕೃಷಿಯನ್ನು ಸಮರ್ಥವಾಗಿ ಬಳಸಿಕೊಂಡರೆ ಒಳ್ಳೆಯ ಜೀವನ ಕಟ್ಟಿಕೊಳ್ಳಲು ಸಾಧ್ಯ. ಉದ್ಯೋಗವೆಂದರೆ ಕೇವಲ ಸರಕಾರಿ ಉದ್ಯೋಗವಲ್ಲ. ಖಾಸಗಿ ಉದ್ಯಮಗಳಲ್ಲಿ ಪ್ರತಿಭೆಗೆ ಒಳ್ಳೆಯ ಅವಕಾಶಗಳವೆ. ಅಂತಹ ಪ್ರಾಮಾಣಿಕ ಸೇವೆಗೆ ಯುವ ವಿದ್ಯಾರ್ಥಿಗಳು ಸಮರ್ಥ ಅಧ್ಯಯನ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಎನ್‌ಎಸ್‌ಎಸ್ ನಮಗೆ ಒಳ್ಳೆಯ ಅವಕಾಶ ನೀಡಿದೆ. ಅದರ ಅನುಭವ ಪರಿಣಾಮ ಒಳ್ಳೆಯದಾಗಿರಲಿ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಂ.ಎಚ್. ಹೊಳಿಯಣ್ಣನವರ, ಶಿಬಿರ ಯಶಸ್ವಿಯಾಗಿದೆ. ಇಲ್ಲಿ ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ. ಶಿಸ್ತು ಸಂಯಮ ರಾಷ್ಟ್ರಪ್ರೇಮ ಕಲಿಸುವುದು ಇಂತಹ ಶಿಬಿರದ ಉದ್ದೇಶ. ನಾಳೆಗಾಗಿ ಒಳ್ಳೆಯ ಪ್ರಜೆಗಳಾಗಲು ಇಂತಹ ಶಿಬಿರಗಳು ಸಹಕಾರಿ ಎಂದರು.ಶಿಬಿರದ ಸಹ ಶಿಬಿರಾಧಿಕಾರಿ ಪ್ರೊ.ಭೀಮಾವತಿ ಸೋಮನಕಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ ಅಗಸನಹಳ್ಳಿ, ಗ್ರಾಪಂ ಸದಸ್ಯೆ ಹುಸೇನಬಿ ಮುರಡಿ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಂ.ಎಸ್. ಬಡಿಗೇರ, ಉಪನ್ಯಾಸಕ ಸಾದಿಕ ಬಡಗಿ, ಸಿದ್ದಲಿಂಗೇಶ ಅಜಗುಂಡಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿವಾನಂದ ಕೊಪ್ಪದ ಅತಿಥಿಗಳಾಗಿದ್ದರು.