ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಹೊಸಪೇಟೆ ರೈತ ಸಂಘ ನ. ೨೯ರಂದು ಕರೆ ನೀಡಿದ ಹೊಸಪೇಟೆ ಬಂದ್‌ನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ರೈತ ಸಂಘದ ನಿರ್ದೇಶಕ ಉತ್ತಂಗಿ ಕೊಟ್ರೇಶ್ ಹಾಗೂ ಕಿಚಿಡಿ ಶ್ರೀನಿವಾಸ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ವಿಜಯನಗರ ಕಾಲುವೆಗಳ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಮೇ ೩೧ರ ವರೆಗೆ ನೀರು ಹರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಹೊಸಪೇಟೆ ಬಂದ್ ಕೈ ಬಿಡಲಾಗಿದೆ ಎಂದರು. ಮುಖಂಡರಾದ ಪರಶಪ್ಪ, ಮೈಲಾರಿ, ಯಲ್ಲಪ್ಪ ಇನ್ನಿತರರಿದ್ದರು.
ಹೊಸಪೇಟೆ ಬಂದ್ ವಾಪಸ್: ರೈತರಿಗೆ ಸಚಿವರ ಕೃತಜ್ಞತೆಪುರಾತನ ವಿಜಯನಗರ ಕಾಲುವೆ ಭಾಗದ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತುಂಗಭದ್ರಾ ಜಲಾಶಯದಿಂದ ವಿಜಯನಗರ ಜಿಲ್ಲೆಯ ನಾಲ್ಕು ಕಾಲುವೆಗಳಿಗೆ ಜನವರಿ ೧೬ರಿಂದ ಮೇ ೩೧ರ ವರೆಗೆ ನೀರು ಹರಿಸುವ ರೈತರ ಬೇಡಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಐಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ ಹಾಗೂ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಅವರ ಜತೆ ಚರ್ಚಿಸಿದ್ದೇನೆ.ರೈತ ಮುಖಂಡರ ಜತೆಯೂ ಖುದ್ದು ಮಾತನಾಡಿದ್ದೇನೆ. ರೈತರ ಹೋರಾಟ ವಿಚಾರದಲ್ಲಿ ಜಿಲ್ಲಾಧಿಕಾರಿ ದಿವಾಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಅವರ ಜತೆ ನಿರಂತರ ಸಂಪರ್ಕದಲ್ಲಿದ್ದು, ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇನೆ. ನಮ್ಮ ಮನವಿಗೆ ಸ್ಪಂದಿಸಿ ರೈತ ಮುಖಂಡರು ನ. ೨೯ರಂದು ಕರೆ ನೀಡಿದ್ದ ಹೊಸಪೇಟೆ ಬಂದ್ ವಾಪಸ್ ಪಡೆದಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ.