ಹೆಣ್ಮಕ್ಳ ಕಂಡ್ರೆ ಬಸ್‌ ನಿಲ್ಸಲ್ಲ!

| Published : Sep 12 2025, 12:06 AM IST

ಹೆಣ್ಮಕ್ಳ ಕಂಡ್ರೆ ಬಸ್‌ ನಿಲ್ಸಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಎಮ್ಮಿಗನೂರು ಹಾಗೂ ನೆಲ್ಲೂಡಿ ಗ್ರಾಪಂ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ತೊಂದರೆಗಳು ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತಂತೆ ಗ್ರಾಪಂ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು.

ಎಮ್ಮಿಗನೂರು–ನೆಲ್ಲೂಡಿ ಗ್ರಾಪಂಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಭೆ

ಕನ್ನಡಪ್ರಭ ವಾರ್ತೆ ಕಂಪ್ಲಿ

ತಾಲೂಕಿನ ಎಮ್ಮಿಗನೂರು ಹಾಗೂ ನೆಲ್ಲೂಡಿ ಗ್ರಾಪಂ ವ್ಯಾಪ್ತಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ತೊಂದರೆಗಳು ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತಂತೆ ಗ್ರಾಪಂ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು.

ಸಭೆಯಲ್ಲಿ ಫಲಾನುಭವಿಗಳು ನೇರವಾಗಿ ಅಸಮಾಧಾನ ಹೊರಹಾಕಿದರು. ವಿಶೇಷವಾಗಿ ಮಹಿಳೆಯರು ಬಸ್ ಪ್ರಯಾಣದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಪ್ರಸ್ತಾಪಿಸಿದರು. “ಹೆಣ್ಣುಮಕ್ಕಳನ್ನು ರಸ್ತೆಯಲ್ಲಿ ನೋಡಿದರೂ ಸರ್ಕಾರಿ ಬಸ್‌ ನಿಲ್ಲಿಸುವುದಿಲ್ಲ. ಪಿಡಿಎಫ್ ಅಥವಾ ಜೆರಾಕ್ಸ್ ಆಧಾರ್ ತೋರಿಸಿದರೆ ಸಾಲದು, ಮೂಲ ಆಧಾರ್‌ ಕಾರ್ಡ್ ತೋರಿಸುವಂತೆ ನಿರ್ವಾಹಕರು ಹೇಳುತ್ತಾರೆ ಎಂದು ದೂರಿದರು. ಇದಲ್ಲದೆ ಬಳ್ಳಾರಿ ಕಡೆಗೆ ಸಕಾಲದಲ್ಲಿ ಬಸ್‌ ಸಿಗದಿರುವುದರಿಂದ ಗ್ರಾಮೀಣ ಜನತೆ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದರು.

ಕುರುಗೋಡು ಬಸ್ ಡಿಪೋ ಅಧಿಕಾರಿಗಳು ಸಭೆಗೆ ಉದ್ದೇಶಪೂರ್ವಕವಾಗಿ ಹಾಜರಾಗಿಲ್ಲವೆಂದು ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದರು. ಅವರನ್ನು ಸಭೆಗೆ ಕಡ್ಡಾಯವಾಗಿ ಕರೆಸುವಂತೆ ಒತ್ತಾಯಿಸಿದರು. ಇದೇ ವೇಳೆ ಹೊಸ ಪಡಿತರ ಚೀಟಿ ನೀಡುವಲ್ಲಿ ವಿಳಂಬ, ಈಗಾಗಲೇ ನೀಡಿರುವ ಹೊಸ ಪಡಿತರ ಚೀಟಿಗಳಿಗೂ ಯೋಜನೆಗಳ ಅನುಷ್ಠಾನ ಮಾಡದಿರುವ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದರು. ಕೆಲವಡೆ ವಿದ್ಯುತ್ ಸಮಸ್ಯೆ ಹೆಚ್ಚಿರುವುದರಿಂದ ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಮಾತನಾಡಿ, ಫಲಾನುಭವಿಗಳು ತಿಳಿಸಿದ ಎಲ್ಲ ಕುಂದು-ಕೊರತೆಗಳನ್ನು ಪರಿಶೀಲಿಸಿ ಶೀಘ್ರವೇ ಪರಿಹರಿಸಲಾಗುವುದು. ಪಂಚ ಗ್ಯಾರಂಟಿ ಯೋಜನೆಯ ಉದ್ದೇಶವೇ ಅರ್ಹ ಫಲಾನುಭವಿಗಳಿಗೆ ತಕ್ಕ ರೀತಿಯಲ್ಲಿ ಸೌಲಭ್ಯ ಒದಗಿಸುವುದು. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಇಒ ಆರ್.ಕೆ. ಶ್ರೀಕುಮಾರ್ ಅವರು, ಫಲಾನುಭವಿಗಳಿಗೆ ತ್ವರಿತವಾಗಿ ಮಾಹಿತಿ ತಲುಪುವಂತೆ ಪಂಚ ಗ್ಯಾರಂಟಿ ಯೋಜನೆಯ ಐದು ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಗ್ರಾಪಂ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಎಲ್ಲ ಪಿಡಿಒಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಎಚ್.ಜೆ. ಶಾರದಾ, ಜಯಮ್ಮ, ಪಿಡಿಒಗಳಾದ ತಾರು ಲಕ್ಷ್ಮಣ ನಾಯ್ಕ, ಹಾಲಹರವಿ ಶೇಷಗಿರಿ, ಪ್ರಮುಖರಾದ ಬಿ. ಸದಾಶಿವಪ್ಪ, ಎಚ್. ಮಂಜುನಾಥ, ಗ್ಯಾರಂಟಿ ಸಮಿತಿ ಸದಸ್ಯರಾದ ರಾಜಭಕ್ಷಿ, ರೇಣುಕಮ್ಮ, ರುದ್ರಮ್ಮ, ಶ್ರೀನಿವಾಸ, ವಿಜಯಲಕ್ಷ್ಮಿ, ಕರಿಯಪ್ಪ, ಫಕ್ಕೀರಪ್ಪ ಇತರರಿದ್ದರು.