ಸಾರಾಂಶ
ಅದಿಕ ಉಷ್ಣಾಂಶದಲ್ಲಿ ಮಾಂಸ, ಮೊಟ್ಟೆ ಬೇಯಿಸಿ ಸೇವಿಸಲು ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆಹಕ್ಕಿ ಜ್ವರ(ಕೋಳಿ ಶೀತ ಜ್ವರ)ವು ಎಚ್4ಎನ್1 ವೈರಸ್‌ನಿಂದ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋಳಿ ಶೀತ ಜ್ವರಕ್ಕೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಕ್ಕಿ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಓಪಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಸಾಮಾನ್ಯವಾಗಿ ಶೀತಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಜಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ, ಕಣ್ಣಿನಿಂದ ಹೊರ ಬರುವ ಸ್ರವಿಕೆಯಿಂದ ಕಾಯಿಲೆ ಹರಡುವ ಸಂಭವ ಇದ್ದು, ಪಕ್ಷಿಗಳಿಗೆ ರೋಗವು ಹರಡುತ್ತದೆ. ಇದು ಬಳ್ಳಾರಿ ಹಾಗೂ ಚಿಕ್ಕಬುಳ್ಳಾಪುರ ಜಿಲ್ಲೆಯ ಜಿಲ್ಲೆಯ ಕುಕ್ಕಟ ಸಂವರ್ಧನಾ ಕೇಂದ್ರದಲ್ಲಿ ಸಾಕಾಣಿಕೆ ಮಾಡಿದ ಅಸಿಲ್ ಮತ್ತು ಕಾವೇರಿ ತಳಿಯ ಕೋಳಿಗಳಿಗೆ ಫೆ.23ರಂದು ಕೋಳಿ ಜ್ವರ ರೋಗದ ಲಕ್ಷಣ ಕಂಡು ಬಂದು, ಕೆಲ ಕೋಳಿಗಳು ಸಾವನ್ನಪ್ಪಿದ್ದವು ಎಂದು ಹೇಳಿದರು.
ಸತ್ತ ಕೋಳಿಗಳ ಪರೀಕ್ಷೆಗಾಗಿ ಭೂಪಾಲ್‌ನ ರಾಷ್ಟ್ರೀಯ ಹೈಸೆಕ್ಯೂರಿಟಿ ಪ್ರಾಣಿ ರೋಗಗಳ ಪ್ರಯೋಗಾಲಯಕ್ಕೆ ಕಳಿಸಿದ್ದು, ಸಂಸ್ಥೆಯು ಕೋಳಿ ಶೀತ ಜ್ವರದಿಂದಲೇ ಕೋಳಿಗಳು ಸತ್ತಿರುವುದನ್ನು ದೃಢೀಕರಿಸಿದೆ. ಹಾಗಾಗಿ ಬಳ್ಳಾರಿ, ಚಿಕ್ಕಬುಳ್ಳಾಪುರದಿಂದ ದಾವಣಗೆರೆಗೆ ಸಾಗಾಣಿಕೆಯಾಗುವ ಕೋಳಿಗಳನ್ನು ನಿರ್ಬಂಧಿಸಲು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಸಂಪೂರ್ಣ ನಿಗಾ ವಹಿಸಲು ತಿಳಿಸಿದರು.ದಾವಣಗೆರೆ ಜಿಲ್ಲೆಯಲ್ಲಿ 172 ಮಾಂಸದ ಕೋಳಿ ಫಾರಂಗಳಲ್ಲಿ 97 ಫಾರಂ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಸುಮಾರು 498824 ಬ್ರಾಯ್ಲರ್ ಕೋಳಿಗಳಿವೆ. 31 ಮೊಟ್ಟೆ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ 24,73,435 ಕೋಳಿಗಳಿವೆ. ಈ ಕೇಂದ್ರಗಳಲ್ಲಿ ಕೋಳಿಗಳು ಮರಣ ಹೊಂದಿದರೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಎಲ್ಲಾ ಫಾರಂಗಳ ಮಾಲೀಕರಿಗೆ ಸೂಚಿಸಲಾಗಿದೆ. ಯಾವುದೇ ಫಾರಂಗಳಲ್ಲಿ ಕೋಳಿಗಳು ಮರಣ ಹೊಂದಿದಲ್ಲಿ ತಕ್ಷಣ ಪಶು ಸಂಗೋಪನಾ ಇಲಾಖೆ ಗಮನಕ್ಕೆ ತಂದು, ಹಕ್ಕಿಜ್ವರ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಪಂ ಸಿಇಓ ಡಾ.ಸುರೇಶ ಬಿ.ಇಟ್ನಾಳ್ ಮಾತನಾಡಿ, ಜಿಲ್ಲೆಯಲಲಿ ಕೋಳಿ, ಬಾತುಕೋಲಿ, ವಲಸೆ ಬರುವ ಹಕ್ಕಿಗಳಲ್ಲಿ ಅಸಹಜ ಸಾವು ಉಂಟಾಗಿದ್ದರೆ ತಕ್ಷಣ ಸಮೀಪದ ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಬೇಕು. ಕೋಳಿ ಶೀತ ಜ್ವರದ ಬಗ್ಗೆ ಜನರಲಲಿ ಅರಿವು ಮೂಡಿಸಲು ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಳಿ ಸಾಕಾಣಿಕಾ ಕೇಂದ್ರಗಳ ಮಾಲೀಕರಿಗೆ ಕೋಳಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣೇ ಪಶು ಪಾಲನಾ ಇಲಾಖೆಗೆ ತಿಳಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ತಹಸೀಲ್ದಾರ್ ಅಶ್ವತ್ಥ, ಡಾ.ರಾಘವನ್, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮಹೇಶ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ಸಾರ್ವಜನಿಕರು ಮಾಂಸ, ಮೊಟ್ಟೆಗಳನ್ನು 70 ಡಿಗ್ರಿಗೂ ಅದಿಕ ಉಷ್ಣಾಂಶದಲ್ಲಿ ಕನಿಷ್ಟ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತವೆ. ಹಾಗಾಗಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವನೆ ಮಾಡಬೇಕು.
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ.ದಾವಣಗೆರೆ ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಲು ಸೂಚಿಸಲಾಗಿದೆ.
ಸುರೇಶ ಬಿ.ಇಟ್ನಾಳ, ಸಿಇಒ, ಜಿಪಂ.